ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವರ್ಷದಲ್ಲಿ ಗಣನೀಯ ಪ್ರಗತಿಯಾಗದಿದ್ದರೆ ದರ್ಶನ್‌ ಜಾಮೀನು ಕೋರಬಹುದು: ಸುಪ್ರೀಂ

“ಜಾಮೀನು ಮಂಜೂರು ಮಾಡಲು ಎಷ್ಟು ಸಮಯ ಕಳೆದು ಹೋಗಿದೆ ಎಂಬುದನ್ನು ಪರಿಗಣಿಸಲಾಗದು. ವಿಚಾರಣೆಯು ವೇಗವಾಗಿ ನಡೆಯುವುದನ್ನು ಪರಿಗಣಿಸಲಾಗುವುದು. ದರ್ಶನ್‌ಗೆ ಜೈಲು ಕೈಪಿಡಿಯ ಅನ್ವಯ ಎಲ್ಲಾ ಸೌಲಭ್ಯ ಒದಗಿಸಬೇಕು” ಎಂದ ನ್ಯಾಯಾಲಯ.
Darshan and Supreme Court
Darshan and Supreme Court
Published on

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮುಂದಿನ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಕಾಣದಿದ್ದರೆ ನಟ ದರ್ಶನ್‌ ಅವರ ಜಾಮೀನು ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶಿಸಿದೆ. ಇದು ದರ್ಶನ್‌ರಲ್ಲಿ ಕೊಂಚ ನಿರಾಳಭಾವ ಉಂಟು ಮಾಡುವ ಸಾಧ್ಯತೆ ಇದೆ.

ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದರಿಂದ ಜಾಮೀನು ಮಂಜೂರು ಮಾಡುವಂತೆ ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ವಿಜಯ್‌ ಬಿಷ್ಣೋಯ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Justices JB Pardiwala and Vijay Bishnoi
Justices JB Pardiwala and Vijay Bishnoi

“ಪ್ರಕರಣದಲ್ಲಿ ಪ್ರಮುಖ 60 ಸಾಕ್ಷಿಗಳ ವಿಚಾರಣೆ ಮುಂದಿನ ಒಂದು ವರ್ಷದಲ್ಲಿ ಮುಗಿಯುವುದನ್ನು ಖಾತರಿಪಡಿಸಬೇಕು. ಈ ನಿಟ್ಟಿನಲ್ಲಿ ವಿಚಾರಣಾಧೀನ ನ್ಯಾಯಾಲಯವು ದಿನಂಪ್ರತಿ ಸಾಕ್ಷಿಗಳ ವಿಚಾರಣೆ ನಡೆಸಬಹುದು. ವಿಚಾರಣೆಯಲ್ಲಿ ಗಣನೀಯ ಪ್ರಗತಿಯಾಗದಿದ್ದರೆ ದರ್ಶನ್‌ ಜಾಮೀನು ಕೋರಬಹುದು” ಎಂದು ನ್ಯಾಯಾಲಯ ಆದೇಶಿಸಿದೆ.

ಕಳೆದ ವಿಚಾರಣೆಯಲ್ಲಿ ದರ್ಶನ್‌ಗೆ ಜೈಲಿನಲ್ಲಿ ಸೌಲಭ್ಯ ಕಲ್ಪಿಸುತ್ತಿರುವುದು ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣದ ಪ್ರಗತಿಯ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ವಿಚಾರಣಾಧೀನ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು.

ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ರಾಜ್ಯ ಸರ್ಕಾರವು 272 ಸಾಕ್ಷಿಗಳ ವಿಚಾರಣೆ ನಡೆಸಲು ಬಯಸಿದೆ. ದರ್ಶನ್‌ ಜಾಮೀನು ರದ್ದುಗೊಂಡು ಏಳು ತಿಂಗಳಾಗಿದ್ದು, 10 ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ದರ್ಶನ್‌ರನ್ನು ಕ್ವಾರಂಟೈನ್‌ ಸೆಲ್‌ನಲ್ಲಿ ಇಡಲಾಗಿದ್ದು, ಅನ್ಯ ಕೈದಿಗಳ ಜೊತೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಯಾವುದೇ ಬೆಳವಣಿಗೆಯಾಗದಿದ್ದರೆ ಜಾಮೀನು ನೀಡುವುದನ್ನು ಪರಿಗಣಿಸಬೇಕು” ಎಂದರು.

ಇದಕ್ಕೆ ಪೀಠವು “ಜಾಮೀನು ಮಂಜೂರು ಮಾಡಲು ಎಷ್ಟು ಸಮಯ ಕಳೆದು ಹೋಗಿದೆ ಎಂಬುದನ್ನು ಪರಿಗಣಿಸಲಾಗದು. ವಿಚಾರಣೆಯು ವೇಗವಾಗಿ ನಡೆಯುವುದನ್ನು ಪರಿಗಣಿಸಲಾಗುವುದು. ದರ್ಶನ್‌ಗೆ ಜೈಲು ಕೈಪಿಡಿಯ ಅನ್ವಯ ಎಲ್ಲಾ ಸೌಲಭ್ಯ ಒದಗಿಸಬೇಕು” ಎಂದು ಆದೇಶಿಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು “ಕೋವಿಡ್‌ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಸೆಲ್‌ನಲ್ಲಿ ದರ್ಶನ್‌ರನ್ನು ಇಡಲಾಗಿದೆ. ಇತರರ ಜೊತೆ ದರ್ಶನ್‌ ಮಾತನಾಡುತ್ತಿರುವ ಚಿತ್ರಗಳು ತಮ್ಮ ಬಳಿ ಇವೆ” ಎಂದರು.

ಇದಕ್ಕೆ ಪೀಠವು “ವಿಚಾರಣೆ ಏಕೆ ವಿಳಂಬವಾಗುತ್ತಿದೆ” ಎಂದಿತು. ಇದಕ್ಕೆ ಲೂಥ್ರಾ ಅವರು “ಒಂದು ವರ್ಷದಲ್ಲಿ 60 ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲು ಸರ್ಕಾರ ನಿರ್ಧರಿಸಿದೆ” ಎಂದರು. ಇದಕ್ಕೆ ಪೀಠವು “ಸಾಕ್ಷಿಗಳ ವಿಚಾರಣೆ ದ್ವಿಗುಣಗೊಳಿಸಬಾರದು” ಎಂದಿತು.

ಆಗ ರೋಹಟ್ಗಿ ಅವರು “ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಮತ್ತೊಂದು ಪೀಠದ ಉಸ್ತುವಾರಿಯಾಗಿರುವುದರಿಂದ ವಿಚಾರಣೆ ವಿಳಂಬವಾಗುತ್ತಿದೆ” ಎಂದರು. ಇದಕ್ಕೆ ಲೂಥ್ರಾ ಅವರು “ಪ್ರಮುಖ ಸಾಕ್ಷಿಯ ವಿಚಾರಣೆಯನ್ನು ಪ್ರಾಸಿಕ್ಯೂಷನ್‌ ಒಂದೇ ದಿನದಲ್ಲಿ ಮುಗಿಸಿದೆ. ಆರೋಪಿಗಳ ಪರ ವಕೀಲರು ವಿಚಾರಣೆಯನ್ನು ಐದಾರು ದಿನ ಎಳೆಯುತ್ತಿದ್ದಾರೆ” ಎಂದರು.

ಇದನ್ನು ಪರಿಗಣಿಸಿದ ಪೀಠವು “ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಾಣದಿದ್ದರೆ ಒಂದು ವರ್ಷದ ಬಳಿಕ ದರ್ಶನ್‌ ಜಾಮೀನು ಅರ್ಜಿ ಪರಿಗಣಿಸಲಾಗುವುದು. 2025ರ ನವೆಂಬರ್‌ 3ರಂದು ಆರೋಪ ನಿಗದಿ ಮಾಡಲಾಗಿದ್ದು, ಕಳೆದ ಏಳು ತಿಂಗಳಲ್ಲಿ ಪ್ರಾಸಿಕ್ಯೂಷನ್‌ ಹತ್ತು ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಿದೆ. 60 ಪ್ರಮುಖ ಸಾಕ್ಷಿಗಳನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣಾಧೀನ ನ್ಯಾಯಾಲಯದ ವರದಿಯಲ್ಲಿ ವಿವರಿಸಲಾಗಿದೆ. ಆರೋಪ ಪಟ್ಟಿಯಲ್ಲಿ ಒಟ್ಟಾರೆ 272 ಸಾಕ್ಷಿಗಳಿವೆ“ಎಂದು ದಾಖಲಿಸಿದೆ.

“ವಿಚಾರಣೆಯು ಅತ್ಯಂತ ನಿಧಾನಗತಿಯಿಂದ ನಡೆಯುತ್ತಿದ್ದು, ಪಾಟೀ ಸವಾಲಿಗೆ ಪ್ರತಿವಾದಿಗಳ ಪರ ವಕೀಲರು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ನಿಜವಾಗಿದ್ದರೂ 60 ಸಾಕ್ಷಿಗಳ ವಿಚಾರಣೆ ನಡೆಸಲು ಗಣನೀಯ ಸಮಯ ತೆಗೆದುಕೊಳ್ಳಲಿದೆ. ಈ ನೆಲೆಯಲ್ಲಿ ಪ್ರತಿದಿನ ಸಾಕ್ಷಿಗಳ ವಿಚಾರಣೆ ನಡೆಸಬಹುದೇ ಎಂಬುದನ್ನು ವಿಚಾರಣಾಧೀನ ನ್ಯಾಯಾಲಯ ನಿರ್ಧರಿಸಬೇಕು. ಕ್ಷುಲ್ಲಕ ಕಾರಣಗಳಿಗೆ ವಿಚಾರಣೆ ಮುಂದೂಡಬಾರದು” ಎಂದು ನ್ಯಾಯಾಲಯ ಹೇಳಿದೆ.

“ಒಂದು ವರ್ಷದಲ್ಲಿ ನಡೆಯುವ ವಿಚಾರಣೆಯ ಗತಿಯನ್ನು ಪರಿಶೀಲಿಸಲಾಗುವುದು. ವರ್ಷದ ಕೊನೆಯಲ್ಲಿ ವಿಚಾರಣೆಯಲ್ಲಿ ಗಣನೀಯ ಬೆಳವಣಿಗೆ ಕಾಣದಿದ್ದರೆ ಪ್ರಕರಣವನ್ನು ಪರಿಗಣಿಸಲಾಗುವುದು” ಎಂದು ಪೀಠ ಆದೇಶಿಸಿದೆ.

“ಜೈಲು ಕೈಪಿಡಿಯ ಅನ್ವಯ ವಿಚಾರಣಾಧೀನ ಕೈದಿಗೆ ಲಭ್ಯ ಇರುವ ಎಲ್ಲಾ ಸೌಲಭ್ಯಗಳನ್ನು ದರ್ಶನ್‌ಗೆ ಒದಗಿಸಬೇಕು. ವಿಚಾರಣೆಯಲ್ಲಿ ಗಣನೀಯ ಪ್ರಗತಿಯಾಗದಿದ್ದರೆ ದರ್ಶನ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ವಿಚಾರಣಾಧೀನ ನ್ಯಾಯಾಧೀಶರು ಹೆಚ್ಚುವರಿ ಜವಾಬ್ದಾರಿ ನಿಭಾಯಿಸುತ್ತಿರುವುದನ್ನು ಆಡಳಿತಾತ್ಮಕ ದೃಷ್ಟಿಯಿಂದ ಹೈಕೋರ್ಟ್‌ ಪರಿಶೀಲಿಸಬೇಕು. ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಲು ಪ್ರಾಸಿಕ್ಯೂಷನ್‌ ಕೆಲಸ ಮಾಡಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿ, ಅರ್ಜಿ ಇತ್ಯರ್ಥಪಡಿಸಿದೆ.

Kannada Bar & Bench
kannada.barandbench.com