ಪಿಎಂಎಲ್‌ಎ ವಿಧೇಯ ಅಪರಾಧದ ಪ್ರಕ್ರಿಯೆಗೆ ತಡೆ ನೀಡಿದರೆ ಜಪ್ತಿ ಮುಂದುವರಿಸಲಾಗದು: ಹೈಕೋರ್ಟ್‌

ಸಿಬಿಐ ಆರೋಪ ಪಟ್ಟಿ ಆಧರಿಸಿ, ಪಿಎಂಎಲ್‌ಎ ಅಡಿ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿ, 2022ರ ಆಗಸ್ಟ್‌ 1ರಂದು ತಾತ್ಕಾಲಿಕ ಜಪ್ತಿ ಆದೇಶ ಹೊರಡಿಸಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.
Karnataka High Court
Karnataka High Court

ವಿಧೇಯ ಅಪರಾಧದ (ವಿಸ್ತೃತ ಅಪರಾಧದ ಭಾಗ) ಪ್ರಕ್ರಿಯೆಗೆ ತಡೆ ನೀಡಿದರೆ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಜಪ್ತಿ ಪ್ರಕ್ರಿಯೆ ಮುಂದುವರಿಸಲು ಅನುಮತಿಸಲಾಗದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಆದೇಶ ಮಾಡಿದೆ.

ಬೆಂಗಳೂರಿನ ಕಾವೇರಿ ಟೆಲಿಕಾಂ ಇನ್ಪ್ರಾಸ್ಟ್ರಕ್ಚರ್‌ ಲಿಮಿಟೆಡ್‌, ಎಸ್‌ಎಂಆರ್‌ ಟೆಲಿಕಾಂ ಹೋಲ್ಡಿಂಗ್‌ ಪ್ರೈವೇಟ್‌ ಲಿಮಿಟೆಡ್‌, ಕಿಯೋನಾ ಮತ್ತು ಅದರ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

“ಪಿಎಂಎಲ್‌ಎ ಸೆಕ್ಷನ್‌ 5ರ ಅಡಿ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕರು ಜಪ್ತಿ ಆದೇಶ ಮಾಡಲು ಅಧಿಕಾರ ಹೊಂದಿದ್ದಾರೆ. ಸಿಬಿಐ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಇತ್ಯರ್ಥವಾಗುವವರೆಗೆ ಜಾರಿ ನಿರ್ದೇಶನಾಲಯವು ಹೊರಡಿಸಿರುವ ತಾತ್ಕಾಲಿಕ ಜಪ್ತಿ ಆದೇಶಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮುಂದುವರಿಸಬಾರದು” ಎಂದು ಪೀಠವು ತಡೆ ವಿಧಿಸಿದೆ.

“ವಿಧೇಯ ಅಪರಾಧಗಳಲ್ಲಿನ ಆರೋಪಗಳನ್ನು ದೇಹದಲ್ಲಿನ ಮಾಂಸಖಂಡವೆಂದು ಪರಿಗಣಿಸಬಹುದಾದರೆ, ಪಿಎಂಎಲ್‌ಎ ಅಡಿಯ ಅಪರಾಧಗಳು ರಕ್ತವಾಗಿವೆ, ಅವುಗಳನ್ನು ಬೇರ್ಪಡಿಸಲಾಗದು. ಅರ್ಜಿದಾರರು ಐಪಿಸಿ ಅಪರಾಧಗಳಲ್ಲಿ ಅಥವಾ ಪಿಎಂಎಲ್‌ಎ ಅಪರಾಧಕ್ಕೆ ಸಂಪರ್ಕ ಹೊಂದಿರುವ ವಿಧೇಯ ಅಪರಾಧದಲ್ಲಿ ಖುಲಾಸೆಯಾಗಿದ್ದರೆ ಅದು ಬೇರೆಯದೇ ಪರಿಸ್ಥಿತಿಯಾಗಿರುತ್ತಿತ್ತು. ಹಾಲಿ ಪ್ರಕರಣವು ಖುಲಾಸೆಗೆ ಸಂಬಂಧಿಸಿದ್ದಲ್ಲ. ಬದಲಿಗೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ, “ಮಧ್ಯಂತರ ಆದೇಶವು ಚಾಲ್ತಿಯಲ್ಲಿರುವವರೆಗೆ ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿರುವ ಆಸ್ತಿಗಳನ್ನು ಅರ್ಜಿದಾರರ ಪರವಾಗಿ ಬಿಡುಗಡೆ ಮಾಡುವುದಾಗಲಿ ಅಥವಾ ಅವುಗಳನ್ನು ಮಾರಾಟ ಮಾಡಲಾಗಲಿ ಇ ಡಿ ಗೆ ಅನುಮತಿಸಲಾಗದು” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ದೇನಾ ಬ್ಯಾಂಕ್‌ನಿಂದ ಯಾವ ಕಾರಣಕ್ಕಾಗಿ ಸಾಲ ಪಡೆಯಲಾಗಿತ್ತೋ ಅದನ್ನು ಅದಕ್ಕಾಗಿ ಬಳಕೆ ಮಾಡದೇ ಅನ್ಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ, ಸಿಬಿಐ 2017ರ ಜುಲೈನಲ್ಲಿ ಕಾವೇರಿ ಟೆಲಿಕಾಂ ಇನ್ಪ್ರಾಸ್ಟ್ರಕ್ಚರ್‌ ಲಿಮಿಟೆಡ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್‌ಗಳಾದ 420, 468, 471 ಮತ್ತು 120ಬಿ ಅಡಿಯ ಅಪರಾಧಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಬಿಐ ಸಂಸ್ಥೆಯು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.

ಸಿಬಿಐ ವಿಶೇಷ ನ್ಯಾಯಾಲಯವು ಸಂಜ್ಞೇಯ ಸ್ವೀಕರಿಸಿದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್‌, 2020ರ ಡಿಸೆಂಬರ್‌ 10ರಂದು ಎಲ್ಲಾ ಪ್ರಕ್ರಿಯೆಗೆ ತಡೆ ನೀಡಿದ್ದು, ಪ್ರಕರಣ ಬಾಕಿಯಿದೆ.

ಈ ಮಧ್ಯೆ, ಸಿಬಿಐ ಆರೋಪ ಪಟ್ಟಿ ಆಧರಿಸಿ, ಪಿಎಂಎಲ್‌ಎ ಅಡಿ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿ, 2022ರ ಆಗಸ್ಟ್‌ 1ರಂದು ತಾತ್ಕಾಲಿಕ ಜಪ್ತಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಸಿಬಿಐ ತನಿಖೆ ನಡೆಸಿರುವ ವಿಧೇಯ ಅಪರಾಧಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಪಿಎಂಎಲ್‌ಎ ಅಡಿ ಮಾಡಿರುವ ಜಪ್ತಿ ಆದೇಶವು ತಪ್ಪಾಗಿದ್ದು, ಅದನ್ನು ವಜಾ ಮಾಡಬೇಕು ಎಂದು ವಾದಿಸಿದ್ದರು. ಇದನ್ನು ಹೈಕೋರ್ಟ್‌ ಪುರಸ್ಕರಿಸಿದೆ.

Related Stories

No stories found.
Kannada Bar & Bench
kannada.barandbench.com