ಪ್ರತಿಭಟಿಸಿದರೆ, ರಾಜ್ಯ ಸರ್ಕಾರದ ಕಾರ್ಯವೈಖರಿ ಎತ್ತಿ ತೋರಿಸಿದರೆ ಸಮಸ್ಯೆ: ಹೈಕೋರ್ಟ್‌ ಕಿಡಿ

“ಪ್ರತಿಭಟನೆ ನಡೆಸಿದರೆ ಹಾಗೂ ಸರ್ಕಾರ ಏನು ಮಾಡುತ್ತಿದೆ ಎಂದು ಎತ್ತಿ ತೋರಿಸಿದರೆ ಸಮಸ್ಯೆಯಾಗುತ್ತದೆಯಲ್ಲವೇ? ಪ್ರತಿಭಟಿಸಿದವರನ್ನು ಹಿಡಿದು ಕೇಸು ಹಾಕಲಾಗುತ್ತದೆಯಲ್ಲವೇ?” ಎಂದು ಗರಂ ಆದ ನ್ಯಾಯಾಲಯ.
Justice M Nagaprasanna and Karnataka HC
Justice M Nagaprasanna and Karnataka HC
Published on

ತುಮಕೂರು ಶಾಖಾ ನಾಲೆಯಲ್ಲಿ ಹರಿಯುವ ಹೇಮಾವದಿ ನದಿ ನೀರನ್ನು ಕೆಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಕೆರೆಗಳಿಗೆ ಹರಿಸುವ ಸರ್ಕಾರದ ನಿರ್ಧಾರ ಆಕ್ಷೇಪಿಸಿ ನಾಲೆಯ ತೂಬಿಗೆ ಹಾಕಿದ್ದ ಬೀಗ ಹೊಡೆದು ಹಾಕಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪ ಮೇಲೆ ಹಿರಿಯ ವಕೀಲ‌ ಎಚ್‌ ಎಂ ಅನಂತಕುಮಾರಯ್ಯ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ.

ತುಮಕೂರು ಒಂದನೇ ಹೆಚ್ಚುವರಿ ಸಿವಿಲ್‌ (ಕಿರಿಯ ಶ್ರೇಣಿಯ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸುವಂತೆ ಕೋರಿ ಅನಂತಕುಮಾರಯ್ಯ ಅಲಿಯಾಸ್‌ ಹಾಲನೂರು ಅನಂತ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಪ್ರತಿಭಟನೆ ನಡೆಸಿದರೆ ಹಾಗೂ ಸರ್ಕಾರ ಏನು ಮಾಡುತ್ತಿದೆ ಎಂದು ಎತ್ತಿ ತೋರಿಸಿದರೆ ಸಮಸ್ಯೆಯಾಗುತ್ತದೆಯಲ್ಲವೇ?” ಎಂದು ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.

ತುಮಕೂರಿನ ಅದ್ಲಾಪುರ, ಹಾಲನೂರು ಗ್ರಾಮಗಳಲ್ಲಿ ಹೇಮಾವತಿ ನಾಲೆಯಲ್ಲಿ ಹರಿಯುವ ನೀರನ್ನು ಕುಡಿಯುವ ನೀರಿನ ಯೋಜನೆಗಾಗಿ ಗೂಳೂರು - ಹೆಬ್ಬೂರು, ಸಿ ಎಸ್ ಪುರ, ಅರಿಯೂರು ಕೆರೆಗಳಿಗೆ ಹರಿಸಲು ಸರ್ಕಾರ ನಿರ್ಧರಿಸಿತ್ತು. ಅದನ್ನು ಆಕ್ಷೇಪಿಸಿ ಅರ್ಜಿದಾರರು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ವಿಧಿಸಿದ್ದ ನಿಷೇಧಾಜ್ಞೆ ಉಲ್ಲಂಘಿಸಿ 2019ರ ಸೆಪ್ಟೆಂಬರ್‌ 10ರಂದು ಬೆಳಿಗ್ಗೆ 10 ಗಂಟೆಗೆ ಅರ್ಜಿದಾರರು ಜನರ ಗುಂಪು ಕಟ್ಟಿಕೊಂಡು ಬಂದು ಹೇಮಾವತಿ ನಾಲೆ-22ರ ತೂಬಿಗೆ ಹಾಕಲಾಗಿದ್ದ ಬೀಗ ಹೊಡೆದು ಹಾಕಿ ಸರ್ಕಾರಕ್ಕೆ 50 ರೂಪಾಯಿ ನಷ್ಟುವುಂಟು ಮಾಡಿದ್ದಾರೆ. ಅನಧಿಕೃತವಾಗಿ ನೀರನ್ನು ಹಾಲನೂರು ಕರೆಗೆ ಬಿಟ್ಟಿದ್ದಾರೆ ಎಂದು ಆರೋಪಿಸಿ ತುಮಕೂರು ಗ್ರಾಮಾಂತರ ಠಾಣಾ ಪೊಲೀಸರು ದೂರು ದಾಖಲಿಸಿದ್ದರು.

ಪ್ರಕರಣವನ್ನು ತುಮಕೂರು ಒಂದನೇ ಹೆಚ್ಚುವರಿ ಸಿವಿಲ್‌ (ಕಿರಿಯ ಶ್ರೇಣಿಯ) ಮತ್ತು ಜೆಎಂಎಫ್‌ಸಿ ನ್ಯಾಯಾಲಯಲ್ಲಿ ನಡೆಸುತ್ತಿದೆ. ಈ ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

Kannada Bar & Bench
kannada.barandbench.com