ಪ್ರಸಾದ್ ಸ್ಟುಡಿಯೋ ಕೊಠಡಿಯಲ್ಲಿ ಒಂದು ದಿನ ಧ್ಯಾನ ಮಾಡಲು ಇಳಯರಾಜಗೆ ಅವಕಾಶವಿತ್ತ ಮದ್ರಾಸ್ ಹೈಕೋರ್ಟ್

ನವೀಕರಣ ಹಿನ್ನೆಲೆಯಲ್ಲಿ ಸ್ಟುಡಿಯೋ ಪ್ರವೇಶಿಸದಂತೆ ಇಳಯರಾಜರನ್ನು ತಡೆಯಲಾಗಿತ್ತು. ಕೊಠಡಿ ಭೋಗ್ಯಕ್ಕೆ ನೀಡುವಂತೆ ಕೋರಿದ್ದರೂ ಸ್ಟುಡಿಯೋ ಮಾಲೀಕರು ಒಪ್ಪಿರಲಿಲ್ಲ ಎಂದು ತಿಳಿದುಬಂದಿದೆ.
Ilayaraja
IlayarajaHindustan Times

ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಮತ್ತು ಪ್ರಸಾದ್‌ ಸ್ಟುಡಿಯೋಸ್‌ ಮಾಲೀಕರ ನಡುವೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ರಾಜೀಸಂಧಾನ ಏರ್ಪಟ್ಟಿದ್ದು ಪರಿಣಾಮವಾಗಿ ಕಳೆದ 35 ವರ್ಷಗಳಿಂದ ತಾವು ರಾಗ ಸಂಯೋಜಿಸಿದ್ದ ಪ್ರಸಾದ್‌ ಸ್ಟುಡಿಯೋದ ಕೋಣೆಯಲ್ಲಿ ತಮ್ಮ ನಿರ್ಗಮನಕ್ಕೂ ಮೊದಲು ಒಂದು ದಿನದ ಮಟ್ಟಿಗೆ ಧ್ಯಾನ ಮಾಡಲು ಇಳಯರಾಜ ಅವರಿಗೆ ಅವಕಾಶ ದೊರೆಯಲಿದೆ. ಇದೇ ವೇಳೆ 2019ರಲ್ಲಿ ಸ್ಟುಡಿಯೋಗೆ ಪ್ರವೇಶಿಸಲು ಅವಕಾಶ ನೀಡದಿರುವುದನ್ನು ಪ್ರಶ್ನಿಸಿ ದಾಖಲಿಸಲಾಗಿದ್ದ ಮೊಕದ್ದಮೆಗಳನ್ನು ರಾಜಿ ಷರತ್ತಿನಂತೆ ಇಳಯರಾಜ ಹಿಂಪಡೆಯಲಿದ್ದಾರೆ.

ಕ್ರಿಸ್‌ಮಸ್ ರಜೆಗೂ ಮುನ್ನ ಮದ್ರಾಸ್‌ ಹೈಕೋರ್ಟ್‌ನ ಈ ವರ್ಷದ ಕೊನೆಯ ಕೆಲಸದ ದಿನದಂದು ನ್ಯಾಯಮೂರ್ತಿ ಎನ್‌ ಸತೀಶ್‌ ಕುಮಾರ್‌ ಅವರು ಇಳಯರಾಜ ಮತ್ತು ಪ್ರಸಾದ್‌ ಸ್ಟುಡಿಯೋ ನಡುವಿನ ದಾವೆಯನ್ನು ವಿಲೇವಾರಿ ಮಾಡುತ್ತಾ ಈ ಕೆಳಗಿನ ನಿರ್ದೇಶನಗಳನ್ನು ದಾಖಲಿಸಿದರು:

 • ಕಳೆದ 35 ವರ್ಷಗಳಿಂದ ಇಳಯರಾಜ ತಾವು ಸಂಗೀತ ಸಂಯೋಜಿಸಿದ ಕೋಣೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಒಂದು ದಿನ ಅವರು ಅಲ್ಲಿ ಧ್ಯಾನನಿರತರಾಗಬಹುದು.

 • ಇಳಯರಾಜ ಈ ಹಿಂದೆ ಬಳಸುತ್ತಿದ್ದ ಈಗ ಐಟಿ ಕೋಣೆಯಾಗಿರುವ ಸ್ಥಳಕ್ಕೆ ಅವರು ಪ್ರವೇಶಿಸಿದ ನಂತರ ಅಲ್ಲಿ ಬೇರೊಬ್ಬರ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ. ಪ್ರತಿವಾದಿಗಳು (ಸ್ಟುಡಿಯೋ ಮಾಲೀಕರು) ಕೋಣೆಯೊಳಗೆ ಯಾರೂ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಯತ್ನಿಸಬೇಕು.

 • ಅವರು ಧ್ಯಾನದಲ್ಲಿ ತೊಡಗಿರುವ ವೇಳೆ ಅದೇ ಆವರಣದಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿರುವ ಇಳಯರಾಜರಿಗೆ ಸಂಬಂಧಿಸಿದ ಸಾಮಾನು ಸರಂಜಾಮುಗಳನ್ನು ಮೂವರ್ಸ್‌ ಅಂಡ್‌ ಪಾಕರ್ಸ್‌ ಮೂಲಕ ಸಾಗಾಟ ಮಾಡಬೇಕು. ಈ ಕಾರ್ಯದಲ್ಲಿ ಪ್ರತಿವಾದಿಗಳು ತೊಡಗಿಕೊಳ್ಳತಕ್ಕದ್ದು.

 • ಸರಕುಗಳ ಸಾಗಾಟಕ್ಕೂ ಮೊದಲು ನ್ಯಾಯಾಲಯ ನೇಮಿಸಿರುವ ಕಮಿಷನರ್‌ ಪ್ರತ್ಯೇಕ ಕೋಣೆಯಲ್ಲಿ ಇರಿಸಿರುವ ವಸ್ತುಗಳ ಲೆಕ್ಕ ತೆಗೆದುಕೊಳ್ಳಬೇಕು.

 • ಇಳಯರಾಜಾ ಅವರು ಆವರಣ ಪ್ರವೇಶಿಸುವ ಸಂದರ್ಭದಲ್ಲಿ ಕಮಿಷನರ್‌ ಜೊತೆಗೆ ಕೇವಲ ಮೂರು ಮಂದಿ ಮಾತ್ರ ಅಂದರೆ ಒಬ್ಬ ಖಾಸಗಿ ಸಹಾಯಕ, ಇಬ್ಬರು ಸಂಗೀತ ಸಹಾಯಕರು ಇರತಕ್ಕದ್ದು.

 • ಇಳಯರಾಜ ಮತ್ತು ಪ್ರತಿವಾದಿಗಳಿಬ್ಬರೂ ಪರಸ್ಪರ ಯಾವುದೇ ವಾಗ್ವಾದದಲ್ಲಿ ತೊಡಗುವಂತಿಲ್ಲ. ಒಬ್ಬರು ಮತ್ತೊಬ್ಬರಿಗೆ ಸಂದೇಶ ರವಾನಿಸಲು ಬಯಸಿದರೆ ಅದು ನ್ಯಾಯಾಲಯ ನೇಮಿಸಿದ ಅಡ್ವೊಕೇಟ್‌ ಕಮಿಷನರ್‌ ಮೂಲಕ ಮಾತ್ರ ನಡೆಯಬೇಕು. ಯಾವುದೇ ಹಕ್ಕುಗಳನ್ನು ಪ್ರತಿಪಾದಿಸುತ್ತ ಫಿರ್ಯಾದಿ ಮತ್ತು ಪ್ರತಿವಾದಿ ಖುದ್ದಾಗಿ ವಾದದಲ್ಲಿ ತೊಡಗುವಂತಿಲ್ಲ.

 • ಸ್ಟುಡಿಯೋ ವಿರುದ್ಧ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಇಳಯರಾಜ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಮತ್ತು ತಮ್ಮ ನಡುವೆ ಇರುವ ವಿವಾದ ಕುರಿತು ಮೌನವಾಗಿರಲು ಒಪ್ಪಿಕೊಂಡಿದ್ದಾರೆ.

 • ಆವರಣ ಪ್ರವೇಶಿಸುವ ದಿನ ಕುರಿತಂತೆ ಅಡ್ವೊಕೇಟ್‌ ಕಮಿಷನರ್‌ ಜೊತೆ ಚರ್ಚಿಸಿ ಫಿರ್ಯಾದಿ ಮತ್ತು ಪ್ರತಿವಾದಿಗಳ ಪರ ಹಾಜರಾಗುವ ವಕೀಲರು ನಿರ್ಧಾರ ಕೈಗೊಳ್ಳತಕ್ಕದ್ದು.

 • ವಕೀಲ ವಿ ಲಕ್ಷ್ಮಿ ನಾರಾಯಣನ್‌ ಅವರನ್ನು ಅಡ್ವೊಕೇಟ್‌ ಕಮಿಷನರ್ ನೇಮಕ ಮಾಡಲಾಗಿದೆ. ಪ್ರಕರಣದ ಮೇಲ್ವಿಚಾರಣೆಗಾಗಿ ಅವರಿಗೆ ಸಹಾಯ ಮಾಡಲು ವಕೀಲ ನವೀನ್‌ ಕುಮಾರ್‌ ಸಹಾಯ ಮಾಡಲಿದ್ದಾರೆ.

 • ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯೊಳಗೆ ಇಳಯರಾಜ ಆವರಣ ಪ್ರವೇಶಿಸಬಹುದು. ಸಮಯದ ಪರಿಪಾಲನೆಯಾಗಿದೆಯೇ ಎಂಬುದನ್ನು ಅಡ್ವೊಕೇಟ್‌ ಕಮಿಷನರ್‌ ಅವರು ಖಚಿತಪಡಿಸಿಕೊಳ್ಳಬೇಕು. ಸಮಯವನ್ನು ವಿಸ್ತರಿಸಬಹುದಾದರೂ ಲೆಕ್ಕ ತೆಗೆದುಕೊಳ್ಳುವ ಸಮಯ ಸಂಜೆ 5 ಗಂಟೆ ಮೀರುವಂತಿಲ್ಲ.

 • ಇಳಯರಾಜ ಅವರು ಪ್ರಸಾದ್‌ ಸ್ಟುಡಿಯೋಗೆ ಭೇಟಿ ನೀಡಿದಾಗ ಚೆನ್ನೈ ಪೊಲೀಸ್‌ ಆಯುಕ್ತರು ಭದ್ರತೆ ಒದಗಿಸುತ್ತಾರೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಜನಸಂದಣಿಯನ್ನು ನಿಗ್ರಹಿಸಲಿದ್ದಾರೆ.

ಧ್ಯಾನ ಕೈಗೊಳ್ಳಲು ಇಳಯರಾಜ ಸೋಮವಾರ ಸ್ಟುಡಿಯೋಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇಳಯರಾಜ ಪರ ಹಿರಿಯ ವಕೀಲ ಪಿ ಎಸ್ ರಾಮನ್, ವಕೀಲ ಕೆ.ವಿ.ಸಜೀವ್ ಕುಮಾರ್ ಅವರು ಹಾಜರಿದ್ದರು. ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲರಾದ ಅರವಿಂದ್ ಪಾಂಡಿಯನ್ ಮತ್ತು ಟಿ ವಿ ರಾಮಾನುಜಮ್, ವಕೀಲರಾದ ಅಬ್ದುಲ್ ಸಲೀಮ್, ಎಸ್ ಈಳಂಭಾರತಿ ಅವರು ಪ್ರತಿವಾದಿಗಳ ಪರ ಉಪಸ್ಥಿತರಿದ್ದರು.

ಪ್ರಕರಣದ ಹಿನ್ನೆಲೆ

ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ 2019 ರಲ್ಲಿಇಳಯರಾಜಾ ಅವರನ್ನು ಸ್ಟುಡಿಯೋ ಪ್ರವೇಶಿಸದಂತೆ ತಡೆ ಹಿಡಿಯಲಾಗಿತ್ತು. ಆ ಬಳಿಕ ಇಳಯರಾಜ ಕೋರ್ಟ್‌ ಮೆಟ್ಟಿಲೇರಿದ್ದರು. ಜೊತೆಗೆ ಒಂದು ಸಂದರ್ಭದಲ್ಲಿ ಪ್ರಸಾದ್‌ ಸ್ಟುಡಿಯೋಸ್‌ನ ಮಾಲೀಕ ಸಾಯಿಪ್ರಸಾದ್‌ ತಮ್ಮ ಅಮೂಲ್ಯ ಸಂಗೀತ ಪರಿಕರಗಳು. ರಾಗ ಸಂಯೋಜನೆಯ ನೋಟ್ಸ್‌, ನಿತ್ಯೋಪಯೋಗಿ ವಸ್ತುಗಳು ಮುಂತಾದವನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇಳಯರಾಜಾ ಸ್ಟುಡಿಯೋದಲ್ಲಿ ಭಾರಿ ಹಣ ವ್ಯಯಿಸಿ ಅಪರೂಪದ ಸಂಗೀತ ಉಪಕರಣಗಳನ್ನು ಇರಿಸಿದ್ದರು ಎಂದು ತಿಳಿದುಬಂದಿದೆ. ಪ್ರಸಾದ್‌ ಸ್ಟುಡಿಯೋಸ್‌ನ ಮೂಲ ಮಾಲೀಕ, ನಿರ್ಮಾಪಕ ಎಲ್‌ ವಿ ಪ್ರಸಾದ್‌ ಅವರ ನಿಧಾನಾನಂತರವೂ ಅವರ ಮಗ ರಮೇಶ್‌ ಪ್ರಸಾದ್‌ ಪರಸ್ಪರ ಸಮ್ಮತಿಯೊಂದಿಗೆ ಇಳಯರಾಜಾ ಅಲ್ಲೇ ಇರಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ರಮೇಶ್‌ ಅವರ ಪುತ್ರ ಸ್ಟುಡಿಯೋದ ಮಾಲೀಕತ್ವ ವಹಿಸಿಕೊಂಡ ಬಳಿಕ ಇಳಯರಾಜರ ಉಪಸ್ಥಿತಿಯನ್ನು ಪ್ರಶ್ನಿಸಿದ್ದರು.

Related Stories

No stories found.
Kannada Bar & Bench
kannada.barandbench.com