
“ಮೈಸೂರಿನ ಚಾಮುಂಡೇಶ್ವರಿ ದೇವಿಯ ಮೇಲೆ ಹಾಕಿದ್ದ ಸೀರೆಗಳನ್ನು ಶ್ರೀ ಚಾಮುಂಡೇಶ್ವರಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ ಜೆ ರೂಪಾ ಅವರು ಮಾರಾಟ ಮಾಡಿದ್ದರೆ ಅದು ಕ್ಷಮಿಸಲಾರದ ಅಪರಾಧ” ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧದ ತನಿಖೆಗೆ ಮಂಗಳವಾರ ತಡೆಯಾಜ್ಞೆ ವಿಧಿಸಿದೆ.
ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಸ್ನೇಹಮಯಿ ಕೃಷ್ಣ ಅವರು ಏರುಧ್ವನಿಯಲ್ಲಿ ಮಾತನಾಡಿದ್ದು, ಪೊಲೀಸರ ಸಮ್ಮುಖದಲ್ಲಿ ರೂಪಾ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಸಂಪೂರ್ಣ ಅಸಂಭವನೀಯ. ರೂಪಾ ವಿರುದ್ಧದ ದಾಖಲಿಸಿರುವ ಪ್ರಕರಣ ಸರಿಯಾಗಿದ್ದರೆ ತನಿಖೆ ಅಗತ್ಯವಾಗಿದೆ. ರೂಪಾ ಅವರು ದೇವರ ಮೇಲೆ ಹಾಕಿರುವ ಸೀರೆಗಳನ್ನು ಮಾರಾಟ ಮಾಡಿದ್ದರೆ ಅದು ಕ್ಷಮಿಸಲಾರದ ಅಪರಾಧ. ಹೀಗಾಗಿ, ಸ್ನೇಹಮಯಿ ಕೃಷ್ಣ ವಿರುದ್ಧದ ತನಿಖೆಗೆ ತಡೆ ವಿಧಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಡಿಸೆಂಬರ್ 12ರಂದು ರೂಪಾ ಅವರನ್ನು ಸ್ನೇಹಮಯಿ ಕೃಷ್ಣ ಏರುಧ್ವನಿಯಲ್ಲಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎರಡು ದಿನಗಳ ಬಳಿಕ ಪ್ರಕರಣ ದಾಖಲಾಗಿದೆ. ಚಾಮುಂಡೇಶ್ವರಿಗೆ ನೀಡಲಾದ ಸೀರೆಗಳನ್ನು ಮಾರಾಟ ಮಾಡಲಾಗಿದೆ ಎಂದು ಕೃಷ್ಣ ಆರೋಪಿಸಿದ್ದರು. ಇದು ಬಹುದಿನಗಳಿಂದ ನಡೆಯುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಮಾರಾಟ ಮಾಡಲಾಗಿದೆ. ಇದೆಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ, ಸ್ನೇಹಮಯಿ ಕೃಷ್ಣ ಅವರು ಏರುಧ್ವನಿಯಲ್ಲಿ ಮಾತನಾಡಿದ್ದು, ಪೊಲೀಸರ ಸಮ್ಮುಖದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ರೂಪಾ ಅವರು ದೂರು ನೀಡಿದ್ದಾರೆ” ಎಂದರು.
ಈ ಮಧ್ಯೆ ಪೀಠವು “ಚಾಮುಂಡೇಶ್ವರಿ ದೇವರಿಗೆ ಹಾಕಿರುವ ಸೀರೆಯನ್ನು ಬಿಡುವುದಿಲ್ಲ ಎಂದರೆ ಹೇಗೆ? ಎಲ್ಲವೂ ಉದ್ಯಮವಾಗಿದೆ. ಅವರು ಅಲ್ಲಿ ಸರ್ಕಾರಿ ಅಧಿಕಾರಿ, ಕಾರ್ಯದರ್ಶಿ ಹೀಗೆ ಮಾಡುವುದೇ? ಎಂದು ಮೌಖಿಕವಾಗಿ ಪ್ರಶ್ನಿಸಿತು.
ಪ್ರಕರಣದ ಹಿನ್ನೆಲೆ: 2024ರ ಡಿಸೆಂಬರ್ 12ರಂದು ಸ್ನೇಹಮಯಿ ಕೃಷ್ಣ ಅವರು ಏಕಾಏಕಿ ತನ್ನ ಕೊಠಡಿಗೆ ಅನುಮತಿ ಇಲ್ಲದೇ ನುಗ್ಗಿ ಬಂದಿದ್ದರು. ಈ ಕುರಿತು ಪ್ರಶ್ನಿಸಿದ್ದೆ. ಇದಕ್ಕೆ ಕೃಷ್ಣ ಅವರು ಏರುಧ್ವನಿಯಲ್ಲಿ ನಿನಗೆ ಪಾಠ ಕಲಿಸದೇ ಬಿಡುವುದಿಲ್ಲ. ಮುಖ್ಯಮಂತ್ರಿ ವಿರುದ್ಧವೇ ನಾನು ದೂರು ನೀಡಿದ್ದೇನೆ. ನಿನಗೆ ತೊಂದರೆ ಕೊಡುವುದು ನನಗೆ ದೊಡ್ಡ ವಿಚಾರವಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಆಗ ಕೃಷ್ಣಗೆ ತಾವು ದೂರು ನೀಡಿದರೆ ತಾನು ಮಾಹಿತಿಯೊಂದಿಗೆ ಬರುತ್ತೇನೆ ಎಂದು ಹೇಳಿದ್ದನ್ನು ಕೇಳಿಸಿಕೊಳ್ಳದೇ ಕಚೇರಿಯಿಂದ ಎದ್ದು ಬಾ ಎಂದು ಜೋರಾಗಿ ಕೂಗಾಡುತ್ತಾ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಯಾವುದೇ ಸಾಕ್ಷಿ ಇಲ್ಲದೇ ದೇವಸ್ಥಾನಕ್ಕೆ ಸೇರಿದ ಸೀರೆಗಳನ್ನು ಕದ್ದು ತೆಗೆದುಕೊಂಡಿರುತ್ತೇನೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಿದ ಸ್ನೇಹಮಯಿ ಕೃಷ್ಣ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರೂಪಾ ದೂರು ನೀಡಿದ್ದರು.
ಇದರ ಅನ್ವಯ ಸ್ನೇಹಮಯಿ ಕೃಷ್ಣ ವಿರುದ್ಧ ಕೃಷ್ಣರಾಜ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 132, 351 ಅಡಿ ಪ್ರಕರಣ ದಾಖಲಿಸಲಾಗಿದೆ.