ಒಂಟಿ ಮಹಿಳೆಯರು, ವಿಧವೆಯರು ಮತ್ತು ವೃದ್ಧರಿಗೆ ಪಿಂಚಣಿ ಸ್ಥಗಿತಗೊಳಿಸಿರುವ ಆಂಧ್ರಪ್ರದೇಶ ಸರ್ಕಾರದ ನಡೆ ವಿರುದ್ಧ ಅಲ್ಲಿನ ಹೈಕೋರ್ಟ್ ಕಿಡಿಕಾರಿದೆ. ಧಾರ್ಮಿಕ ಆಚರಣೆಗಳಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಬಹುದಾದರೆ ಸಾಮಾಜಿಕ ಭದ್ರತಾ ಪಿಂಚಣಿಗೆ ಏಕೆ ಮಾಡುತ್ತಿಲ್ಲ ಎಂದು ಅದು ಕಟುವಾಗಿ ಪ್ರಶ್ನಿಸಿದೆ. ಈ ಸಂಬಂಧ ಸೋಮವಾರ ಎರಡು ಮನವಿಗಳ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಫಲಾನುಭವಿಗಳಿಗೆ ಬಾಕಿ ಹಣ ಪಾವತಿಸುವಂತೆ ತಾಕೀತು ಮಾಡಿದೆ.
"ವಿವಿಧ ಚಟುವಟಿಕೆಗಳಿಗಾಗಿ ಕೋಟಿಗಟ್ಟಲೆ ಸಾರ್ವಜನಿಕರ ಕೋಟಿಗಟ್ಟಲೆ ಹಣವನ್ನು ಸರ್ಕಾರ ವಿನಿಯೋಗಿಸಿದೆ. ಆದರೆ ರಾಜ್ಯದ ಯಾವುದೇ ವ್ಯಕ್ತಿ ಗೋದಾವರಿ ಕೃಷ್ಣಾ ಪುಷ್ಕರಕ್ಕೆ ಹಣ ವಿನಿಯೋಗಿಸಬೇಕೆಂದು ಮನವಿ ಮಾಡಿದ್ದಾರೆಯೇ? ‘ಕ್ರಿಸ್ಮಸ್ ಕನುಕಾಲು’ ಕಾರ್ಯಕ್ರಮಕ್ಕೆ ಹಣ ಬೇಕೆಂದು ಕೇಳಿದ್ದಾರೆಯೇ? ರಂಜಾನ್ ತೋಫಾಗಾಗಿ ದುಡ್ಡು ಕೊಡಿ ಎಂದು ಕೋರಿದ್ದಾರೆಯೇ? ಆದರೆ ಸಾರ್ವಜನಿಕ ಬೊಕ್ಕಸದಿಂದ ಇಂತಹ ಚಟುವಟಿಕೆಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ," ಎಂದು ನ್ಯಾಯಮೂರ್ತಿ ಬಟ್ಟು ದೇವಾನಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
" ಮೇಲೆ ತಿಳಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂಪಾಯಿಗಳ ಹಣ ಖರ್ಚು ಮಾಡುತ್ತಿರುವಾಗ, ಸಾಮಾಜಿಕ ಭದ್ರತಾ ಪಿಂಚಣಿಗೆ ಮೀಸಲಿಟ್ಟ ಅಲ್ಪ ಮೊತ್ತದ ಹಣವನ್ನು ತಡೆಹಿಡಿಯುವುದು ಅಸಮಂಜಸ"
ಆಂಧ್ರಪ್ರದೇಶ ಹೈಕೋರ್ಟ್
ಇತರೆ ಯೋಜನೆಗಳು ಮತ್ತು ಉತ್ಸವಗಳಿಗೆ ಭಾರಿ ಪ್ರಮಾಣದಲ್ಲಿ ಸರ್ಕಾರ ಹಣ ವಿನಿಯೋಗಿಸುತ್ತಿರುವುದು ಅಸಮಂಜಸ ಎಂದು ಘೋಷಿಸಿದ ಕೋರ್ಟ್ ಸಾಮಾಜಿಕ ನೆರವಿನಂತಹ ವಿಷಯಗಳನ್ನು ನಿರ್ವಹಿಸುವಾಗ ಸೂಕ್ಷ್ಮತೆ ಅಗತ್ಯ ಎಂದು ಕಿವಿಮಾತು ಹೇಳಿತು.
ಇದೇ ವೇಳೆ ವಿವಾಹಿತ ಮಹಿಳೆಯರು ಹಣಕಾಸಿನ ಅನುಕೂಲಕ್ಕಾಗಿ ತಮ್ಮನ್ನು ಅವಿವಾಹಿತೆಯರು ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂದು ಕೂಡ ಕೋರ್ಟ್ ಹೇಳಿದೆ.
"ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ, ವಿವಾಹಗಳಿಗೆ ಹೆಚ್ಚಿನ ಪಾವಿತ್ರ್ಯ ಇದೆ" ಮತ್ತು ವಿವಾಹಿತ ಮಹಿಳೆಯರಿಗೆ ಸಮಾಜದಲ್ಲಿ "ಒಂದು ನಿರ್ದಿಷ್ಟ ಮಟ್ಟದ ಘನತೆ ಮತ್ತು ಗೌರವ ನೀಡಲಾಗಿದೆ" ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ದೇವಾನಂದ್ ಅವರು ಆದ್ದರಿಂದ, ಅಂತಹ ಮಹಿಳೆಯರ ಹಕ್ಕುಗಳನ್ನು ‘ಮಾನವೀಯ ನೆಲೆ’ಯಲ್ಲಿ ರಾಜ್ಯ ಸರ್ಕಾರ ಅರ್ಥಮಾಡಿಕೊಂಡು ಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಫಲಾನುಭವಿಗಳ ಮಕ್ಕಳು ಸರ್ಕಾರಿ ಸೇವೆಯಲ್ಲಿದ್ದರೆ ಮತ್ತು ಭೂಮಿ ಪಡೆದಿದ್ದರೆ ಯೋಜನೆ ಸ್ಥಗಿತಗೊಳಿಸುವುದಾಗಿ ಸರ್ಕಾರ ತಿಳಿಸಿತ್ತು. ಈ ವಿಚಾರವಾಗಿ ಕೂಡ ಇದೇ ರೀತಿಯ ಸೂಕ್ಷ್ಮತೆಯಿಂದ ವರ್ತಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಪಿಂಚಣಿ ಸ್ಥಗಿತಗೊಳಿಸುವ ಮೊದಲು ಪರಿಶೀಲನೆ ನಡೆಸದೇ ಇದ್ದುದು ಮತ್ತು ಅರ್ಜಿದಾರರಿಗೆ ಗ್ರಾಮ ಸಭೆಗಳ ಎದುರು ಅಹವಾಲು ಸಲ್ಲಿಸಲು ಅವಕಾಶ ನೀಡದಿದ್ದಕ್ಕಾಗಿ ನ್ಯಾಯಾಲಯ ಸರ್ಕಾರವನ್ನು ಟೀಕಿಸಿತು.
ಒಂದು ಹಂತದಲ್ಲಿ ಕಠಿಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದೇವಾನಂದ್ ಅವರು, ಅರ್ಜಿದಾರರಿಗೆ ಈ ಅವಕಾಶಗಳನ್ನು ನಿರಾಕರಿಸುವುದರಿಂದ "ಅಸಹಾಯಕರು, ದುರ್ಬಲರೂ ಆದ ಮಹಿಳೆಯರು ಮತ್ತು ವೃದ್ಧರನ್ನು ಹಸಿವಿನ ದವಡೆಗೆ ತಳ್ಳಿದಂತಾಗುತ್ತದೆ” ಎಂದರು.
ದುರ್ಬಲರಿಗೆ ಪರಿಹಾರ ಮತ್ತು ನೆರವು ನೀಡಲು ಈ ಹಣಕಾಸಿನ ನೆರವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರ ಸಾರ್ವಜನಿಕ ನಿಧಿಗಳ ಟ್ರಸ್ಟಿಯಾಗಿರುವುದರಿಂದ ಇವುಗಳನ್ನು ಬುದ್ಧಿವಂತಿಕೆಯಿಂದ ಬಳಸಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
"ಸರ್ಕಾರವು ಸಾರ್ವಜನಿಕ ಹಣದ ಟ್ರಸ್ಟಿಯಾಗಿದೆ ಎಂದು ಗಮನಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಜನರ ಹಣವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. ತೆರಿಗೆದಾರರ ಪಾವತಿಯಿಂದ ಅದು ಸಂಗ್ರಹ ಆಗಿರುವುದರಿಂದ ಸರ್ಕಾರ ಅವರ ಖಯಾಲಿ ಮತ್ತು ರಂಜನೆಗಾಗಿ ಆ ಹಣವನ್ನು ಪೋಲು ಮಾಡಬೇಕಾಗಿಲ್ಲ. ಸಾರ್ವಜನಿಕ ಹಣ ಪ್ರತಿಯೊಬ್ಬ ನಾಗರಿಕನ ಆಸ್ತಿ. ಕೋರ್ಟುಗಳು ಪದೇ ಪದೇ ಇದನ್ನು ಹೇಳಿವೆ.”
ಆಂಧ್ರಪ್ರದೇಶ ಹೈಕೋರ್ಟ್
ಈ ಮೊದಲು ‘ಇಂದಿರಮ್ಮ ಯೋಜನೆ’, ನಂತರ ‘ಎನ್ ಟಿ ಆರ್ ಭರೋಸಾ’, ತದನಂತರ ‘ವೈಎಸ್ಆರ್ ಪಿಂಚಣಿ ಕನುಕಾ’ ಎಂಬ ಹೆಸರಿನ ಯೋಜನೆಗಳಡಿ ದುರ್ಬಲ ವರ್ಗಗಳಿಗೆ ಪಿಂಚಣಿ ಲಭಿಸುತ್ತಿತ್ತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: