ಜೀವಾವಧಿ ಶಿಕ್ಷೆಯ ಅಪರಾಧಿಗೆ ಇತರೆ ಅಪರಾಧ ಕೃತ್ಯದಲ್ಲಿ ಶಿಕ್ಷೆಯಾಗಿದ್ದರೆ ಎರಡು ಏಕಕಾಲಕ್ಕೆ ಜಾರಿ: ಹೈಕೋರ್ಟ್‌

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದರೋಡೆ ನಡೆಸುವಾಗ ದೈಹಿಕವಾಗಿ ಹಾನಿಯುಂಟು ಮಾಡಿದ್ದಕ್ಕೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದ ಬಗ್ಗೆ ಸ್ಪಷ್ಟತೆ ಕೋರಿದ್ದ ಅಪರಾಧಿಗಳು.
Karnataka High Court
Karnataka High Court

ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆಯಾಗಿದ್ದ ಸಂದರ್ಭದಲ್ಲಿ ಇತರೆ ಅಪರಾಧ ಕೃತ್ಯಗಳಲ್ಲಿಯೂ ಶಿಕ್ಷೆ ವಿಧಿಸಿದ್ದರೆ ಎರಡು ಸಹ ಏಕ ಕಾಲದಲ್ಲಿ ಜಾರಿಯಾಗಲಿದ್ದು, ಒಂದು ಶಿಕ್ಷೆ ಅವಧಿ ಮುಗಿದ ನಂತರ ಮತ್ತೊಂದು ಜಾರಿಗೊಳಿಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ರಾಮಚಂದ್ರ ರೆಡ್ಡಿ ಮತ್ತು ಕೆ ಆರ್ ಸುಕುಮಾರ್ ಎಂಬುವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದರೋಡೆ ನಡೆಸುವಾಗ ದೈಹಿಕವಾಗಿ ಹಾನಿಯುಂಟು ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎರಡೂ ಶಿಕ್ಷೆಗಳು ಏಕ ಕಾಲದಲ್ಲಿ ಅಥವಾ ಪ್ರತ್ಯೇಕವಾಗಿ ಅನುಭವಿಸಬೇಕೆ ಎಂಬ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಇದರಿಂದ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರು ಎರಡೂ ಶಿಕ್ಷೆಗಳ ಅವಧಿಯನ್ನು ಏಕ ಕಾಲಕ್ಕೆ ಅನುಭವಿಸಬೇಕು ಎಂದು ಸ್ಪಷ್ಟನೆ ನೀಡಿ ಆದೇಶಿಸಿತು.

ಆ ಮೂಲಕ 22 ವರ್ಷದಿಂದ ಜೈಲಿನಲ್ಲಿರುವ ಈ ಇಬ್ಬರು ಅಪರಾಧಿಗಳಿಗೆ, ಕ್ಷಮಾದಾನ ಅಥವಾ ಅವಧಿಪೂರ್ವ ಬಿಡುಗಡೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ.

ಪ್ರಕರಣದ ಹಿನ್ನೆಲೆ: ಕೊಲೆ, ಅಪರಾಧಿಕ ಒಳಸಂಚು ಹಾಗೂ ಸಾಕ್ಷ್ಯ ನಾಶದ ಆರೋಪದಡಿ ಬಾಗೇಪಲ್ಲಿಯ ರಾಮಚಂದ್ರಾರೆಡ್ಡಿ ಮತ್ತು ಚಿಂತಾಮಣಿಯ ಸುಕುಮಾರ್ ವಿರುದ್ಧ 2002ರ ಸೆಪ್ಟೆಂಬರ್‌ 3ರಂದು ಪ್ರಕರಣ ದಾಖಲಾಗಿತ್ತು. 2010ರ ನವೆಂಬರ್‌ 25ರಂದು ಈ ಪ್ರಕರಣಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯವು ಈ ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು. ದರೋಡೆಗೆ ಪ್ರಯತ್ನಿಸಿದಾಗ ಸ್ವಯಂ ಪ್ರೇರಿತವಾಗಿ ದೈಹಿಕವಾಗಿ ಹಾನಿಯುಂಟು ಮಾಡಿದ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿತ್ತು. ದಂಡ ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತ್ತು.

ಇದರಿಂದ ಹೈಕೋರ್ಟ್ ಮೆಟ್ಟಲೇರಿದ್ದ ಅರ್ಜಿದಾರರು, ಅಧೀನ ನ್ಯಾಯಾಲಯವು ತನ್ನ ಆದೇಶದಲ್ಲಿ ಜೀವಾವಧಿ ಶಿಕ್ಷೆ ಮತ್ತು 10 ವರ್ಷ ಶಿಕ್ಷೆಯ ಒಟ್ಟಿಗೆ ಅನುಭವಿಸಬೇಕೆ ಅಥವಾ ಒಂದು ಶಿಕ್ಷೆಯ ಅವಧಿ ಪೂರೈಸಿದ ನಂತರ ಮತ್ತೊಂದನ್ನು ಅನುಭವಿಸಬೇಕೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರಿಂದ 2002ರ ಸೆಪ್ಟೆಂಬರ್‌ 22ರಿಂದ ಜೈಲಿನಲ್ಲಿದ್ದು, ಒಟ್ಟು 22 ವರ್ಷ ಶಿಕ್ಷೆ ಪೂರೈಸಿರುವ ತಮಗೆ, ಕ್ಷಮದಾನ ಕೋರಲು ಮತ್ತು ಅವಧಿಪೂರ್ವ ಬಿಡುಗಡೆಗೆ ಕೋರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶಿಕ್ಷಾವಧಿ ಪೂರೈಕೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೋರಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್, ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಎರಡು ಪ್ರತ್ಯೇಕ ಅಪರಾಧಗಳ ಸಂಬಂಧ ಶಿಕ್ಷೆ ವಿಧಿಸಲಾಗಿದೆ. ವಿಧಿಸಿರುವ ಶಿಕ್ಷೆಯ ಪೈಕಿ ಜೀವಾವಧಿ ಶಿಕ್ಷೆಯೇ ಗರಿಷ್ಠ ಪ್ರಮಾಣದ್ದಾಗಿದೆ. ನಂತರ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸುಪ್ರಿಂ ಕೊರ್ಟ್ ಮಾರ್ಗಸೂಚಿಗಳ ಪ್ರಕಾರ ಒಂದು ವೇಳೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಇತರೆ ಪ್ರಕರಣಗಳಲ್ಲಿ ವಿಧಿಸಲಾದ ಶಿಕ್ಷೆಯು ಜೀವಾವಧಿ ಶಿಕ್ಷೆಯೊಂದಿಗೆ ಒಳಪಡುತ್ತದೆ. ಆ ಎರಡೂ ಶಿಕ್ಷೆಗಳು ಅಪರಾಧಿಗೆ ಏಕ ಕಾಲದಲ್ಲಿ ಜಾರಿಯಾಗಲಿದೆ. ಅದರಂತೆ ಈ ಪ್ರಕರಣದಲ್ಲಿ ಅಪರಾಧಿಗಳಿಗೆ ವಿಧಿಸಲಾದ ಎರಡು ಪ್ರತ್ಯೇಕ ಶಿಕ್ಷೆಗಳು ಸಹ ಏಕ ಕಾಲದಲ್ಲಿಯೇ ಜಾರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com