ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಐಐಟಿ-ಬಿಎಚ್‌ಯು) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಮೂವರು ಆರೋಪಿಗಳನ್ನು ವಾರಾಣಸಿಯ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಾರಾಣಸಿ ನಿವಾಸಿಗಳಾದ ಕುನಾಲ್ ಪಾಂಡೆ, ಅಭಿಷೇಕ್ ಚೌಹಾಣ್ ಹಾಗೂ ಸಕ್ಷಮ್ ಪಟೇಲ್ ಎಂಬ ಮೂವರು ಆರೋಪಿಗಳನ್ನು 2023ರ ಡಿಸೆಂಬರ್ 31ರಂದು ವಾರಾಣಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಐಐಟಿ-ಬಿಎಚ್‌ಯು ಕ್ಯಾಂಪಸ್‌ನಲ್ಲಿ ಬಿ ಟೆಕ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರನ್ನು 60 ದಿನಗಳ ನಂತರ ಬಂಧಿಸಲಾಗಿತ್ತು.
ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಐಐಟಿ ಬಿಎಚ್‌ಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿತ್ತು. ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ತನ್ನನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ವೀಡಿಯೊ ರೆಕಾರ್ಡ್ ಮಾಡಿ ಕೊಲೆ ಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದರು. ಈ ಘಟನೆಯಿಂದಾಗಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಸುಧಾರಿತ ಭದ್ರತಾ ಕ್ರಮಗಳಿಗೆ ಆಗ್ರಹಿಸಿದ್ದರು.
ನಂತರ ಸಂತ್ರಸ್ತೆ ಲಂಕಾ ಪೊಲೀಸ್ ಠಾಣೆಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ಆ ಬಳಿಕ ಸಾಮೂಹಿಕ ಅತ್ಯಾಚಾರದ ಆರೋಪವನ್ನು ಎಫ್ಐಆರ್‌ನಲ್ಲಿ ಸೇರಿಸಲಾಯಿತು.