ಅಕ್ರಮ ಡಿನೋಟಿಫಿಕೇಶನ್ ಪ್ರಕರಣ: ಮುಂದಿನ ವಿಚಾರಣೆಯಲ್ಲಿ ಮಾಜಿ ಸಿಎಂ ಎಚ್‌ಡಿಕೆ ಹಾಜರಾತಿ ಖಾತರಿ; ವಿಚಾರಣೆ ಮುಂದೂಡಿಕೆ

2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಬೆಂಗಳೂರಿನ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ವ್ಯಾಪ್ತಿಯಲ್ಲಿ 3.34 ಎಕರೆಯನ್ನು ಸರ್ಕಾರದ ಸ್ವಾಧೀನದಿಂದ ಕೈಬಿಟ್ಟು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
Farmer CM H D Kumaraswamy
Farmer CM H D KumaraswamyTwitter

ಅಕ್ರಮ ಡಿನೋಟಿಫೈ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಮುಂದಿನ ವಿಚಾರಣೆಯಲ್ಲಿ ತಪ್ಪದೇ ಹಾಜರುಪಡಿಸುವ ಭರವಸೆಯನ್ನು ಪರಿಗಣಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ವಿಚಾರಣೆ ಮುಂದೂಡಿದೆ.

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಮಾಹಿತಿ ಹಕ್ಕು ಕಾರ್ಯಕರ್ತ ಎಂ ಎಸ್‌ ಮಹದೇವಸ್ವಾಮಿ ಅವರು ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತಕುಮಾರ್‌ ಅವರು ನಡೆಸಿದರು.

ಎರಡರಿಂದ ಐದನೇ ಆರೋಪಿಗಳಾದ ಪದ್ಮಾ, ಶ್ರೀದೇವಿ, ಚೇತನ್‌ ಕುಮಾರ್‌, ಕೆ ಬಿ ಶಾಂತಮ್ಮ, ಒಂಭತ್ತನೇ ಆರೋಪಿ ಆರ್‌ ಬಾಲಕೃಷ್ಣ, ಹನ್ನೊಂದನೇ ಆರೋಪಿ ಜಿ ಮಲ್ಲಿಕಾರ್ಜುನ ಮತ್ತು ಹದಿಮೂರನೇ ಆರೋಪಿ ಪಿ ಜಗದೀಶ್‌ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಮೊದಲನೇ ಆರೋಪಿ ಎಚ್‌ ಡಿ ಕುಮಾರಸ್ವಾಮಿ ಆರನೇ ಆರೋಪಿ ರೇಖಾ ಎಸ್‌. ಚಂದ್ರು, ಏಳನೇ ಆರೋಪಿ ಯೋಗ ಮೂರ್ತಿ, ಎಂಟನೇ ಆರೋಪಿ ನರಸಿಂಹಲು ನಾಯ್ಡು, ಹತ್ತನೇ ಆರೋಪಿ ಟಿ ಮುರಳೀಧರ್‌, ಹನ್ನೆರಡನೇ ಆರೋಪಿ ಇ ಎ ಯೋಗೇಂದ್ರನಾಥ್‌, ಹದಿನಾಲ್ಕರಿಂದ ಹದಿನೆಂಟನೇವರೆಗಿನ ಆರೋಪಿಗಳಾದ ಡಿ ಎಸ್‌ ದೀಪಕ್‌, ಎಂ ಸುಬ್ರಮಣಿ, ಬಾಲಾಜಿ ಇನ್ಫ್ರಾ, ಶುಭೋದಯ ಬಿಲ್ಡರ್ಸ್‌ ಮತ್ತು ಸನ್‌ರೈಸ್‌ ಬಿಲ್ಡರ್ಸ್‌ ಪ್ರತಿನಿಧಿಗಳು ಹಾಜರಾತಿಯಿಂದ ವಿನಾಯಿತಿ ಕೋರಿದ್ದ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಮೊದಲ ಆರೋಪಿ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಮುಂದಿನ ವಿಚಾರಣೆಗೆ ತಪ್ಪದೇ ಹಾಜರುಪಡಿಸಲಾಗುವುದು ಎಂದು ವಕೀಲ ಸಯದ್‌ ಬಿಲಾಲ್‌ ಹೇಳಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದ್ದು, ವಿಚಾರಣೆಯನ್ನು ಮಾರ್ಚ್‌ 21ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಬೆಂಗಳೂರಿನ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ವ್ಯಾಪ್ತಿಯಲ್ಲಿ 3.34 ಎಕರೆಯನ್ನು ಸರ್ಕಾರದ ಸ್ವಾಧೀನದಿಂದ ಕೈಬಿಟ್ಟು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸುದೀರ್ಘ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಇದನ್ನು ಆಕ್ಷೇಪಿಸಿ ದೂರುದಾರ ಮಹದೇವ ಸ್ವಾಮಿ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿತ್ತು. ಇದಕ್ಕೆ ತಡೆ ನೀಡುವಂತೆ ಕೋರಿ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು.

Related Stories

No stories found.
Kannada Bar & Bench
kannada.barandbench.com