ಮದುವೆ ಆಗುವುದರಿಂದ ಪುತ್ರನ ಸ್ಥಾನಮಾನ ಬದಲಾಗಲಿಲ್ಲ ಎಂದಾದರೆ ಪುತ್ರಿಯ ಸ್ಥಾನ ಸಹ ಬದಲಾಗಬಾರದು: ಹೈಕೋರ್ಟ್‌

ಮಾಜಿ ಯೋಧರ ಪುತ್ರ ಅಥವಾ ಪುತ್ರಿ ಯಾರೇ ಆದರೂ 25 ವರ್ಷ ವಯೋಮಾನದ ನಂತರ ಅವರಿಗೆ ಒಂದೇ ಮಾರ್ಗಸೂಚಿ ಇರುತ್ತದೆ. 25 ವರ್ಷದ ಕೆಳಗಿನ ಪುತ್ರಿ ಮದುವೆ ಆಗಿದ್ದಾರೆ ಎಂಬ ಕಾರಣಕ್ಕೆ ಗುರುತಿನ ಚೀಟಿ ಪಡೆಯುವ ಹಕ್ಕಿನಿಂದ ವಂಚಿತರಾಗುವುದಿಲ್ಲ ಎಂದ ಪೀಠ.
Justice M Nagaprasanna and Karnataka HC
Justice M Nagaprasanna and Karnataka HC

ಮಾಜಿ ಯೋಧರ ಅವಲಂಬಿತರಿಗೆ ಗುರುತಿನ ಚೀಟಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ತಾರತಮ್ಯ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ ಆ ಕುರಿತು ನಿಯಮ ಸಂವಿಧಾನಬಾಹಿರ ಎಂದಿದ್ದು, ತಿದ್ದುಪಡಿಗೆ ನಿರ್ದೇಶಿಸಿದೆ.

ತಮಗೆ ಗುರುತಿನ ಚೀಟಿ ನೀಡಲು ನಿರಾಕರಿಸಿದ್ದ ಸೈನಿಕ ಕಲ್ಯಾಣ ಇಲಾಖೆಯ ಕ್ರಮ ಪ್ರಶ್ನಿಸಿ ಮೈಸೂರಿನ ದಿವಂಗತ ಯೋಧ ಸುಬೇದಾರ್‌ ರಮೇಶ್‌ ಪೊಲೀಸ್‌ ಪಾಟೀಲ್‌ ಅವರ ಪುತ್ರಿ ಪ್ರಿಯಾಂಕ ಆರ್.ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ಪುರಸ್ಕರಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಹಾಯಕ ಪ್ರಾಧ್ಯಾಪರ ಹುದ್ದೆಗೆ 2021ರ ಆಗಸ್ಟ್‌ 26ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಅರ್ಜಿದಾರರನ್ನು ನಿವೃತ್ತ ಯೋಧರ ಕೋಟಾದಲ್ಲಿ ಪರಿಗಣಿಸಬೇಕು ಎಂದು ಪೀಠವು ಆದೇಶ ಮಾಡಿದೆ.

‘‘ಮಾಜಿ ಯೋಧರ ಪುತ್ರ ಅಥವಾ ಪುತ್ರಿ ಯಾರೇ ಆದರೂ 25 ವರ್ಷ ವಯೋಮಾನದ ನಂತರ ಅವರಿಗೆ ಒಂದೇ ಮಾರ್ಗಸೂಚಿ ಇರುತ್ತದೆ. 25 ವರ್ಷದ ಕೆಳಗಿನ ಪುತ್ರಿ ಮದುವೆ ಆಗಿದ್ದಾರೆ ಎನ್ನುವ ಕಾರಣಕ್ಕೆ ಅವರು ಗುರುತಿನ ಚೀಟಿ ಪಡೆಯುವ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು ಸರಿಯಲ್ಲ. ಇದು ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಪುತ್ರ ಮದುವೆ ಆಗಲಿ ಅಥವಾ ಆಗದೇ ಇದ್ದರೂ ಪ್ರಯೋಜನ ಪಡೆಯುತ್ತಾರೆ. ಆದರೆ, ಪುತ್ರಿ ಅವಿವಾಹಿತರಾಗಿ ಉಳಿದರೆ ಮಾತ್ರ ಪ್ರಯೋಜನ ಪಡೆಯುತ್ತಾರೆ ಎಂಬ ನಿಯಮ ಸರಿಯಲ್ಲ’’ ಎಂದು ಪೀಠವು ಹೇಳಿದೆ.

‘‘ಇದು ತಾರತಮ್ಯಕ್ಕೆ ಎಡೆಮಾಡಿಕೊಡುತ್ತದೆ, ಲಿಂಗದ ಆಧಾರದ ಮೇಲೆ ಪ್ರಯೋಜನ ನೀಡುವುದು ಸರಿಯಲ್ಲ. ಇದು ಅಸಮಾನತೆಯಾಗುತ್ತದೆ. ಪುತ್ರಿ ಮದುವೆಯಾದ ತಕ್ಷಣ ಆಕೆಯ ಹಕ್ಕು ಮೊಟಕುಗೊಳಿಸುವುದು ಸರಿಯಲ್ಲ. ಪುತ್ರ ಪುತ್ರನಾಗಿಯೇ ಇದ್ದಾಗ, ಪುತ್ರಿಯನ್ನೂ ಸಹ ಅದೇ ರೀತಿ ಪರಿಗಣಿಸಬೇಕಾಗುತ್ತದೆ. ಮದುವೆ ಆಗುವುದರಿಂದ ಪುತ್ರನ ಸ್ಥಾನಮಾನ ಬದಲಾಗಲಿಲ್ಲ ಎಂದಾದರೆ ಪುತ್ರಿಯ ಸ್ಥಾನ ಸಹ ಬದಲಾಗುವುದಿಲ್ಲ ಮತ್ತು ಬದಲಾಗಬಾರದು” ಎಂದು ಪೀಠವು ಹೇಳಿದೆ.

“ಹಾಲಿ ಇರುವ ನಿಯಮದಲ್ಲಿ ಪುರುಷರು ಎಂದು ಇರುವ ಕಡೆ ಸಿಬ್ಬಂದಿ ಎಂದು ಬದಲಾಯಿಸಬೇಕು. ಮಹಿಳೆಯರು ಇಂದು ಅತ್ಯುನ್ನತ ಸ್ಥಾನಕ್ಕೇರುತ್ತಿದ್ದಾರೆ. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಅಧಿಕಾರಿಗಳ ಹಂತದಲ್ಲಿ ಮೇಲ್ವಿಚಾರಣೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಶತಮಾನಗಳಷ್ಟು ಹಳತಾದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿದ್ದ ಲಿಂಗ ತಾರತಮ್ಯ ತೊಲಗಬೇಕು ಮತ್ತು ನೀತಿ ನಿರೂಪಕರು ಈ ಬಗ್ಗೆ ಚಿಂತನೆ ನಡೆಸಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಕೆಇಎ ನಡೆಸುವ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಮಾಜಿ ಯೋಧರ ಕೋಟಾದಡಿ ಅವಕಾಶ ಬಯಸಿದ್ದ ಅವರು, ಅದಕ್ಕಾಗಿ ತಮ್ಮ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಅವಲಂಬಿತರ ಗುರುತಿನ ಚೀಟಿಗೆ ಸೈನಿಕ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರು ವಿವಾಹವಾಗಿರುವುದರಿಂದ ನಿಯಮದಂತೆ ಅವರಿಗೆ ಗುರುತಿನ ಚೀಟಿ ನೀಡಲಾಗದು ಎಂದು ಇಲಾಖೆ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com