ಯುಪಿಎಸ್‌ಸಿ ಜಿಹಾದ್ ವಿವಾದ: ನಾವು ಯಾವ ಬಗೆಯ ತಡೆಯಾಜ್ಞೆ ನೀಡಬೇಕು? ಸುಪ್ರೀಂ ಕೋರ್ಟ್ ಜಿಜ್ಞಾಸೆ

ಹಿಂದೂ ಭಯೋತ್ಪಾದನೆ ಬಗ್ಗೆ ಎನ್‌ಡಿಟಿವಿ ವರದಿ ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿದ್ದ ಸುದರ್ಶನ್ ಟಿವಿಯನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತು. “2008ರಲ್ಲಿ ನಡೆದ ಘಟನೆಯನ್ನು ಈಗ ಪ್ರಶ್ನಿಸುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂದಿತು.
ಯುಪಿಎಸ್‌ಸಿ ಜಿಹಾದ್ ವಿವಾದ: ನಾವು ಯಾವ ಬಗೆಯ ತಡೆಯಾಜ್ಞೆ ನೀಡಬೇಕು? ಸುಪ್ರೀಂ ಕೋರ್ಟ್ ಜಿಜ್ಞಾಸೆ
Indu Malhotra, Justices DY Chandrachud and KM Joseph

ವಾಕ್ ಸ್ವಾತಂತ್ರ್ಯ ವಿಚಾರಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ಜಾರಿಗೊಳಿಸುವಲ್ಲಿ ನ್ಯಾಯಾಲಯದ ಪಾತ್ರದ ಕುರಿತು ವಿಸ್ತೃತ ಚರ್ಚೆ ನಡೆಸಿದ ಸುಪ್ರೀಂ ಕೋರ್ಟ್ ಸುದರ್ಶನ್ ಟಿವಿಯ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಬುಧವಾರಕ್ಕೆ (ಸೆಪ್ಟೆಂಬರ್ 23) ಮುಂದೂಡಿತು.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ತಡೆಯಾಜ್ಞೆಗಳ ವ್ಯಾಪ್ತಿ ಎಷ್ಟಿರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿತು.

“ಭಾರತೀಯ ಜಕಾತ್ ಫೌಂಡೇಶನ್‌ಗೆ (ಜಡ್ಎಫ್‌ಐ) ವಿದೇಶಿ ದೇಣಿಗೆ ಸಂದಾಯವಾಗುತ್ತಿದೆ ಎಂದು ಹೇಳುವಾಗ ಸುದರ್ಶನ್ ಟಿವಿಯ ಸಂಪಾದಕರಿಗೆ ಸ್ವಲ್ಪ ಸಾರ್ವಜನಿಕ ಹಿತಾಸಕ್ತಿ ಇದ್ದಿರಬಹುದು ಮತ್ತು ಇದು ಗುರುತರ ವಿಚಾರ. ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಅವರಿಗಿದೆ. ನಾವು ತಡೆಯಾಜ್ಞೆ ನೀಡಿದರೆ ರಕ್ಷಿತ ವಾಕ್ ಸ್ವಾತಂತ್ರ್ಯವನ್ನೂ ಒಳಗೊಳ್ಳುವ ಪೂರ್ಣ ತಡೆಯಾಜ್ಞೆ ನೀಡಬೇಕೆ ಅಥವಾ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಅಥವಾ ಪಿತೂರಿ ಸಿದ್ಧಾಂತ ಪ್ರಸಾರ ಮಾಡುವ ಅಥವಾ ಇಡೀ ಸಮುದಾಯಕ್ಕೆ ಒಂದೇ ಬಣ್ಣ ಹಚ್ಚುವ ಪ್ರಸಾರಕ್ಕೆ ಅವಕಾಶ ಮಾಡಿಕೊಡುವ ತಡೆಯಾಜ್ಞೆ ನೀಡಬೇಕೆ” ಎಂದು ನ್ಯಾಯಪೀಠ ಪ್ರಶ್ನಿಸಿತು.

ಸುದ್ದಿ ಪ್ರಸರಣ ಒಕ್ಕೂಟ (ಎನ್‌ಬಿಎಫ್‌) ಪ್ರತಿನಿಧಿಸಿದ್ದ ಮುಕುಲ್ ರೋಹ್ಟಗಿ ಅವರು “ಸುದರ್ಶನ್ ಟಿವಿಯ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಎನ್‌ಬಿಎಫ್‌ ಸುದ್ದಿ ಪ್ರಸರಣ ಸಂಸ್ಥೆಗಿಂತ (ಎನ್‌ಬಿಎ) ವಿಭಿನ್ನವಾಗಿದ್ದು, ಸ್ವನಿಯಂತ್ರಣದಂಥ ಮಹತ್ವದ ವಿಚಾರದ ಬಗ್ಗೆ ಗಮನಹರಿಸಿರುವುದಾಗಿ” ಹೇಳಿದರು.

ಓಪ್ ಇಂಡಿಯಾ ಮತ್ತು ಇಂಡಿಕ್ ಕಲೆಕ್ಟೀವ್ ಪರ ವಾದಿಸಿದ ಜೆ ಸಾಯಿ ದೀಪಕ್ ಅವರು ದ್ವೇಷ ಭಾಷೆಗೆ ಸಂಬಂಧಿಸಿದಂತೆ ಮಹತ್ವದ ತತ್ವಗಳ ಬಗ್ಗೆ ಗಮನ ನೆಟ್ಟಿರುವುದರಿಂದ ಮಧ್ಯಪ್ರವೇಶಿಸಲಾಗುತ್ತಿದೆ. ಈ ವಿಚಾರವು ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದಿರುವ ಅವರು ಧಾರ್ಮಿಕ ವರದಿಗಾರಿಕೆಗೆ ಸಂಬಂಧಿಸಿದಂತೆ ಸಮಕಾಲೀನ ಮಾನದಂಡಗಳ ಬಗ್ಗೆ ಓಪ್ಇಂಡಿಯಾ ನಡೆಸಿರುವ ಸಂಶೋಧನಾ ದಾಖಲೆ ಪ್ರಸ್ತುತಪಡಿಸಲು ನಿರ್ಧರಿಸಿದರು. ಈ ಸಂಶೋಧನಾ ವರದಿಯಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿರುವ 100 ಐತಿಹ್ಯಗಳನ್ನು ಉಲ್ಲೇಖಿಸಲಾಗಿದೆ.

ಜಕಾತ್ ಫೌಂಡೇಶನ್ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ಕೊನೆಯದಾಗಿ ವಾದ ಮಂಡಿಸಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

Also Read
ಯುಪಿಎಸ್‌ಸಿ ಜಿಹಾದ್ ವಿವಾದ: ಟಿವಿ ಚಾನೆಲ್‌ಗಳಿ‌ಗೂ ಮುನ್ನ ಡಿಜಿಟಲ್ ಮಾಧ್ಯಮ ನಿಯಂತ್ರಣ ಅನಿವಾರ್ಯ ಎಂದ ಕೇಂದ್ರ ಸರ್ಕಾರ

ಹಿಂದೂ ಭಯೋತ್ಪಾದನೆಗೆ ಸಂಬಂಧಿಸಿದಂತೆ ಎನ್ ಡಿಟಿವಿಯ ವರದಿಗಾರಿಕೆ ಕುರಿತು ಅಫಿಡವಿಟ್ ಸಲ್ಲಿಸಿದ್ದ ಸುದರ್ಶನ್ ಟಿವಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾ. ಡಿ ವೈ ಚಂದ್ರಚೂಡ್ ಅವರು “ಎನ್‌ ಡಿಟಿವಿ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸುವಂತೆ ನಿಮ್ಮನ್ನು ನಾವು ಕೇಳಿದ್ದೇವೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.

ವಿಚಾರಣೆಯ ಸಂದರ್ಭದಲ್ಲಿ ಕೇಳಿಬಂದ ಪ್ರಮುಖ ಅಂಶಗಳು ಇಂತಿವೆ:

 • ಇದು ನ್ಯಾಯ ಪ್ರಕ್ರಿಯೆಗೆ ವಿರುದ್ಧವಾಗಿದೆ. ನಾವು ಪ್ರಶ್ನೆಯೊಂದನ್ನು ಕೇಳಿದೆವು ಎಂದಾಕ್ಷಣ ನೀವು ಅಫಿಡವಿಟ್‌ ಫೈಲ್ ಮಾಡುತ್ತಲೇ ಇರಿ ಎಂದಲ್ಲ. ಇದು ನ್ಯಾಯಾಂಗದ ಸಂಪ್ರದಾಯಗಳಿಗೆ ವಿರುದ್ಧವಾದುದು. ಇದು ಅರ್ಜಿಯ ಪರಿಣಾಮವನ್ನೇ ಬದಲಿಸುತ್ತದೆ. 2008ರಲ್ಲಿ ಏನು ನಡೆದಿದೆ ಎಂಬ ಬಗ್ಗೆ ಈಗ ಪ್ರಶ್ನೆ ಎತ್ತುವ ಅಗತ್ಯವಿಲ್ಲ- ನ್ಯಾ. ಡಿ ವೈ ಚಂದ್ರಚೂಡ್

 • ಆಡಳಿತ ವರ್ಗವನ್ನು ಕೈವಶ ಮಾಡಲು ವಿದೇಶಿ ದೇಣಿಗೆ ಹರಿದು ಬರುತ್ತಿದೆ. ನಾವು ಕಾನೂನು ಉಲ್ಲಂಘಿಸಿದರೆ ಕ್ರಮ ಎದುರಿಸಲು ಸಿದ್ಧ- ಸುದರ್ಶನ್ ಟಿವಿ ಪರ ವಕೀಲ ವಿಷ್ಣು ಶಂಕರ್ ಜೈನ್

 • ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮಧ್ಯಪ್ರವೇಶಿಸುವ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿರುವ ವಕೀಲ ಶಾದನ್ ಫರಾಸತ್ ಅವರು ಕಾರ್ಯಕ್ರಮ ಪ್ರಚಾರಕ್ಕೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣಿಚಿಕೊಂಡಿದೆ. ಕಾರ್ಯಕ್ರಮ ಸಂಹಿತೆಗೆ ಪೂರಕವಾಗಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿಸುವಾಗ ಆಲೋಚಿಸಿ ಕ್ರಮಕೈಗೊಂಡಿಲ್ಲ.

 • “ಈ ಕಾರ್ಯಕ್ರಮದಲ್ಲಿ ಮುಸ್ಲಿಮರ ಮೇಲೆ ಯಾವ ಮಟ್ಟಿಗೆ ದಾಳಿ ನಡೆಸಲಾಗಿದೆ? ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದಾದರೆ ನಮ್ಮ ಹಸ್ತಕ್ಷೇಪವನ್ನೂ ಮಿತಿಗೊಳಿಸಲಾಗುವುದು. ಇದು ಜಡ್‌ಎಫ್ಐ ಬಗ್ಗೆಯಾದರೆ ನಾವು ಮಧ್ಯಪ್ರವೇಶಿಸುವುದಿಲ್ಲ. ಸಮುದಾಯದ ವಿರುದ್ಧದ ದ್ವೇಷ ಭಾಷೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ನಾವು ಗಮನ ಇಡಬೇಕಿದೆ”- ನ್ಯಾ. ಡಿ ವೈ ಚಂದ್ರಚೂಡ್

 • ನಿರ್ದಿಷ್ಟ ಸಮುದಾಯ ಮತ್ತು ನಮ್ಮ ನಾಗರಿಕ ಘನತೆಯನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಬಹುಸಂಸ್ಕೃತಿಯ ನಾಡಿನಲ್ಲಿ ನ್ಯಾಯಾಂಗ ಸೇರಿದಂತೆ ಎಲ್ಲಾ ಅಂಗಗಳ ಮೇಲೆ ಪ್ರತಿಯೊಬ್ಬ ವ್ಯಕ್ತಿಯ ಗೌರವ ಕಾಪಾಡುವ ಗುರುತರ ಜವಾಬ್ದಾರಿ ಇರುತ್ತದೆ- ಶಾದನ್ ಫರಾಸತ್

 • ಮುಸಲ್ಮಾನರು ಹಿಂದೂಸ್ಥಾನವನ್ನು ಸಂಚಿನ ಮೂಲಕ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುವಾಗ ಹಿಂದೂಗಳು ನಿದ್ರಿಸುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಹೇಳಲಾಗಿದೆ- ಫರಾಸತ್

 • ಬಲಪಂತೀಯ ವಿಚಾರಧಾರೆ ಮೈಗೂಡಿಸಿಕೊಂಡಿರುವ ಮಧು ಕಿಶ್ವರ್ ಅವರು ಹೀಗಾದರೆ “ನಾವು ಬದುಕಿ ಉಳಿಯಲಿದ್ದೇವೆಯೇ” ಎಂದು ಕಾರ್ಯಕ್ರಮದಲ್ಲಿ ಕೇಳುತ್ತಾರೆ. ಮೈ ಲಾರ್ಡ್, ಇಲ್ಲಿ ಮುಸ್ಲಿಮರ ಜಾಗದಲ್ಲಿ ಯಹೂದಿಗಳನ್ನಿರಿಸಿ ನೋಡಿ. ಆಗ ಪ್ರಕರಣದ ಜಾಗತಿಕ ಸ್ವರೂಪ ತಿಳಿಯುತ್ತದೆ-ಫರಾಸತ್

 • ನೀವು ಅವರಿಗೆ (ಸುದರ್ಶನ್ ಟಿವಿ) ರಕ್ಷಿತ ವಾಕ್‌ ಸ್ವಾತಂತ್ರ್ಯದಡಿಯಲ್ಲಿ ಕಾರ್ಯನಿರ್ವಹಿಸುವಂತೆ ತಿಳಿಸಿದಿರಿ, ದ್ವೇಷ ಭಾಷಣದಿಂದ ದೂರವಿರುವಂತೆ ಹೇಳಿದಿರಿ. ದ್ವೇಷ ಭಾಷಣವು ಏಕಾಂಗಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದೆಲ್ಲವೂ ಇದೇ ರೀತಿ ಮುಂದುವರಿಯಬೇಕೆ? ದ್ವೇಷ ಭಾಷಣದ ವಿಕೃತ ಪರಿಸರವು ಒಂದು ಸಮುದಾಯವನ್ನು ಅವಕಾಶಗಳಿಂದ ವಂಚಿಸುತ್ತದೆ. ಅವಕಾಶಗಳನ್ನು ತಪ್ಪಿಸುತ್ತದೆ. ಹಾಗಾಗಿ ದ್ವೇಷ ಭಾಷಣವನ್ನು ನಿರ್ಬಂಧಿಸಬೇಕು-ಫರಾಸತ್

 • ಒಂದು ಸಮುದಾಯದ ವಿರುದ್ಧ ನಿರಂತರವಾಗಿ ಮಾಡುವ ದ್ವೇಷ ಭಾಷಣವು ಹೇಗೆ ಜನಾಂಗೀಯ ಹತ್ಯೆಗೆ ಕಾರಣವಾಗುತ್ತದೆ ಎನ್ನುವುದನ್ನು ಯಹೂದಿ, ರೋಹಿಂಗ್ಯಾಗಳ ಉದಾಹರಣೆ ಹಾಗೂ ರುವಾಂಡದ ಜನಾಂಗೀಯ ಹತ್ಯೆಯ ಉಲ್ಲೇಖದ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ ಫರಾಸತ್.

 • ಇದು ಟ್ರೇಡ್‌ ಮಾರ್ಕ್‌ಗೆ ಸಂಬಂಧಿಸಿದ ಪ್ರಕರಣವಲ್ಲ. ಹಾಗಿದ್ದರೆ, ನಾವು “ಗಡ್ಡಧಾರಿ ಅಥವಾ ಟೋಪಿ ಇರುವ ಮನುಷ್ಯರ ಚಿತ್ರ ಬಳಸಬೇಡಿ,” ಎನ್ನಬಹುದಿತ್ತು. ನಾವು ನಿರ್ದಿಷ್ಟವಾಗಿ ಹೀಗೆ ಮಾಡಿ ಎಂದು ಹೇಳುವುದು ಸಾಂವಿಧಾನಿಕ ನ್ಯಾಯಾಲಯದ ಪ್ರಮಾಣಗಳಿಗೆ ಅನುಗುಣವಾದುದಲ್ಲ-ನ್ಯಾ.ಚಂದ್ರಚೂಡ್‌

 • ವಿಚಾರಣೆಯನ್ನು ಸೆಪ್ಟೆಂಬರ್ 23ರ ಮಧ್ಯಾಹ್ನ 2 ಗಂಟೆಗೆ ಮುಂದೂಡಿದ ನ್ಯಾಯಾಲಯ. ಮುಂದಿನ ವಿಚಾರಣೆಯ ವೇಳೆ, ವಕೀಲರಾದ ಸಾಯಿ ದೀಪಕ್, ಮುಕುಲ್ ರೋಹಟ್ಗಿ ಮತ್ತು ಜೇಠ್ಮಲಾನಿಯವರ ವಾದವನ್ನು ನ್ಯಾಯಪೀಠ ಆಲಿಸಲಿದೆ.

Related Stories

No stories found.