ಕೋವಿಡ್: ಆದಾಯವಿಲ್ಲದ ವಕೀಲರಿಗೆ ಬಡ್ಡಿಯೇತರ ಸಾಲ ವರವೇ? ಸ್ವಯಂಪ್ರೇರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪರ್ಯಾಲೋಚನೆ

“ನೆರವಿನ ಕುರಿತು ನಾವು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದೇವೆ. ಆದರೆ, ಹೆಚ್ಚಿನ ಅನುದಾನ ವಕೀಲರ ಪರಿಷತ್ತಿನಿಂದ ಬರಬೇಕಲ್ಲವೇ?” ಸುಪ್ರೀಂ ಕೋರ್ಟ್ ಪ್ರಶ್ನೆ.
ಕೋವಿಡ್: ಆದಾಯವಿಲ್ಲದ ವಕೀಲರಿಗೆ ಬಡ್ಡಿಯೇತರ ಸಾಲ ವರವೇ? ಸ್ವಯಂಪ್ರೇರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪರ್ಯಾಲೋಚನೆ

ಕೋವಿಡ್ ಹಿನ್ನೆಲೆಯಲ್ಲಿ ವಕೀಲರಿಗೆ ಹಣಕಾಸು ನೆರವು ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ ಸುಪ್ರೀಂ ಕೋರ್ಟ್ ಹಣಕಾಸಿನ ನೆರವಿನ “ನೈಜ, ಅವಶ್ಯಕತೆ ಇರುವ, ದುರದೃಷ್ಟಶಾಲಿ” ವಕೀಲರನ್ನು ಪತ್ತೆಹಚ್ಚುವುದು ಹೇಗೆ ಎಂದು ಜಿಜ್ಞಾಸೆ ನಡೆಸಿತು.

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೇಂದ್ರವು ಆಕಸ್ಮಿಕ ನಿಧಿ ಸ್ಥಾಪಿಸಬೇಕು, ಇದರಿಂದ ಕಷ್ಟದಲ್ಲಿ ಸಿಲುಕಿರುವ ವಕೀಲರಿಗೆ ಬಡ್ಡಿಯೇತರ ಸಾಲ ನೀಡಬೇಕು ಎನ್ನುವ ಎಲ್ಲಾ ಹೈಕೋರ್ಟ್ ಗಳ ವಕೀಲರ ಪರಿಷತ್ತುಗಳ ಬೇಡಿಕೆಯನ್ನು ಗಮನಿಸಿತು.

“ಓರ್ವ ವಕೀಲರು ನಿಶ್ಚಿತ ಹಣವನ್ನು ವಕೀಲಿಕೆಯಿಂದ ಸಂಪಾದಿಸುತ್ತಿದ್ದು, ಸಾಂಕ್ರಾಮಿಕತೆಯ ಕಾರಣದಿಂದಾಗಿ ಅವರ ಸಂಪಾದನೆ ಶೂನ್ಯಕ್ಕೆ ಕುಸಿದಿದೆ ಎಂದರೆ ಆಗ ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಸಂಪಾದನೆಯನ್ನೇ ಮಾಡದ ವಕೀಲರಿಗೆ ಈ ನೆರವು ಆದಾಯದ ಮೂಲವಾಗಬಹುದೇ? ಸಾಂಕ್ರಾಮಿಕತೆ ಎನ್ನುವುದು ಅವರಿಗೆ ವರದಾನವಾಗಬಾರದು. ನಾವು ಜಾಗರೂಕರಾಗಿರಬೇಕು.”
ಸಿಜೆಐ ಎಸ್ ಎ ಬೊಬ್ಡೆ

"ಅಧಿಕಾರ ಸಂರಚನೆಯು" ನೈಜವಾದ, ಅವಶ್ಯಕತೆ ಇರುವ ವಕೀಲರನ್ನು ನೆರವಿನಿಂದ ಹೊರಗಿಡುವ ಸಾಧ್ಯತೆ ಇದೆ ಎಂದು ಪೀಠವು ಅಭಿಪ್ರಾಯಪಟ್ಟಿತು. ನೆರವಿಗೆ ಅರ್ಹರಾದ ವಕೀಲರನ್ನು ಪತ್ತೆಹಚ್ಚಲು ಹಿರಿಯ ವಕೀಲ ಶೇಖರ್ ನಾಫಡೆ ಅವರಿಗೆ ನ್ಯಾಯಾಲಯಕ್ಕೆ ಸಹಾಯ ಮಾಡುವಂತೆ ಸಿಜೆಐ ಬೊಬ್ಡೆ ತಿಳಿಸಿದರು. “ಸಹಾಯದ ಅವಶ್ಯಕತೆ ಇರುವ ಅರ್ಹ ವಕೀಲರನ್ನು ಪತ್ತೆ ಹಚ್ಚುವುದು ಅತ್ಯಂತ ಮುಖ್ಯ. ಈಗಿರುವ ಅಧಿಕಾರದ ಸಂರಚನೆಯಿಂದ ಅತ್ಯಂತ ಅವಶ್ಯಕತೆ ಇರುವ ವಕೀಲರಿಗೆ ನೆರವು ಸಿಗದೇ ಶಕ್ತಿವಂತರು ಅದನ್ನು ಕಬಳಿಸುತ್ತಾರೆ. ದುರದೃಷ್ಟವಂತರಿಗೆ ಸೌಲಭ್ಯದ ಲಾಭ ಸಿಗುವುದಿಲ್ಲ.” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದೇ ವೇಳೆ, ನತದೃಷ್ಟ ವಕೀಲರಿಗೆ ನೆರವು ನೀಡುವ ವಿಚಾರದಲ್ಲಿ ಸರ್ಕಾರಕ್ಕಿಂತಲೂ ವಕೀಲರ ಪರಿಷತ್ತುಗಳ ಜವಾಬ್ದಾರಿ ಹೆಚ್ಚಿರುವುದರ ಬಗ್ಗೆಯೂ ಪೀಠವು ಗಮನಸೆಳೆಯಿತು.

“ಈ ಎಲ್ಲಾ ಪರಿಷತ್ತುಗಳ ಪ್ರತಿಕ್ರಿಯೆಯು ಅಸಮರ್ಪಕವಾಗಿದ್ದು, ನೀವು ಸಮಾಜ ಮತ್ತು ಶ್ರೀಮಂತ ಉದ್ಯಮ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿದ್ದೀರಿ. ಕೋವಿಡ್‌ನಿಂದಾಗಿ ಅತ್ಯಂತ ಕಷ್ಟದ ಸಂದರ್ಭ ನಿರ್ಮಾಣವಾಗಿದೆ. ನಾವು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದೇವೆ. ಆದರೆ, ಹೆಚ್ಚಿನ ಅನುದಾನ ಬರಬೇಕಿರುವುದು ವಕೀಲರ ಪರಿಷತ್ತಿನಿಂದಲ್ಲವೇ? ಇದು ವಕೀಲರ ಪರಿಷತ್ತಿನ ಮೊದಲ ಜವಾಬ್ದಾರಿ ಎಂದು ನಮಗೆ ಅನಿಸುತ್ತದೆ. ಕೇಂದ್ರ ಸರ್ಕಾರವು ಎಲ್ಲ ಜನರ ಬದುಕನ್ನು ಸುಧಾರಿಸಲು ಹಣ ವೆಚ್ಚ ಮಾಡಬೇಕಿದೆ” ಎಂದಿತು.

ಕೆಲವು ರಾಜ್ಯಗಳಲ್ಲಿ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿದೆ. ಕಳೆದ ಎಂಟು ತಿಂಗಳಿಂದ ವಕೀಲರಿಗೆ ಸಹಾಯ ಮಾಡಲಾಗಿದೆ. ಈಗ ಅನುದಾನದದ ಕೊರತೆ ಉಂಟಾಗಿದೆ ಎಂದು ಹಿರಿಯ ವಕೀಲ ಅಜಿತ್ ಕುಮಾರ್ ವಾದಿಸಿದರು. ಈ ಸಂಬಂಧ ರಾಜ್ಯ ವಕೀಲರ ಪರಿಷತ್ತಿಗೆ ಕೆಲವು ಪ್ರಶ್ನೆಗಳನ್ನು ರವಾನಿಸಲಾಗಿದ್ದು, ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಎರಡು ವಾರಗಳ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿತು

ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ವಕೀಲರಿಗೆ ಬಡ್ಡಿಯೇತರ ಸಾಲ ನೀಡುವ ಕುರಿತು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿತ್ತು. ಈ ಸಂಬಂಧ ಎಲ್ಲಾ ಹೈಕೋರ್ಟ್‌ಗಳ ರೆಜಿಸ್ಟ್ರಾರ್‌ ಜನರಲ್ ಅವರಿಗೆ ನೋಟಿಸ್ ನೀಡಲಾಗಿತ್ತು.

ಪರಿಸ್ಥಿತಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡ ನ್ಯಾಯಾಲಯವು “ನಾವು ಹಿಂದೆಂದೂ ಕಂಡರಿಯದ ಪರಿಸ್ಥಿತಿಗೆ ಎದುರಾಗಿದ್ದು, ಅದಕ್ಕೆ ಅಸಾಮಾನ್ಯವಾದ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಸಾಂಕ್ರಾಮಿಕತೆಯು ಜನರಿಗೆ ವಿಶೇಷವಾಗಿ ವಕೀಲರಿಗೆ ಸಾಕಷ್ಟು ಸಮಸ್ಯೆ ಉಂಟು ಮಾಡಿದೆ. ವಕೀಲ ಸಮುದಾಯವು ವಕೀಲಿಕೆ ಹೊರತುಪಡಿಸಿ ಬೇರೆ ಮಾರ್ಗದ ಮೂಲಕ ಜೀವನೋಪಾಯ ಮಾಡುವಂತಿಲ್ಲ ಎಂಬ ಬಗ್ಗೆ ನಮಗೆ ತಿಳಿದಿದೆ. ನ್ಯಾಯಾಲಯಗಳನ್ನು ಮುಚ್ಚಿದ್ದರಿಂದ ಕಾನೂನು ವೃತ್ತಿಯಲ್ಲಿರುವ ಅಸಂಖ್ಯಾತರಿಗೆ ಸಮಸ್ಯೆಯಾಗಿದ್ದು, ಆದಾಯಕ್ಕೆ ಹೊಡೆತ ಬಿದ್ದಿದೆ. ಇದು ಕಠಿಣ ಸಂದರ್ಭ” ಎಂದು ಹೇಳಿದೆ.

“ಭೌತಿಕ ನ್ಯಾಯಾಲಯ ಆರಂಭಿಸುವಂತೆ ನಿರಂತರವಾಗಿ ಬೇಡಿಕೆ ಮಂಡಿಸಲಾಗುತ್ತಿದೆ. ಇದೊಂದು ಕಠಿಣವಾದ ಬೇಡಿಕೆಯಾಗಿದ್ದು, ಒಟ್ಟಾಗಿ ನ್ಯಾಯಾಲಯಕ್ಕೆ ಹಾಜರಾಗುವ ವಕೀಲರು ಮತ್ತು ನ್ಯಾಯಮೂರ್ತಿಗಳೂ ಸೇರಿದಂತೆ ಎಲ್ಲರ ಆರೋಗ್ಯವನ್ನೂ ಅಪಾಯಕ್ಕೆ ನೂಕಬೇಕಾಗುತ್ತದೆ… ತಕ್ಷಣ ನ್ಯಾಯಾಲಯದ ಮರು ಆರಂಭ ಮಾಡಬಾರದು ಎಂಬ ವೈದ್ಯಕೀಯ ಸಲಹೆ ಇದೆ. ಹಾಗೆಂದು ವಕೀಲರ ಜೀವನೋಪಾಯವನ್ನು ಮರೆಮಾಚಲಾಗದು..” ಎಂದು ನ್ಯಾಯಪೀಠ ಹೇಳಿದೆ.

ವಕೀಲರಿಗೆ ₹3 ಲಕ್ಷ ಸಾಲ ನೀಡಲು ಸರ್ಕಾರಕ್ಕೆ ಸೂಚಿಸಬೇಕು. ಸದರಿ ಸಾಲದ ಹಣವನ್ನು ನ್ಯಾಯಾಲಯದ ಕಲಾಪಗಳು ಪೂರ್ಣಪ್ರಮಾಣದಲ್ಲಿ ಆರಂಭವಾದ ಒಂದು ವರ್ಷದ ಬಳಿಕ ಸಮಂಜಸವಾದ ಕಂತುಗಳಲ್ಲಿ ಹಣ ಮರುಪಾವತಿ ಮಾಡಲು ಸೂಚಿಸಬೇಕು ಎಂದು ಕೋರಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಹಿರಿಯ ವಕೀಲ ಎಸ್ ಎನ್ ಭಟ್ ಅವರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ವಕೀಲರ ಸಮುದಾಯ ಸಮಸ್ಯೆಗೆ ಸಿಲುಕಿದ್ದು, ವಿವಿಧ ರಾಜ್ಯಗಳ ವಕೀಲರ ಪರಿಷತ್ತಿನಲ್ಲಿ ನೋಂದಣಿ ಮಾಡಿಕೊಂಡಿರುವ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ವಕೀಲರಿಗೆ ಆರ್ಥಿಕ ಸಹಾಯ ಮಾಡಲು ಸೂಚಿಸಬೇಕು ಎಂದೂ ಕೋರಲಾಗಿದೆ.

Also Read
ಅಗತ್ಯವಿರುವ ವಕೀಲರಿಗೆ ₹5 ಕೋಟಿ ಹಂಚಿಕೆಯ ಕೆಎಸ್‌ಬಿಸಿ ಯೋಜನೆ ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ದೇಶಾದ್ಯಂತ ಇರುವ ರಾಜ್ಯ ವಕೀಲರ ಪರಿಷತ್ತಿನಲ್ಲಿ ಒಟ್ಟಾರೆ 16 ಲಕ್ಷ ಮಂದಿ ನೋಂದಾಯಿತ ವಕೀಲರಿದ್ದಾರೆ. ಮೊದಲನೇ ತಲೆಮಾರಿನ ಬಹುಸಂಖ್ಯಾತ ವಕೀಲರು ಕೋವಿಡ್ ನಿಂದ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ವಿವಿಧ ನ್ಯಾಯಾಲಯಗಳು, ನ್ಯಾಯಾಧಿಕರಣ ಮತ್ತು ಅರೆ ನ್ಯಾಯಿಕ ಸಂಸ್ಥೆಗಳಲ್ಲಿ ಕಕ್ಷಿದಾರರನ್ನು ಪ್ರತಿನಿಧಿಸುವ ಮೂಲಕ ಮೊದಲನೇ ತಲೆಮಾರಿನ ವಕೀಲರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ದುಡಿಮೆ ಮಾಡಿಕೊಳ್ಳುತ್ತಿದ್ದರು. ಈ ವಕೀಲ ಸಮುದಾಯವು ತಮ್ಮನ್ನು ಕಾಪಾಡಿಕೊಳ್ಳಲು ಗಳಿಕೆಯಿಂದ ಹಣ ಉಳಿಸಿಕೊಂಡಿಲ್ಲ. ಇವರು ಜೀವನ ಸಾಗಿಸಲು ನ್ಯಾಯಾಲಯಗಳ ದೈನಂದಿನ ಕಾರ್ಯಚಟುವಟಿಕೆಯ ಮೇಲೆ ಅವಲಂಬಿತರಾಗಿದ್ದಾರೆ” ಎಂದು ಬಿಸಿಐ ಹೇಳಿದೆ.

Related Stories

No stories found.
Kannada Bar & Bench
kannada.barandbench.com