ಮನೆಯ ಶಾಂತಿ ಕಾಪಾಡಲು ಪತಿ ಹೊರಹೋಗುವುದೇ ಏಕೈಕ ಮಾರ್ಗವಾದರೆ ಅದನ್ನೇ ಸೂಚಿಸಬೇಕು: ಮದ್ರಾಸ್ ಹೈಕೋರ್ಟ್

ಗಂಡನ ಇರುವಿಕೆಯಿಂದ ಪತ್ನಿಯು ಹೆದರಿ ಚೀರುವ ಸನ್ನಿವೇಶವಿದ್ದರೆ ನ್ಯಾಯಾಲಯಗಳು ಹೆಂಡತಿಗೆ ಕಿರುಕುಳ ಕೊಡದಂತೆ ಆತನಿಗೆ ಹೇಳಿದರಷ್ಟೇ ಸಾಲದು, ಬದಲಿಗೆ ಆತನಿಗೆ ಮನೆಯಲ್ಲಿರಲು ಅವಕಾಶವನ್ನೂ ನೀಡಬಾರದು ಎಂದ ಪೀಠ.
Madras High Court
Madras High Court

ದೌರ್ಜನ್ಯ ಎಸಗುವ ಗಂಡನನ್ನು ಮನೆಯಿಂದ ಹೊರಹಾಕುವುದರಿಂದ ಮಾತ್ರವೇ ಮನೆಯಲ್ಲಿ ಶಾಂತಿ ಮೂಡುತ್ತದೆ ಎನ್ನುವುದು ಖಾತ್ರಿಯಾದರೆ ಆತನಿಗೆ ಪರ್ಯಾಯ ವಸತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನೂ ಲೆಕ್ಕಿಸದೆ ನ್ಯಾಯಾಲಯಗಳು ಅವನನ್ನು ಮನೆಯಿಂದ ಹೊರಹಾಕುವ ಆದೇಶ ನೀಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ [ವಿ ಅನುಷಾ ಮತ್ತು ಬಿ ಕೃಷ್ಣನ್‌ ನಡುವಣ ಪ್ರಕರಣ].

ಮನೆಯಲ್ಲಿ ಪತಿ ಇರುವುದನ್ನು ಕಂಡು ಹೆದರುವ ಮಹಿಳೆಯರ ಬಗ್ಗೆ ನ್ಯಾಯಾಲಯಗಳು ಅಸಡ್ಡೆ ತೋರಬಾರದು ಎಂದು ನ್ಯಾಯಮೂರ್ತಿ ಆರ್ ಎನ್ ಮಂಜುಳಾ ತಿಳಿಸಿದರು.

Also Read
ವಿಚ್ಛೇದನ ಪ್ರಕರಣಗಳಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ ಅಥವಾ ಜಾತ್ಯತೀತ ಕ್ರೌರ್ಯ ಎಂದು ಇರದು: ಕೇರಳ ಹೈಕೋರ್ಟ್

“ಗಂಡನನ್ನು ಮನೆಯಿಂದ ಹೊರಹಾಕುವುದರಿಂದ ಮಾತ್ರ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎನ್ನುವುದೇ ಏಕೈಕ ಮಾರ್ಗವಾಗಿದ್ದರೆ ಪ್ರತಿವಾದಿ ತನ್ನದೇ ಆದ ಇತರ ವಸತಿ ಸೌಕರ್ಯ ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನೂ ಪರಿಗಣಿಸದೆ ನ್ಯಾಯಾಲಯಗಳು ಆದೇಶ ನೀಡಬೇಕು. ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಇದ್ದರೆ ಒಳ್ಳೆಯದು. ಆದರೆ ಅದು ಇಲ್ಲದಿದ್ದರೆ ಅಂತಹ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು” ಎಂದು ನ್ಯಾಯಾಲಯ ಹೇಳಿತು.

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಆದೇಶಗಳು ಪ್ರಾಯೋಗಿಕ ಮತ್ತು ಕಾರ್ಯಸಾಧುವಾಗಿರಬೇಕು. ಮಹಿಳೆ ತನ್ನ ಮನೆಯೊಳಗೆ ಸುರಕ್ಷಿತವಾಗಿದ್ದಾಳೆ ಎಂಬದನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯವಾಗಿ ಇಂತಹ ರಕ್ಷಣಾ ಆದೇಶಗಳನ್ನು ರವಾನಿಸಲಾಗುತ್ತದೆ. ಮಹಿಳೆ ಗಂಡನ ಇರುವಿಕೆಯಿಂದ ಹೆದರಿ ಚೀರುವಂತಹ ಸನ್ನಿವೇಶವಿದ್ದರೆ ನ್ಯಾಯಾಲಯಗಳು ಹೆಂಡತಿಗೆ ಕಿರುಕುಳ ಕೊಡದಂತೆ ಆತನಿಗೆ ಹೇಳಿದರಷ್ಟೇ ಸಾಲದು. ಬದಲಿಗೆ, ಆತ ಮನೆಯಲ್ಲಿರಲು ಅವಕಾಶ ನೀಡಬಾರದು ಎಂದು ನ್ಯಾಯಮೂರ್ತಿಯವರು ಅಭಿಪ್ರಾಯಪಟ್ಟರು.

ನಿಂದಿಸುವ ಮತ್ತು ಅಶಿಸ್ತಿನಿಂದ ವರ್ತಿಸುವ ತನ್ನ ಗಂಡನನ್ನು ಮನೆ ತೊರೆಯುವಂತೆ ಆದೇಶಿಸಲು ನಿರಾಕರಿಸಿದ್ದ ಜಿಲ್ಲಾ ನ್ಯಾಯಾಲಯವೊಂದರ ಆದೇಶವನ್ನು ವೃತ್ತಿಯಲ್ಲಿ ವಕೀಲರಾಗಿರುವ ಮಹಿಳೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತನ್ನ ಮತ್ತು ತನ್ನ ಕೆಲಸದ ಬಗ್ಗೆ ಗಂಡನ ವರ್ತನೆ ಉತ್ತಮವಾಗಿಲ್ಲ. ಆತ ಆಗಾಗ್ಗೆ ತನ್ನನ್ನು ನಿಂದಿಸುತ್ತಾನೆ ಮತ್ತು ಮನೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಾನೆ ಎಂದು ಆಕೆ ದೂರು ನೀಡಿದ್ದರು.

Related Stories

No stories found.
Kannada Bar & Bench
kannada.barandbench.com