ಸಾಮಾನ್ಯ ಕಾನೂನಿನಡಿ ಬಂಧಿಸುವಾಗ ಮಾಹಿತಿ ನೀಡಿದರೆ ಸಾಕು, ಆಧಾರದ ಅಗತ್ಯವಿಲ್ಲ: ಹೈಕೋರ್ಟ್‌

ಹಾಲಿ ಪ್ರಕರಣದಲ್ಲಿ ಮಾಡಿರುವಂತೆ ಸಾಮಾನ್ಯ ಕಾನೂನಿನ ಅಡಿ ಬಂಧಿಸುವಾಗ ಆರೋಪಿಯ ಬಂಧನದ ಮಾಹಿತಿಯನ್ನು ಎಲ್ಲಾ ಪ್ರಕರಣಗಳಲ್ಲೂ ಎಲ್ಲಾ ಆರೋಪಿಗಳಿಗೂ ಸಿಆರ್‌ಪಿಸಿ ಸೆಕ್ಷನ್‌ 50ರ ಅನುಸಾರ ಅಗತ್ಯವಾಗಿ ತಿಳಿಸಬೇಕು ಎಂದಿರುವ ನ್ಯಾಯಾಲಯ.
Justice M Nagaprasanna
Justice M Nagaprasanna
Published on

“ದೇಶದಲ್ಲಿ 20 ಸಾವಿರ ಪೊಲೀಸ್‌ ಠಾಣೆಗಳಿದ್ದು, ಸುಪ್ರೀಂ ಕೋರ್ಟ್‌ ಅರವಿಂದ್‌ ಕೇಜ್ರಿವಾಲ್‌, ಪಂಕಜ್‌ ಬನ್ಸಲ್‌ ಮತ್ತು ಪ್ರಬೀರ್‌ ಪುರಕಾಯಸ್ಥ ಪ್ರಕರಣದಲ್ಲಿ ಹೇಳಿರುವಂತೆ ಯಾವುದೇ ಸಂಜ್ಞೇ ಅಪರಾಧದಲ್ಲಿ ಬಂಧನದ ಆಧಾರ ತಿಳಿಸಬೇಕು ಎಂದು ಆದೇಶಿಸಿದರೆ ಯಾವುದು ಬಂಧನಕ್ಕೆ ಆಧಾರವಾಗಬೇಕಿತ್ತು ಎಂಬ ವ್ಯಾಖ್ಯಾನದ ಚರ್ಚೆ ನಿಸ್ಸಂಶಯವಾಗಿ ತೆರೆದುಕೊಳ್ಳಲಿದೆ. ಅದು ಸಾಂವಿಧಾನಿಕ ನ್ಯಾಯಾಲಯಗಳ ಮುಂದೆ ಅಪಾರ ದಾವೆಗಳಿಗೆ ನಾಂದಿಯಾಗಲಿದೆ” ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಬಂಧನಕ್ಕೆ ಆಧಾರ ತಿಳಿಸಿಲ್ಲವಾದ್ದರಿಂದ ತಮ್ಮ ಬಂಧನವನ್ನು ಅಕ್ರಮ ಎಂದು ಆದೇಶಿಸುವಂತೆ ಕೋರಿ ಬೆಂಗಳೂರಿನ ಜಾನ್‌ ಮೋಸೆಸ್‌ ಡಿ ಅಲಿಯಾಸ್‌ ಮದನ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.

“ಜಾನ್‌ ಮೋಸೆಸ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುವ ಸಂಬಂಧ ಹೊರಡಿಸಿರುವ ರಿಮ್ಯಾಂಡ್‌ ಆದೇಶದಲ್ಲಿ ವಿಸ್ತೃತವಾಗಿ ವಿವರ ಒದಗಿಸಲಾಗಿದೆ. ಬಂಧನಕ್ಕೆ ಆಧಾರ ಮತ್ತು ರಿಮ್ಯಾಂಡ್‌ ಆದೇಶದಲ್ಲಿನ ಅಭಿಪ್ರಾಯವನ್ನು ಪರಿಗಣಿಸಿದರೆ ಅರ್ಜಿದಾರರ ಪರ ವಕೀಲರ ವಾದ ಒಪ್ಪುವಂಥದ್ದಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಹಾಲಿ ಪ್ರಕರಣದಲ್ಲಿ ಮಾಡಿರುವಂತೆ ಸಾಮಾನ್ಯ ಕಾನೂನಿನ ಅಡಿ ಬಂಧಿಸುವಾಗ ಆರೋಪಿಯ ಬಂಧನದ ಮಾಹಿತಿಯನ್ನು ಎಲ್ಲಾ ಪ್ರಕರಣಗಳಲ್ಲೂ ಎಲ್ಲಾ ಆರೋಪಿಗಳಿಗೂ ಸಿಆರ್‌ಪಿಸಿ ಸೆಕ್ಷನ್‌ 50ರ ಅನುಸಾರ ಅಗತ್ಯವಾಗಿ ತಿಳಿಸಬೇಕು. ಬಂಧನವು ಪಿಎಂಎಲ್‌ಎ ಅಥವಾ ಯುಎಪಿಎ ಅಡಿಯಾದರೆ ಅರವಿಂದ್‌ ಕೇಜ್ರಿವಾಲ್‌, ಪಂಕಜ್‌ ಬನ್ಸಲ್‌ ಮತ್ತು ಪ್ರಬೀರ್‌ ಪುರಕಾಯಸ್ಥ ಪ್ರಕರಣಗಳಲ್ಲಿನ ಸುಪ್ರೀಂ ಕೋರ್ಟ್‌ ಆದೇಶವು ನೇರವಾಗಿ ಅನ್ವಯಿಸುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಬಂಧನ ನೋಟಿಸ್‌ ಸಾಲುವುದಿಲ್ಲ. ಬಂಧನದ ಆಧಾರವನ್ನು ಅರ್ಜಿದಾರರಿಗೆ ತಿಳಿಸಬೇಕಿತ್ತು” ಎಂದರು.

ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಅರವಿಂದ್‌ ಕೇಜ್ರಿವಾಲ್‌, ಪಂಕಜ್‌ ಬನ್ಸಲ್‌ ಮತ್ತು ಪ್ರಬೀರ್‌ ಪುರಕಾಯಸ್ಥ ಪ್ರಕರಣಗಳು ಹಾಲಿ ಪ್ರಕರಣಕ್ಕೆ ಅನ್ವಯಿಸುವುದಿಲ್ಲ” ಎಂದಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್‌ ನಾಯ್ಕ್‌ ಅವರು “ಬಂಧನವಾಗಿರುವ ಮಾಹಿತಿ ತಿಳಿಸಿದರೆ ಸಾಕು ಬಂಧನದ ಆಧಾರ ತಿಳಿಸಬೇಕಿಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಅನ್ಯರ ಆಸ್ತಿ ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ, ಅವುಗಳನ್ನು ತಿರುಚಿ ನ್ಯಾಯಾಲಯವನ್ನು ವಂಚಿಸಿ, ಮೂಲ ಮಾಲೀಕರ ಆಸ್ತಿಗಳನ್ನು ಬಲವಂತವಾಗಿ ವಶಕ್ಕೆ ಪಡೆದ ಸಂಬಂಧ ಪಾತಕಿ ಜಾನ್‌ ಮೋಸೆಸ್‌ ಸೇರಿದಂತೆ 19 ಮಂದಿಯ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇಂಥದ್ದೇ ಹಲವು ಕೃತ್ಯಗಳಲ್ಲಿ ಜಾನ್‌ ಮತ್ತು ಆತನ ಸಹಚರರು ಎಸಗಿರುವುದರಿಂದ ಪ್ರಕರಣವನ್ನು ಸರ್ಕಾರವು ಸಿಐಡಿ ವಶಕ್ಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿಯು ಆತನ ವಿರುದ್ಧ ಕೋಕಾ ಕಾಯಿದೆ ಅಡಿ ಪ್ರಕರಣ ದಾಖಲಿಸಿದೆ. ಬೇರೊಂದು ಪ್ರಕರಣದಲ್ಲಿ ಜಾನ್‌ಗೆ ಜಾಮೀನು ದೊರೆಯುತ್ತಿದ್ದಂತೆ ಪೊಲೀಸರು ಬಾಡಿ ವಾರೆಂಟ್‌ ಪಡೆದು ಹಾಲಿ ಪ್ರಕರಣದಲ್ಲಿ ಬಂಧಿಸಿದ್ದರು. ಬಂಧನಕ್ಕೆ ಆಧಾರ ಒದಗಿಸಿದಿರುವುದು ಕಾನೂನುಬಾಹಿರ ಎಂದು ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

Attachment
PDF
John Moses Vs State of Karnataka
Preview
Kannada Bar & Bench
kannada.barandbench.com