ಅಕ್ರಮ ಕಬ್ಬಿಣದ ಅದಿರು ಮಾರಾಟಕ್ಕೆ ಸಂಬಂಧಿಸಿದಂತೆ ಯುವಜನ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ನಾಗೇಂದ್ರ ಅವರ ವಿರುದ್ಧದ 16 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ನಿಗದಿ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಆಗಸ್ಟ್ ಅಂತ್ಯದವರೆಗೆ ಮುಂದೂಡಿದೆ.
ಸಚಿವ ನಾಗೇಂದ್ರ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಸಕದಸ್ಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ಅವರ ವಾದ ಆಲಿಸಿದ ನ್ಯಾಯಾಲಯವು “ಸಚಿವ ನಾಗೇಂದ್ರ ಅವರ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ನಿಗದಿ ಪ್ರಕ್ರಿಯೆಯನ್ನು ಆಗಸ್ಟ್ 31ರವರೆಗೆ ಮುಂದೂಡಲಾಗಿದೆ” ಎಂದು ಆದೇಶಿಸಿತು.
ಈ ಹಂತದಲ್ಲಿ ಮೂರ್ತಿ ನಾಯಕ್ ಅವರು ಈ ಮಧ್ಯಂತರ ಆದೇಶವನ್ನು ಹೈಕೋರ್ಟ್‌ನಲ್ಲಿನ ಪ್ರಕರಣಗಳ ಇತ್ಯರ್ಥದವರೆಗೆ ಮುಂದುವರಿಸಬೇಕು ಎಂದು ಕೋರಿದರು. ಇದಕ್ಕೆ ಪೀಠವು ನಿರಾಕರಿಸಿತು.
ಇದಕ್ಕೂ ಮುನ್ನ ಮೂರ್ತಿ ನಾಯಕ್ ಅವರು “ವ್ಯಾಪ್ತಿ ಮೀರಿ ದೂರುಗಳನ್ನು ದಾಖಲಿಸಲಾಗಿದೆ. 2008 ಮತ್ತು 2009ರ ಆರೋಪಗಳಿಗೆ ಸಂಬಂಧಿಸಿದಂತೆ 2023ರಲ್ಲಿ ದೂರು ದಾಖಲಿಸಲಾಗಿದೆ. 2015ರಲ್ಲಿ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್) ಕಾಯಿದೆಗೆ ತಿದ್ದುಪಡಿ ಮಾಡಲಾಗಿದ್ದು, ಈಗ ಅದನ್ನು ಅನ್ವಯಿಸಲಾಗಿದೆ. ಹೀಗಾಗಿ, ದೂರು ದಾಖಲಿಸಿರುವುದು ಸಿಂಧುವಲ್ಲ” ಎಂದು ವಾದಿಸಿದರು.
ಲೋಕಾಯುಕ್ತದ ವಿಶೇಷ ತನಿಖಾ ದಳ ಪ್ರತಿನಿಧಿಸಿದ್ದ ವಕೀಲರಾದ ಬಿ ಎಸ್ ಪ್ರಸಾದ್ ಅವರು “ಎಂಎಂಆರ್‌ಡಿ ಕಾಯಿದೆಯ ಪ್ರಕಾರ ನಿಯಮಗಳನ್ನು ಪಾಲಿಸಲಾಗಿದೆ” ಎಂದರು. ವಾದ ಆಲಿಸಿದ ಪೀಠವು ವಕೀಲ ಪ್ರಸಾದ್ ಅವರ ವಾದಕ್ಕೆ ಪ್ರತಿಕ್ರಿಯಿಸಲು ಆಗಸ್ಟ್ 18ಕ್ಕೆ ವಿಚಾರಣೆ ಮುಂದೂಡಿತು.