ಸತ್ಯ ನಾಶವು ನ್ಯಾಯಾಂಗದೆಡೆಗಿನ ವಿಶ್ವಾಸ ಕುಸಿಯಲು ಕಾರಣವಾಗುತ್ತದೆ: ಸಿಂಗಪೋರ್ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್

ಭಾರತದ ಸರ್ವೋಚ್ಚ ನ್ಯಾಯಾಲಯದ ಸಂಸ್ಥಾಪನಾ ದಿನದ ಅಂಗವಾಗಿ ಶನಿವಾರ ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ʼಬದಲಾಗುತ್ತಿರುವ ಜಗತ್ತಿನಲ್ಲಿ ನ್ಯಾಯಾಂಗದ ಪಾತ್ರʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
Singapore Chief Justice S Menon
Singapore Chief Justice S Menon

ನ್ಯಾಯಾಲಯಗಳಲ್ಲಿ ಸತ್ಯ ನಾಶವನ್ನು ನಿಯಂತ್ರಿಸದೆ ಹೋದರೆ ಜನತೆ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಹೀಗಾಗಿ ಸತ್ಯ ನಾಶವು ನ್ಯಾಯಾಲಯಗಳೊಳಗೆ ಪ್ರವೇಶಿಸುವುದನ್ನು ತಡೆಯಬೇಕು ಎಂದು ಸಿಂಗಪೋರ್‌ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಅಭಿಪ್ರಾಯಪಟ್ಟರು.

ಭಾರತದ ಸರ್ವೋಚ್ಚ ನ್ಯಾಯಾಲಯದ ಸಂಸ್ಥಾಪನಾ ದಿನದ ಮೊದಲ ಆಚರಣೆಯ ಅಂಗವಾಗಿ ಶನಿವಾರ ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ  ಕಾರ್ಯಕ್ರಮದಲ್ಲಿ ʼಬದಲಾಗುತ್ತಿರುವ ಜಗತ್ತಿನಲ್ಲಿ ನ್ಯಾಯಾಂಗದ ಪಾತ್ರʼ ಎಂಬ ವಿಷಯದ ಕುರಿತು ಅವರು ಪ್ರಥಮ ವಾರ್ಷಿಕ ಉಪನ್ಯಾಸ ನೀಡಿದರು.

ನ್ಯಾ. ಮೆನನ್‌ ಮಾತಿನ ಪ್ರಮುಖ ಅಂಶಗಳು ಹೀಗಿವೆ:

  1. ಸತ್ಯದ ವಿನಾಶ ನಿಯಂತ್ರಿಸದಿದ್ದರೆ ನ್ಯಾಯಧೀಶರ ಧ್ವನಿ ಮತ್ತೊಂದು ಅಭಿಪ್ರಾಯವಾಗುತ್ತದೆ. ಆಗ ನ್ಯಾಯಾಧೀಶರ ತೀರ್ಪುಗಳು ಅವರ ಅಭಿಪ್ರಾಯದಂತೆ ಕಾಣತೊಡಗುತ್ತವೆ. ಹಾಗಾಗಿಯೇ ಕೆಲವೊಮ್ಮೆ ಕೆಲ ನ್ಯಾಯಮೂರ್ತಿಗಳ ತೀರ್ಪುಗಳನ್ನು ಅವರ ವೈಯಕ್ತಿಕ ಅಭಿಪ್ರಾಯ ಎನ್ನಲಾಗುತ್ತದೆ. ಸತ್ಯದ ಅವನತಿಯು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ನಾಶವಾಗಲು ಕಾರಣವಾಗುತ್ತದೆ.

  2. ನ್ಯಾಯಾಂಗಕ್ಕೆ ನ್ಯಾಯಸಮ್ಮತತೆಯ ಅಗತ್ಯವಿದ್ದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಗ್ರಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿದೆ. ಜಗತ್ತಿನ ಕೆಲ ಸಮಸ್ಯೆಗಳನ್ನು ಪರಿಹರಿಸಲು ನ್ಯಾಯಾಂಗ ಸಜ್ಜಾಗಿರದಿದ್ದರೂ ಅದನ್ನು ಗ್ರಹಿಸಲು ಅದು ಅಣಿಗೊಳ್ಳಬೇಕು. ನ್ಯಾಯಾಂಗವು ಸಮರ್ಥವಾಗಿ ಕಾರ್ಯನಿರ್ವಹಿಸಲು ಜನರ ವಿಶ್ವಾಸದ ಅಗತ್ಯವಿದೆ. ಆ ವಿಶ್ವಾಸವನ್ನು ಪಡೆಯಲು ಸಾಕಷ್ಟು ಶ್ರಮಿಸಬೇಕಾಗುತ್ತದೆ. ನಾವು ಕೇವಲ ಶ್ರೀಮಂತರ ಸೇವೆಗೆ ಮಾತ್ರ ಇದ್ದೇವೆಯೇ ಅಥವಾ ನ್ಯಾಯದಾನ ಮಾಡಲು ಇದ್ದೇವೆಯೇ? ಇವುಗಳಲ್ಲಿ ಯಾವುದನ್ನು ಜನತೆ ನಂಬಬೇಕು ಎನ್ನುವ ಬಗ್ಗೆ ನಾವು ಆಲೋಚಿಸಬೇಕಿದೆ.

  3. ಹೊಸ ಜಾಗತಿಕ ಸವಾಲುಗಳು ಮೊದಲು ರಾಜಕೀಯವಾಗಿರುತ್ತವೆ. ಆದರೆ ಅವುಗಳಿಗೆ ಕಾನೂನು ಆಯಾಮವೂ ಇರುತ್ತದೆ. ಕ್ರಿಪ್ರೋ ಕರೆನ್ಸಿಯಂತಹ ಜಾಗತಿಕ ಸವಾಲುಗಳು ಹೊಸ ಕಾನೂನು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇಂತಹವುಗಳನ್ನು ಎದುರಿಸಲು ನ್ಯಾಯಾಧೀಶರು ವಿವಿಧ ನ್ಯಾಯಶಾಸ್ತ್ರಗಳ ಬೆಳವಣಿಗೆಯ ಬಗ್ಗೆ ಸಂಪೂರ್ಣವಾಗಿ ಅರಿವು ಹೊಂದಿದ್ದು ಸಂವೇದನಾಶೀಲರಾಗಿರಬೇಕು. ಹಾಗಾದಾಗ ಮಾತ್ರ ನ್ಯಾಯದಾನ ಸಾಧ್ಯ.

  4. ನ್ಯಾಯಾಧೀಶರು ಸಮಸ್ಯೆ ಕುರಿತು ಅಭಿಪ್ರಾಯ ಮಂಡಿಸದಂತೆ ಅಧಿಕಾರ ಪ್ರತ್ಯೇಕತೆ ಸಿದ್ಧಾಂತವು ಸಂಪೂರ್ಣವಾಗಿ ತಡೆಯಬಾರದು. ಅಧಿಕಾರ ಪ್ರತ್ಯೇಕತೆಯ ಕಾರಣಕ್ಕೆ ಸಾಮಾನ್ಯ ನಾಗರಿಕರಿಂದ ನ್ಯಾಯಾಧೀಶರು ಅನ್ಯವಾಗಿರುತ್ತಾರೆ ಎಂದು ಸದಾ ಹೇಳಲಾಗುತ್ತದೆ. ಹಾಗೆಂದ ಮಾತ್ರಕ್ಕೆ ನ್ಯಾಯಾಂಗ ಸಂಪೂರ್ಣ ಅನ್ಯವಾಗಿರಬೇಕು ಎಂಬುದು ಇದರ ಅರ್ಥವಲ್ಲ. ನಾವು ಕೇವಲ ನ್ಯಾಯಾಂಗ ವ್ಯವಸ್ಥೆಯೊಳಗಿನ ಪಥಿಕರಾಗದೆ ಅದರ ವಿಕಸನದ ಸಕ್ರಿಯ ಭಾಗೀದಾರರು ಸಹ ಆಗಬೇಕು.

  5. ನ್ಯಾಯಾಲಯಗಳು ತಮ್ಮದೇ ನ್ಯಾಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನಗಳು ಈಗಿಲ್ಲ. ಅಂತಾರಾಷ್ಟ್ರೀಯ ನ್ಯಾಯಿಕ ವ್ಯವಹಾರವು ಅಗತ್ಯವಾಗಿದ್ದು, ನ್ಯಾಯಿಕ ರಾಯಭಾರತ್ವದ ಅಗತ್ಯವಿದೆ. ಇದಕ್ಕೆ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಭಾಗೀದಾರಿಕೆಯ ಅಗತ್ಯವಿದೆ. ನಾವು ಬಹುರಾಷ್ಟ್ರೀಯ ನ್ಯಾಯ ವ್ಯವಸ್ಥೆಯ ಅಭಿವೃದ್ಧಿಯತ್ತ ಶ್ರಮಿಸಬೇಕಿದೆ.

  6. ಸಹಾಯಶೀಲ ತಂತ್ರಜ್ಞಾನವನ್ನು ಬಳಕೆ ಮಾಡಲು ತಂತ್ರಜ್ಞಾನದ ವ್ಯಾಪಕ ಸಾಧ್ಯತೆ ಬಗ್ಗೆ ನಾವು ಗಮನ ಹರಿಸಬೇಕಿದೆ. ಉದಾಹರಣೆಗೆ ನಮ್ಮ ಕೌಟುಂಬಿಕ ನ್ಯಾಯಾಲಯಗಳಲ್ಲಿ ವಿಚ್ಛೇದನ ಇ-ಸೇವೆಯು ಪ್ರಕರಣಗಳಲ್ಲಿ ಸ್ವಯಂ ಪ್ರತಿನಿಧಿಸಲು ಅನುಕೂಲ ಕಲ್ಪಿಸಿವೆ. ನ್ಯಾಯದಾನದಲ್ಲಿ ನಾವು ನಾವೀನ್ಯತೆಯ ಸಾಧ್ಯತೆಯ ಬಗ್ಗೆ ನಿರಂತರ ಶ್ರಮಿಸಬೇಕಿದೆ.

  7. ನ್ಯಾಯಾಧೀಶರು ಕೌಶಲ್ಯಗಳನ್ನು ಹೆಚ್ಚಿಕೊಳ್ಳುತ್ತಿರಬೇಕು ಮತ್ತು ತರಬೇತಿ ಪಡೆಯುತ್ತಿರಬೇಕು. ಅವರಿಗೆ ಯಾವುದೇ ತರಬೇತಿ ಅಗತ್ಯವಿಲ್ಲ ಮತ್ತು ನೇಮಕಾತಿಯ ವೇಳೆಯೇ ಅವರು ಸಜ್ಜಾಗಿರುತ್ತಾರೆ ಎಂಬ ಐತಿಹಾಸಿಕ ದೃಷ್ಟಿಕೋನ ಈಗ ಇಲ್ಲ. ಈಗ ವೈಯಕ್ತಿಕ ಆಧಾರದ ಮೇಲೆ ಕೌಶಲ್ಯ ಹೆಚ್ಚಿಸುವುದು ಪರಿಹಾರವಲ್ಲ ಎಂಬುದು ನಮಗೆ ತಿಳಿದಿದೆ.

ಭಾರತ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆಎಂ ಜೋಸೆಫ್ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.

Related Stories

No stories found.
Kannada Bar & Bench
kannada.barandbench.com