ಅಕ್ರಮ ಬಂಧನ ಪ್ರಕರಣ: ತನ್ನ ಇಚ್ಛೆಯಂತೆ ವಸತಿ ನಿಲಯದಲ್ಲಿ ನೆಲೆಸಲು ಯುವತಿಗೆ ಅನುಮತಿಸಿದ ಹೈಕೋರ್ಟ್‌

ನನಗೆ ಪಾಲಕರೊಂದಿಗೆ ಹೋಗಲು ಇಷ್ಟವಿಲ್ಲ. ಸದ್ಯ ಉಳಿದುಕೊಂಡಿರುವ ಪುನರ್ವಸತಿ ಕೇಂದ್ರದಲ್ಲಿ ಉಳಿಯಲೂ ಇಚ್ಛೆಯಿಲ್ಲ. ಮುಕ್ತವಾಗಿರಲು ಬಯಸಿದ್ದು, ನಾನು ಇಷ್ಟಪಡುವ ವಸತಿ ನಿಲಯದಲ್ಲಿ ನೆಲೆಸಲು ಬಯಸಿದ್ದೇನೆ ಎಂದಿರುವ ಯುವತಿ.
Justices H T Narendra Prasad and S Rachaiah and Karnataka HC
Justices H T Narendra Prasad and S Rachaiah and Karnataka HC
Published on

ಅನ್ಯ ಧರ್ಮದ ಯುವಕನನ್ನು ಪ್ರೀತಿಸಿ ವಿವಾಹವಾಗಲು ಮುಂದಾದ ಕಾರಣ ಪಾಲಕರ ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಎನ್ನಲಾದ ಯುವತಿಗೆ ತನ್ನಿಷ್ಟದ ಜಾಗದಲ್ಲಿ ನೆಲೆಸಲು ಕರ್ನಾಟಕ ಹೈಕೋರ್ಟ್ ಈಚೆಗೆ ಅವಕಾಶ ಕಲ್ಪಿಸಿದೆ.

ದಕ್ಷಿಣ ಕನ್ನಡದ ಹಿಂದೂ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳನ್ನು ಆಕೆಯ ಪಾಲಕರು ಅಕ್ರಮ ಬಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಚ್‌ ಟಿ ನರೇಂದ್ರ ಪ್ರಸಾದ್‌ ಮತ್ತು ಎಸ್‌ ರಾಚಯ್ಯ ಅವರ ನೇತೃತ್ವದ ರಜಾಕಾಲೀನ ಪೀಠವು ವಿಚಾರಣೆ ನಡೆಸಿತು.

2023ರ ಮೇ 11ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಯುವತಿಗೆ ಮೇ 16ರವರೆಗೆ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿತ್ತು. ಮೇ 16ರಂದು ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಯುವತಿ ಹಾಜರಾಗಿ, ತನಗೆ 24 ವರ್ಷವಾಗಿದೆ. ತಾನು ವಯಸ್ಕಳಾಗಿದ್ದು, ಕಚೇರಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದೇನೆ. ನನಗೆ ಪಾಲಕರೊಂದಿಗೆ ಹೋಗಲು ಇಷ್ಟವಿಲ್ಲ. ಸದ್ಯ ಉಳಿದುಕೊಂಡಿರುವ ಪುನರ್ವಸತಿ ಕೇಂದ್ರದಲ್ಲಿ ಉಳಿಯಲೂ ಇಚ್ಛೆಯಿಲ್ಲ. ಮುಕ್ತವಾಗಿರಲು ಬಯಸಿದ್ದು, ನಾನು ಇಷ್ಟಪಡುವ ವಸತಿ ನಿಲಯದಲ್ಲಿ ನೆಲೆಸಲು ಬಯಸಿದ್ದೇನೆ. ಅದಕ್ಕೆ ಅವಕಾಶ ಕೊಡಬೇಕು. ಆ ಜಾಗ ನನಗೆ ಸುರಕ್ಷಿತವಾಗಿದೆ. ನಾನು ಉಳಿದುಕೊಳ್ಳುವ ವಸತಿ ನಿಲಯದಲ್ಲಿ ವಿಳಾಸ ಬಹಿರಂಗಪಡಿಸುವುದಿಲ್ಲ. ನನಗೆ ಯಾವುದೇ ಪೊಲೀಸ್ ರಕ್ಷಣೆ ಸಹ ಬೇಡ ಎಂದು ತಿಳಿಸಿದರು.

ಇದಕ್ಕೆ ಒಪ್ಪಿದ ಪೀಠವು ಯುವತಿಯು ಬಯಸಿದ ಜಾಗದಲ್ಲಿ ನೆಲಸಲು ಅನುಮತಿ ನೀಡಿತು. ಅಲ್ಲದೇ, ಒಂದೊಮ್ಮೆ ಯುವತಿಗೆ ಯಾವುದೇ ಸಮಸ್ಯೆ ಎದುರಾದರೂ ಹತ್ತಿರದ ಪೊಲೀಸ್ ಠಾಣೆಯ ಮೊರೆ ಹೋಗಬಹುದು. ಸಂಬಂಧಪಟ್ಟ ಪೊಲೀಸರು ಯುವತಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ನಿರ್ದೇಶಿಸಿತು.

ಇದೇ ವೇಳೆ ಯುವತಿಯ ತಂದೆ ಪರ ವಕೀಲರು, ಅರ್ಜಿದಾರ ಯುವಕನೊಂದಿಗೆ ಚರ್ಚಿಸಿ (ಯುವತಿ ತಂದೆ) ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದಕ್ಕೆ ಒಪ್ಪಿದ ಪೀಠವು ಮೇ 22ರವರೆಗೆ ಸಮಯಾವಕಾಶ ಕಲ್ಪಿಸಿ ವಿಚಾರಣೆ ಮುಂದೂಡಿತು. ಅಂದು ಯುವತಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Kannada Bar & Bench
kannada.barandbench.com