CLAT, Delhi High Court
CLAT, Delhi High Court

ಎಂಬಿಬಿಎಸ್‌, ಐಐಟಿಗೆ ಹಿಂದಿಯಲ್ಲಿ ಪ್ರವೇಶ ಪರೀಕ್ಷೆ ನಡೆಸುವುದಾದರೆ ಸಿಎಲ್‌ಎಟಿಗೆ ಯಾಕಾಗಬಾರದು? ಹೈಕೋರ್ಟ್‌ ಪ್ರಶ್ನೆ

ಸಿಎಲ್‌ಎಟಿ 2024 ಅನ್ನು ಇಂಗ್ಲಿಷ್‌ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಬೇಕು ಎಂದು ಕೋರಿ ವಿದ್ಯಾರ್ಥಿಯೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳು ಪ್ರವೇಶ ಪರೀಕ್ಷೆಗಳನ್ನು ಇಂಗ್ಲಿಷ್‌ ಜೊತೆಗೆ ಹಿಂದಿಯಲ್ಲಿಯೂ ನಡೆಸುತ್ತಿರಬೇಕಾದರೆ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯನ್ನು (ಸಿಎಲ್‌ಎಟಿ) ಏಕೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಹಿಂದಿಯಲ್ಲಿ ನಡೆಸಬಾರದು ಎಂದು ಈಚೆಗೆ ದೆಹಲಿ ಹೈಕೋರ್ಟ್‌ ಪ್ರಶ್ನಿಸಿದೆ.

ಸಿಎಲ್‌ಎಟಿಯನ್ನು ಇಂಗ್ಲಿಷ್‌ ಒಳಗೊಂಡು ಹಿಂದಿ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಮ್‌ ಪ್ರಸಾದ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಎಂಬಿಬಿಎಸ್‌, ಐಐಟಿ ಪ್ರವೇಶ ಪರೀಕ್ಷೆಗಳನ್ನು ಹಿಂದಿಯಲ್ಲಿ ನಡೆಸಬಹುದಾದರೆ ಸಿಎಲ್‌ಎಟಿ ಪರೀಕ್ಷೆಯನ್ನು ಅದೇ ರೀತಿಯಲ್ಲಿ ಏಕೆ ನಡೆಸಲಾಗದು” ಎಂದು ಪೀಠವು ಪ್ರಶ್ನಿಸಿತು.

ಎನ್‌ಎಲ್‌ಯು ಪ್ರತಿನಿಧಿಸಿದ್ದ ವಕೀಲರು ಈ ಸಂಬಂಧ ಸಮಿತಿ ರಚಿಸಲಾಗಿದ್ದು, ಅದು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು. ಈ ಸಂಬಂಧ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿದ ಪೀಠವು ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com