ಭಾಷೆಯ ಘನತೆ ಕುಸಿದರೆ ನಾಗರಿಕತೆ ಅವಸಾನ: ಬಿಜೆಪಿ ಶಾಸಕ ಭರತ್‌ ಶೆಟ್ಟಿ ವಿರುದ್ಧ ಹೈಕೋರ್ಟ್‌ ಕಿಡಿ

“ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಡಬಾರದು. ಇವರನ್ನೆಲ್ಲಾ ಗಮನಿಸುವ ಮಕ್ಕಳು ಭವಿಷ್ಯದಲ್ಲಿ ತಮ್ಮ ಶಿಕ್ಷಕರು, ಪೋಷಕರ ವಿರುದ್ಧವೂ ಇಂತಹುದೇ ಭಾಷೆ ಬಳಸಲಾರಂಭಿಸುತ್ತಾರೆ. ಭಾಷೆಯನ್ನು ಯಾವತ್ತೂ ಸುಂದರವಾಗಿ ಬಳಸಬೇಕು” ಎಂದ ನ್ಯಾಯಮೂರ್ತಿಗಳು.
BJP MLA Bharat Shetty and Karnataka HC
BJP MLA Bharat Shetty and Karnataka HC
Published on

“ಸಮಾಜದಲ್ಲಿ ಜನರು ಬಳಸುವ ಭಾಷೆಯ ಘನತೆ ಕುಸಿದರೆ ಅದು ನಾಗರಿಕತೆಯ ಅವಸಾನದ ಸಂಕೇತ. ಜನನಾಯಕರು ತಮ್ಮ ಮಾತುಗಳ ಮೇಲೆ ಹಿಡಿತ ಹೊಂದಿರಬೇಕು. ಇಂಥವರನ್ನು ಕಂಡೇ ಕನಕದಾಸರು ನಾಲಗೆ ಕುಲವ ಅರುಹಿತು ಎಂದು ಹೇಳಿದ್ದಾರೆ” ಎಂದು ಮೌಖಿಕವಾಗಿ ಕರ್ನಾಟಕ ಹೈಕೋರ್ಟ್‌ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರ ವಿರುದ್ಧ ಕಿಡಿಕಾರಿದೆ.

ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿ ಭರತ್‌ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಭರತ್‌ ಶೆಟ್ಟಿ ಯಾವುದೇ ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡುವಂತಹ ಹೇಳಿಕೆ ನೀಡಿಲ್ಲ” ಎಂದು ಸಮರ್ಥಿಸಿದರು.

ಇದಕ್ಕೆ ಪೀಠವು “ಜನಪ್ರತಿನಿಧಿಗಳು ತಾವು ಆಡುವ ಮಾತಿನ ಮೇಲೆ ಹಿಡಿತ ಇಟ್ಟುಕೊಂಡಿರಬೇಕು. ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಡಬಾರದು. ಇವರನ್ನೆಲ್ಲಾ ಗಮನಿಸುವ ಮಕ್ಕಳು ಭವಿಷ್ಯದಲ್ಲಿ ತಮ್ಮ ಶಿಕ್ಷಕರು, ಪೋಷಕರ ವಿರುದ್ಧವೂ ಇಂತಹುದೇ ಭಾಷೆ ಬಳಸಲಾರಂಭಿಸುತ್ತಾರೆ. ಭಾಷೆಯನ್ನು ಯಾವತ್ತೂ ಸುಂದರವಾಗಿ ಬಳಸಬೇಕು” ಎಂದು ಮೌಖಿಕವಾಗಿ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಚಾರಣಾ ನ್ಯಾಯಾಲಯದಲ್ಲಿನ ಮುಂದಿನ ನ್ಯಾಯಿಕ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿದ ನ್ಯಾಯಾಲಯವು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

Also Read
ರಾಹುಲ್‌ ಗಾಂಧಿ ವಿರುದ್ಧ ಪ್ರಚೋದನಕಾರಿ ಭಾಷಣ: ಬಿಜೆಪಿ ಶಾಸಕ ಭರತ್‌ ಶೆಟ್ಟಿಗೆ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಪ್ರಕರಣದ ಹಿನ್ನೆಲೆ: ಜುಲೈ 8ರಂದು ಕಾವೂರು ಜಂಕ್ಷನ್‌ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಭರತ್ ಶೆಟ್ಟಿ ಭಾಷಣ ಮಾಡಿದ್ದರು. ರಾಹುಲ್ ಗಾಂಧಿ ಒಬ್ಬ ಹುಚ್ಚ. ಅವನನ್ನು ಸಂಸತ್‌ನಿಂದ ಹೊರಹಾಕಬೇಕು. ಆತನ ಮಾತಿನ ಶೈಲಿ ನೋಡಿದರೆ ಹಿಂದೂ ಆದ ನಾನು ಲೋಕಸಭೆಗೆ ಹೋಗಿ ಆತನ ಕೆನ್ನೆಗೆ ಎರಡು ಹೊಡೆಯಬೇಕು ಎನಿಸುತ್ತದೆ. ಹಿಂದುತ್ವದ ವಿಚಾರ ಮಾತನಾಡಿದರೆ ಶಸ್ತ್ರಾಸ್ತ್ರ ಉಪಯೋಗಿಸಿ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ...’ ಎಂದು ಸುದೀರ್ಘ ಭಾಷಣ ಮಾಡಿದ್ದಾಗಿ ಆರೋಪಿಸಲಾಗಿತ್ತು.

ಈ ಸಂಬಂಧ ಮಂಗಳೂರಿನ ಅನಿಲ್ ಕುಮಾರ್ ಕಾವೂರು ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ, ಭರತ್ ಶೆಟ್ಟಿ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್‌ 351 (3) (ಕ್ರಿಮಿನಲ್ ಬೆದರಿಕೆ), 353 (ಪ್ರಚೋದನೆ) ಅಡಿ ಎಫ್ಐಆರ್ ದಾಖಲಿಸಲಾಗಿತ್ತು.

Kannada Bar & Bench
kannada.barandbench.com