ಕಸಾಪ ಅಕ್ರಮದ ತನಿಖೆ ಅಬಾಧಿತ, ಸಾಮಾನ್ಯ ಸಭೆ ನಿರ್ಣಯವೂ ನ್ಯಾಯಾಲಯದ ಪರಿಶೀಲನೆಗೆ: ಹೈಕೋರ್ಟ್‌

“ಸೊಸೈಟಿಗಳ ನೋಂದಣಿ ಕಾಯಿದೆಯ ಸೆಕ್ಷನ್‌ 25ರ ಅಡಿ ತನಿಖೆಯ ಫಲಿತಾಂಶ ಹಾಗೂ ಕಾಯಿದೆ ಸೆಕ್ಷನ್‌ 27Aರ ಅಡಿ ಕಾರಣವಾಗಿರುವುದು ಮತ್ತು ಎಜಿಎಂ ನಡೆದು ಅಲ್ಲಿ ಯಾವುದೇ ನಿರ್ಣಯವಾದರೂ ಅದು ಕೋರ್ಟ್‌ ಪರಿಶೀಲನೆಗೆ ಒಳಪಡಲಿದೆ” ಎಂದಿರುವ ಹೈಕೋರ್ಟ್‌.
ಕಸಾಪ ಅಕ್ರಮದ ತನಿಖೆ ಅಬಾಧಿತ, ಸಾಮಾನ್ಯ ಸಭೆ ನಿರ್ಣಯವೂ ನ್ಯಾಯಾಲಯದ ಪರಿಶೀಲನೆಗೆ: ಹೈಕೋರ್ಟ್‌
Published on

ಕನ್ನಡ ಸಾಹಿತ್ಯ ಪರಿಷತ್ತು 05.10.2025ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸುವುದಾದರೆ ಪರಿಷತ್ತಿನ ಅವ್ಯವಹಾರಗಳ ಸಂಬಂಧಿತ ಬಾಕಿ ಇರುವ ತನಿಖೆಯು ಮುಂದುವರಿಯಬಹುದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದ್ದು, ಉಭಯ ಪ್ರಕ್ರಿಯೆಗಳ ನಿರ್ಧಾರಗಳನ್ನು ಜಾರಿಗೊಳಿಸುವುದಕ್ಕೂ ಮುನ್ನ ನ್ಯಾಯಾಲಯದ ಮುಂದೆ ಇಡಬೇಕು ಎಂದು ನಿರ್ದೇಶಿಸಿದೆ.

ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ 1960ರ ಸೆಕ್ಷನ್‌ 27A ರ ಅಡಿ ತನಿಖೆಯಲ್ಲಿ ಭಾಗವಹಿಸುವಂತೆ ಸಹಕಾರ ಇಲಾಖೆಯು 15.09.2025ರಂದು ಜಾರಿ ಮಾಡಿರುವ ನೋಟಿಸ್‌ಗೆ ತಡೆ ನೀಡುವಂತೆ ಕೋರಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಮತ್ತು ಇತರೆ ನಾಲ್ವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಕನ್ನಡ ಸಾಹಿತ್ಯ ಪರಿಷತ್ತು 05.10.2025ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸುವುದಾದರೆ ಪರಿಷತ್ತಿನ ಅವ್ಯವಹಾರಗಳ ಸಂಬಂಧಿತ ಬಾಕಿ ಇರುವ ತನಿಖೆಯು ಮುಂದುವರಿಯಬಹುದು. ಉಭಯ ಪ್ರಕ್ರಿಯೆಗಳ ನಿರ್ಧಾರಗಳನ್ನು ಜಾರಿಗೊಳಿಸುವುದಕ್ಕೂ ಮುನ್ನ ನ್ಯಾಯಾಲಯದ ಮುಂದೆ ಇಡಬೇಕು” ಎಂದು ಆದೇಶಿಸಿ, ವಿಚಾರಣೆಯನ್ನು ಅಕ್ಟೋಬರ್‌ 15ಕ್ಕೆ ಮುಂದೂಡಿದೆ.

ಅಲ್ಲದೇ, “ಕಾಯಿದೆಯ ಸೆಕ್ಷನ್‌ 25 ರ ಅಡಿಯ ತನಿಖೆಯ ಫಲಿತಾಂಶ ಮತ್ತು ಕಾಯಿದೆ ಸೆಕ್ಷನ್‌ 27Aರ ಅಡಿ ತನಿಖೆಗೆ ಕಾರಣವಾಗಿರುವುದು ಮತ್ತು ವಾರ್ಷಿಕ ಸಾಮಾನ್ಯ ಸಭೆ ನಡೆದು ಅಲ್ಲಿ ಯಾವುದೇ ನಿರ್ಣಯವಾದರೂ ಅದು ಈ ನ್ಯಾಯಾಲಯದ ಪರಿಶೀಲನೆಗೆ ಒಳಪಡಲಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ಅವರು “22.09.2025ರಂದು ಕಸಾಪ ಅಕ್ರಮ ತನಿಖೆಯ ಕುರಿತಾದ ವಿಚಾರಣೆಯಲ್ಲಿ ಭಾಗವಹಿಸಲು ಅಧ್ಯಕ್ಷ ಜೋಶಿ ಅವರಿಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಅಂದು ಯಾವುದೇ ಪ್ರಕ್ರಿಯೆ ನಡೆದಿಲ್ಲ. ಮುಂದಿನ ದಿನಾಂಕವನ್ನೂ ನಿಗದಿಪಡಿಸಿಲ್ಲ. ಸಮನ್ವಯ ಪೀಠವು ಈ ಹಿಂದೆ ಬೈಲಾ ಪ್ರಕಾರ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಕಸಾಪಗೆ ಅನುಮತಿಸಿದ್ದು, ಕಾಯಿದೆ ಸೆಕ್ಷನ್‌ 25 ರ ಅನ್ವಯ ಕಸಾಪದಲ್ಲಿ ಅಕ್ರಮ ತನಿಖೆಗೂ ಅನುಮತಿಸಿತ್ತು. ಏಕಸದಸ್ಯ ಪೀಠದ ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದ್ದು, ಅದನ್ನು ವಿಭಾಗೀಯ ಪೀಠ ವಜಾಗೊಳಿಸಿತ್ತು” ಎಂದರು.

ಮುಂದುವರಿದು, “ವಿಭಾಗೀಯ ಪೀಠವು ಮಧ್ಯಂತರ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದರಿಂದ ಕಸಾಪವು ಲೆಕ್ಕಪತ್ರ ಸಲ್ಲಿಸಿದ್ದು, ಸಹಕಾರ ಸೊಸೈಟಿಗಳ ಉಪ ನಿಬಂಧಕರು ಮಧ್ಯಂತರ ವರದಿಯನ್ನು ಸಹಕಾರ ಸೊಸೈಟಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಿದ್ದರು. ಇದು ಕಾಯಿದೆಯ ಸೆಕ್ಷನ್‌ 27A ಅಡಿ ತನಿಖೆಗೆ ಅವಕಾಶ ಕಲ್ಪಿಸಿದ್ದು, ಇದರಿಂದ ಸೊಸೈಟಿಯ ಕಾರ್ಯಚಟುವಟಿಕೆಗಳನ್ನು ನಿಭಾಯಿಸಲು ಆಡಳಿತಾಧಿಕಾರಿಯನ್ನು ನೇಮಿಸುವ ಸಾಧ್ಯತೆ ಇದೆ. ಹೀಗಾಗಿ, ನೋಟಿಸ್‌ಗೆ ತಡೆ ನೀಡಬೇಕು” ಎಂದು ಮನವಿ ಮಾಡಿದರು.

Also Read
ಕನ್ನಡ ಸಾಹಿತ್ಯ ಪರಿಷತ್‌ನ ಆರ್ಥಿಕ ವಹಿವಾಟಿನ ತನಿಖೆಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್‌

ಇದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿ ಜಿ ಭಾನು ಪ್ರಕಾಶ್‌ ಅವರು “05.10.2025ರಂದು ನಡೆಸಲು ಉದ್ದೇಶಿಸಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಸಾಪವು ನಿರ್ಣಯ ಕೈಗೊಂಡರೆ ತನಿಖೆಯು ಅನೂರ್ಜಿತವಾಗಲಿದೆ. ಹೀಗಾಗಿ, ಕಾಯಿದೆಯ ಸೆಕ್ಷನ್‌ 27A ಅಡಿ ತನಿಖೆಗೆ ನ್ಯಾಯಾಲಯ ಅನುಮತಿಸಬೇಕು” ಎಂದು ಕೋರಿದ್ದರು.

ಜುಲೈ 26ರಂದು ಹೈಕೋರ್ಟ್‌ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) 2023-24ನೇ ಸಾಲಿನ ಆರ್ಥಿಕ ವಹಿವಾಟಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿತ್ತು. ಆದರೆ, ಕಾರ್ಯಕಾರಿ ಸಮಿತಿಯ ನಿರ್ಧಾರದ ಪ್ರಕಾರ ಬೆಂಗಳೂರು ಅಥವಾ ರಾಜ್ಯದ ಯಾವುದೇ ಸ್ಥಳದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸುವ ಅಧಿಕಾರ ಕಸಾಪಗೆ ಇದೆ ಎಂದಿತ್ತು.

Kannada Bar & Bench
kannada.barandbench.com