ಅಕ್ರಮ ಫ್ಲೆಕ್ಸ್‌, ಹೋರ್ಡಿಂಗ್: ಬೈಲಾದಲ್ಲಿ ದಂಡ ವಿಧಿಸಲು ಅವಕಾಶ ಇರದ ಬಗ್ಗೆ ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

ಅಕ್ರಮ ಫ್ಲೆಕ್ಸ್, ಹೋರ್ಡಿಂಗ್ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಬೈಲಾದಲ್ಲಿ ಆ ರೀತಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್ ಗಳನ್ನು ಹಾಕುವವರನ್ನು ಶಿಕ್ಷಿಸುವ ಅಂಶವೇ ಇಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಪೀಠ.
BBMP and Karnataka HC
BBMP and Karnataka HC
Published on

“ಬೆಂಗಳೂರಿನಲ್ಲಿ ಅಕ್ರಮ ಹೋರ್ಡಿಂಗ್ ಮತ್ತು ಫ್ಲೆಕ್ಸ್‌ ವಿಚಾರವನ್ನು ಲಘುವಾಗಿ ಪರಿಗಣಿಸಬೇಡಿ” ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯನ್ನು ಎಚ್ಚರಿಸಿರುವ ಕರ್ನಾಟಕ ಹೈಕೋರ್ಟ್‌, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಹೋರ್ಡಿಂಗ್ ಅಥವಾ ಬ್ಯಾನರ್ ಗಳನ್ನು ಹಾಕುವವರನ್ನು ದಂಡಿಸಲು ಉದ್ದೇಶಿತ ಬೈಲಾದಲ್ಲಿ ಯಾವುದೇ ಅವಕಾಶ ನೀಡುವ ಅಂಶ ಇಲ್ಲದಿರುವುದಕ್ಕೆ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ಗಳ ಹಾವಳಿ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.

“ಬೆಂಗಳೂರಿನ ಅಕ್ರಮ ಫ್ಲೆಕ್ಸ್ ಮತ್ತು ಹೋರ್ಡಿಂಗ್ ಸಮಸ್ಯೆ ಅತಿ ಮುಖ್ಯವಾದದ್ದು. ಇದರಿಂದ ಎಲ್ಲಾ ನಗರವಾಸಿಗಳಿಗೂ ಹಲವು ವರ್ಷಗಳಿಂದ ತೊಂದರೆಯಾಗುತ್ತಿದೆ. ಇಷ್ಟಾದರೂ ಸರ್ಕಾರರ ಎಚ್ಚೆತ್ತುಕೊಂಡಿಲ್ಲ, ಉದ್ದೇಶಿತ ಬೈಲಾದಲ್ಲಿ ಆ ರೀತಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್ ಗಳನ್ನು ಹಾಕುವವರನ್ನು ಶಿಕ್ಷಿಸುವ ಅಂಶವೇ ಇಲ್ಲ” ಎಂದು ಪೀಠ ಕಿಡಿಕಾರಿತು.

“2017ರಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್ ಗಳ ಸಂಬಂಧ ಹೈಕೋರ್ಟ್, ಸಿಲಿಕಾನ್ ಸಿಟಿ ಬೆಂಗಳೂರಿನ ಅಂದಹಾಳುಗೆಡವುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್ ಗಳನ್ನು ನಿಯಂತ್ರಿಸಲು ಹಲವು ನಿರ್ದೇಶನಗಳನ್ನು ನೀಡಿದ್ದರೂ ನಗರದಲ್ಲಿ ಅವುಗಳ ಹಾವಳಿ ಮೀತಿ ಮೀರಿದೆ” ಎಂದು ಪೀಠ ಬೇಸರಿಸಿತು.

“ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತು) ಬೈಲಾ 2024 ರಲ್ಲಿನ ಬೈಲಾ 15(1)ರಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗಳಲ್ಲಿನ ಅಕ್ರಮ ಫ್ಲೆಕ್ಸ್ , ಬ್ಯಾನರ್ ಅಥವಾ ಹೋರ್ಡಿಂಗ್‌ಗಳನ್ನು ತೆರವುಗೊಳಿಸಲಾಗುವುದು ಮತ್ತು ಅದರ ಮಾಲೀಕರನ್ನು ದಂಡಿಸಲಾಗುವುದು ಎಂದು ಹೇಳಲಾಗಿದೆ. ಆದರೆ ನ್ಯಾಯಾಲಯ ಹಿಂದೆಯೇ ಈ ಅಂಶದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರೂ ಸಹ ಸಾರ್ವಜನಿಕ ಸ್ಥಳಗಳು, ಪಾದಚಾರಿ ಮಾರ್ಗಗಳು, ಸಾರ್ವಜನಿಕ ರಸ್ತೆ ಮತ್ತಿತರ ಕಡೆ ಅಕ್ರಮ ಹೋರ್ಡಿಂಗ್, ಫ್ಲೆಕ್ಸ್‌ ಹಾಕಿದವರಿಗೆ ದಂಡದ ಪ್ರಮಾಣವನ್ನು ನಿಗದಿಪಡಿಸಿಲ್ಲ” ಎಂದು ನ್ಯಾಯಾಲಯ ಆಕ್ಷೇಪಿಸಿತು.

Also Read
ಅಕ್ರಮ ಫ್ಲೆಕ್ಸ್‌, ಹೋರ್ಡಿಂಗ್‌ ತೆರವಿಗೆ ಹೈಕೋರ್ಟ್‌ ಸೂಚನೆ; ನೂತನ ಜಾಹೀರಾತು ಬೈಲಾ ಕುರಿತು ಬಿಬಿಎಂಪಿ ವಿವರಣೆ

ಅಲ್ಲದೇ, “ಅನಧಿಕೃತ ಫ್ಲೆಕ್ಸ್ , ಬ್ಯಾನರ್ ಅಥವಾ ಹೋರ್ಡಿಂಗ್ ಗಳನ್ನು ಹಾಕುವುದರಿಂದ ವಾಹನದಟ್ಟಣೆ ಉಂಟಾಗುವುದಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ಸರ್ಕಾರ ಮತ್ತು ಬಿಬಿಎಂಪಿ ಅನಧಿಕೃತವಾಗಿ ಫೆಕ್ಸ್‌ ಮತ್ತು ಬ್ಯಾನರ್‌ ಹಾಕಿದವರಿಗೆ ದಂಡದ ಪ್ರಮಾಣ ನಿಗದಿ ಬಗ್ಗೆ ಮುಂದಿನ ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡಬೇಕು” ಎಂದು ಹೇಳಿ, ವಿಚಾರಣೆಯನ್ನು 2025ರ ಜನವರಿ 16ಕ್ಕೆ ಮುಂದೂಡಿತು.

ಕೋರ್ಟ್ ಈ ಹಿಂದೆ ತನ್ನ ಅನುಮತಿ ಇಲ್ಲದೆ ಜಾಹೀರಾತು ಬೈಲಾ ಅಂತಿಮಗೊಳಿಸಬಾರದೆಂದು ಮಧ್ಯಂತರ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Kannada Bar & Bench
kannada.barandbench.com