ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಾನೂನುಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದಡಿ ಬಂಧನದಲ್ಲಿರುವ ವೈದ್ಯರೊಬ್ಬರು ಸೇರಿದಂತೆ ಐವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಪ್ರಕರಣದ ಸಂಬಂಧ ಬೆಂಗಳೂರಿನ ಶಾಂತಿನಗರದ ಡಾ.ಎಸ್ ಆದರ್ಶ್ ಹಾಗೂ ಮೈಸೂರು ತಾಲ್ಲೂಕಿನ ಸಾಲುಂಡಿ ಗ್ರಾಮದ ಶಿವಲಿಂಗ ನಾಯಕ್ ಸಲ್ಲಿಸಿದ್ದ ಪ್ರತ್ಯೇಕ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಮೇಲುಕೋಟೆ ಹೋಬಳಿಯ ಮಹದೇಶ್ವರಪುರದ ಎಂ ಎಸ್ ಕಿರಣ್, ಪಾಂಡವಪುರ ತಾಲ್ಲೂಕು ಹೊಸಕೋಟೆಯ ಎಚ್ ಪಿ ಅಖಿಲೇಶ್ ಹಾಗೂ ಕೆ ಆರ್ ಪೇಟೆಯ ಶ್ರುತಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ನಡೆಸಿದರು.
ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಆರೋಪಿಗಳ ವಿರುದ್ಧ ಅನಧಿಕೃತವಾಗಿ ಗರ್ಭಪಾತ ಮಾಡಿಸಿದ ಆಪಾದನೆಯಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಇನ್ನೂ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ, ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಹೊರುಗುತ್ತಿಗೆಯ ಮೇಲೆ ಸಹಾಯಕಳಾಗಿ (ಗ್ರೂಪ್-ಡಿ) ಕರ್ತವ್ಯ ನಿರ್ವಹಿಸುತ್ತಿರುವ ಅಶ್ವಿನಿ ಎಂಬಾಕೆ ಆರೋಗ್ಯ ಇಲಾಖೆಗೆ ಸೇರಿದ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೇ 5ರಂದು ರಾತ್ರಿ 10.45 ವೇಳೆಯಲ್ಲಿ ಅಶ್ವಿನಿ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ವಿವಾಹಿತೆಯೊಬ್ಬರಿಗೆ ವಸತಿ ಗೃಹದಲ್ಲಿ ಗರ್ಭಪಾತ ಮಾಡಿಸುವ ನಿಟ್ಟಿನಲ್ಲಿ ಔಷಧಿ ನೀಡಿದ್ದರು. ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂಬಂಧ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಬೆಟ್ಟಸ್ವಾಮಿ ಪಾಂಡವಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಅಶ್ವಿನಿಗೆ ನೆರವು ನೀಡುತ್ತಿದ್ದ ಆರೋಪವು ಶಿವಲಿಂಗನಾಯಕ್, ಎಂ ಎಸ್ ಕಿರಣ್, ಪಾಂಡವಪುರ ತಾಲ್ಲೂಕು ಹೊಸಕೋಟೆಯ ಎಚ್ ಪಿ ಅಖಿಲೇಶ್ ಹಾಗೂ ಶ್ರುತಿ ಅವರ ಮೇಲಿದೆ. ಇದರಲ್ಲಿ ತಲೆಮರೆಸಿಕೊಂಡಿದ್ದ ಶಿವಲಿಂಗನಾಯಕ್‌ಗೆ ನಿರೀಕ್ಷಣಾ ಜಾಮೀನು ಮತ್ತು ಬಂಧನಕ್ಕೆ ಒಳಗಾಗಿದ್ದ ಉಳಿದ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿ ಮಂಡ್ಯದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೇ 29ರಂದು ಆದೇಶಿಸಿತ್ತು. ಇದರಿಂದ ಅವರು ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೆ ಎಚ್‌ಬಿ ಕಾಲೋನಿಯ ಓವಂ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಹೊಸಕೋಟೆ ಠಾಣಾ ಪೊಲೀಸರಿಗೆ 2024ರ ಮಾರ್ಚ್ 21ರಂದು ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ.ಎಂ ಸುನೀಲ್ ಕುಮಾರ್ ದೂರು ನೀಡಿದ್ದರು. ಈ ದೂರಿನಲ್ಲಿ ಆರೋಪಿಯಾಗಿರುವ ವೈದ್ಯ ಡಾ.ಎಸ್ ಆದರ್ಶ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2024ರ ಏಪ್ರಿಲ್ 6ರಂದು ಆದೇಶಿಸಿತ್ತು. ಇದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು.