ಬಡವರಿಗೆ ನ್ಯಾಯ ಸಿಗದಿದ್ದರೆ ಸರ್ಕಾರಿ ವಕೀಲರ ನೇಮಕ ಸಾರ್ಥಕವಾಗಲ್ಲ: ಸಿಎಂ ಸಿದ್ದರಾಮಯ್ಯ

ಕೆಲವು ನ್ಯಾಯಾಧೀಶರು ಮುಖ ನೋಡಿ ಮಣೆ ಹಾಕುತ್ತಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಇದನ್ನು ಎಲ್ಲರೂ ಒಟ್ಟಾಗಿ ಅಳಿಸಬೇಕು ಎಂದ ಮುಖ್ಯಮಂತ್ರಿಗಳು.
ಬಡವರಿಗೆ ನ್ಯಾಯ ಸಿಗದಿದ್ದರೆ ಸರ್ಕಾರಿ ವಕೀಲರ ನೇಮಕ ಸಾರ್ಥಕವಾಗಲ್ಲ: ಸಿಎಂ ಸಿದ್ದರಾಮಯ್ಯ

ಸರ್ಕಾರಿ ವಕೀಲರಿಗೆ ಸರ್ಕಾರದ ಕೇಸು ಎಂದರೆ ಅಸಡ್ಡೆ ಇರಬಾರದು. ಸರ್ಕಾರದ ಕೇಸುಗಳು ಎಂದರೆ ಜನರ ಕೇಸುಗಳು. ಬಡವರಿಗೆ ನ್ಯಾಯ ಸಿಗದಿದ್ದರೆ ಸರ್ಕಾರಿ ವಕೀಲರನ್ನು ನೇಮಿಸಿಕೊಂಡಿದ್ದು ಸಾರ್ಥಕವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.  

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸಹಯೋಗದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣಾ ಅಧಿನಿಯಮ- 2023ರ ಸಭೆಯಲ್ಲಿ ಅವರು ಮಾತನಾಡಿದರು.

“ಸರ್ಕಾರಿ ವಕೀಲರಿಗೆ ಸರ್ಕಾರದ ಕೇಸು ಎಂದರೆ ಅಸಡ್ಡೆ ಇರಬಾರದು. ಸರ್ಕಾರದ ಕೇಸುಗಳು ಎಂದರೆ ಜನರ ಕೇಸುಗಳು. ಜನರಿಗೆ ನ್ಯಾಯ ಸಿಗುವ ಪ್ರಮಾಣ ಇನ್ನೂ ಹೆಚ್ಚಾಗಬೇಕು. ಬಡವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗುವ ಶಕ್ತಿ ಇರುವುದಿಲ್ಲ. ಬಡವರಿಗೆ ನ್ಯಾಯ ಸಿಗದಿದ್ದರೆ ಸರ್ಕಾರಿ ವಕೀಲರನ್ನು ನೇಮಿಸಿಕೊಂಡಿದ್ದು ಸಾರ್ಥಕ ಆಗುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಹೇಳಿದರು.  

“ಪ್ಲೀಡಿಂಗ್ಸ್ ಸರಿಯಾಗಿ, ಪರಿಣಾಮಕಾರಿಯಾಗಿ ಬರೆಯುವುದು ಬಹಳ ಮುಖ್ಯ. ಈ ಹಂತದಲ್ಲೇ ಅಸಡ್ಡೆ, ಉಡಾಫೆತನ ಪ್ರದರ್ಶಿಸಿದರೆ ನ್ಯಾಯ ಪ್ರಕ್ರಿಯೆಯ ಮುಂದಿನ ಎಲ್ಲಾ ಹಂತಗಳೂ ವಿಫಲವಾಗುತ್ತವೆ. ಆದ್ದರಿಂದ, ಬಹಳ ಜವಾಬ್ದಾರಿಯುತವಾಗಿ ಸರ್ಕಾರಿ ವಕೀಲರು ವರ್ತಿಸಬೇಕು” ಎಂದರು.

“ಸರ್ಕಾರಿ ವಕೀಲರು ಮತ್ತು ಅಧಿಕಾರಿಗಳ ವೈಫಲ್ಯದಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ವ್ಯಾಜ್ಯ ಸಣ್ಣದಿರಲಿ, ದೊಡ್ಡದಿರಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ಸರಿಯಾಗಿ ಸಿದ್ಧತೆ ಮಾಡಿಕೊಳ್ಳಬೇಕು. ನಮಗೆ ಹಣ ಕೊಡುವುದು ಜನರು. ಜನರ ಹಣದಲ್ಲಿ ನಮಗೆ ಸವಲತ್ತುಗಳು ಸಿಗುತ್ತಿವೆ. ಈ ಬಗ್ಗೆ ನಮಗೆ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಹಾಗೂ ಧನ್ಯತೆ ಇರಬೇಕು” ಎಂದರು.

“ಕೆಲವು ನ್ಯಾಯಾಧೀಶರು ಮುಖ ನೋಡಿ ಮಣೆ ಹಾಕುತ್ತಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಇದನ್ನು ಎಲ್ಲರೂ ಒಟ್ಟಾಗಿ ಅಳಿಸಬೇಕು. ಪ್ರಕರಣಗಳಲ್ಲಿ ಅನಗತ್ಯವಾಗಿ ದಿನಾಂಕ ಪಡೆಯಬಾರದು. ಕೇಸು ನಡೆಸಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದನ್ನು ಪರಿಣಾಮಕಾರಿಯಾಗಿ ವಿರೋಧಿಸಬೇಕು. ಅಲ್ಲೇ ಸರ್ಕಾರದ ವಕೀಲ ಅರ್ಹತೆ ಗೊತ್ತಾಗುತ್ತದೆ” ಎಂದರು.

“ನ್ಯಾಯಾಂಗ ನಿಂದನೆ ಆಗದಂತೆ ವೃತ್ತಿಪರತೆ ಪ್ರದರ್ಶಿಸುವ ಹೊಣೆಗಾರಿಕೆ ಸರ್ಕಾರದ ವಕೀಲರ ಮೇಲಿದೆ. ಸರ್ಕಾರವೇ ಕಕ್ಷಿದಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಸರ್ಕಾರ ಮತ್ತು ಜನರ ಹಿತ ಕಾಪಾಡುವ ಮತ್ತು ಸರ್ಕಾರದ ಆಸ್ತಿ ಉಳಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು” ಎಂದು ಸೂಚಿಸಿದರು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕಾನೂನು ಸಚಿವ ಎಚ್ ಕೆ ಪಾಟೀಲ್ ಮತ್ತು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸಭೆಯಲ್ಲಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com