ಅಕ್ರಮ ಗಣಿಗಾರಿಕೆ: ಸೈಲ್ ವಿರುದ್ಧ ಸಾಕ್ಷಿಗೆ ಸಹ ಆರೋಪಿ ಸಮ್ಮತಿ; ಸಿಬಿಐ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಮಲ್ಲಿಕಾಜುನ ಶಿಪ್ಪಿಂಗ್ ಕಂಪೆನಿಯ ಮಾಜಿ ಉದ್ಯೋಗಿಯೂ ಆದ ನವದೆಹಲಿ ಮೂಲದ ಶ್ರೀ ಲಾಲ್ ಮಹಲ್ ಲಿಮಿಟೆಡ್ ಕಂಪೆನಿ ನಿರ್ದೇಶಕ ಸುನೀಲ್ ಕುಮಾರ್ ವಲೇಚ ತಪ್ಪೊಪ್ಪಿಕೊಂಡು ಸಾಕ್ಷಿಯಾಗಲು ಅನುಮತಿ ಕೋರಿದ್ದರು. ಇದನ್ನು ಸಿಬಿಐ ನ್ಯಾಯಾಲಯ ಒಪ್ಪಿತ್ತು.
Satish Sail and Karnataka HC
Satish Sail and Karnataka HC
Published on

ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಹಾಗೂ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಾಕ್ಷಿಯಾಗಲು (ಅಪ್ರೂವರ್) ಕಂಪೆನಿಯ ಮಾಜಿ ಉದ್ಯೋಗಿಯೂ ಆದ ಪ್ರಕರಣದ ನಾಲ್ಕನೇ ಆರೋಪಿ ಸುಶೀಲ್ ಕುಮಾರ್ ವಲೇಚಾಗೆ ಅನುಮತಿ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.

ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್‌ ಲಿಮಿಟೆಡ್‌ ಮತ್ತು ಶಾಸಕ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಪ್ರಕರಣದ ಸತ್ಯಾಸತ್ಯತೆ ತಿಳಿಯುತ್ತದೆ ಎನ್ನುವ ಸಂದರ್ಭದಲ್ಲಿ ಆರೋಪಿಗೆ ಕ್ಷಮಾದಾನ ನೀಡಿ ಸಾಕ್ಷಿಯಾಗಲು ಅನುಮತಿ ನೀಡಲು ಸಂಬಂಧಪಟ್ಟ ನ್ಯಾಯಾಲಯಕ್ಕೆ ಅವಕಾಶವಿದೆ. ಅದರಂತೆ ನ್ಯಾಯಾಲಯವು ತನ್ನ ಅಧಿಕಾರ ಬಳಸಿ ಆರೋಪಿಯನ್ನು ಸಾಕ್ಷಿಯಾಗಲು ಅನುಮತಿ ನೀಡಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ, ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಲು ಎಲ್ಲಾ ಪ್ರಯತ್ನ ನಡೆಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಇದೇ ವೇಳೆ ನಿರ್ದೇಶಿಸಿದೆ.

ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಸತೀಶ್ ಸೈಲ್ ಮತ್ತವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಪ್ರಕರಣ ಸಂಬಂಧ ಸತೀಶ್ ಸೈಲ್ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಸಿಬಿಐ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ, ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಹಲವು ಆರೋಪಿಗಳು ತಮ್ಮ ವಿರುದ್ಧದ ಆರೋಪ ಕೈ ಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅವುಗಳನ್ನು ಸಿಬಿಐ ನ್ಯಾಯಾಲಯ ತಿರಸ್ಕರಿಸಿತ್ತು. ಜೊತೆಗೆ, ಹಲವು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ನಿಗದಿಪಡಿಸಿದೆ.

ಈ ಹಂತದಲ್ಲಿ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದ ಶ್ರೀ ಮಲ್ಲಿಕಾಜುನ ಶಿಪ್ಪಿಂಗ್ ಕಂಪೆನಿಯ ಮಾಜಿ ಉದ್ಯೋಗಿಯೂ ಆದ ನವದೆಹಲಿ ಮೂಲದ ಶ್ರೀ ಲಾಲ್ ಮಹಲ್ ಲಿಮಿಟೆಡ್ ಕಂಪೆನಿ ನಿರ್ದೇಶಕ ಸುನೀಲ್ ಕುಮಾರ್ ವಲೇಚ ತಪ್ಪೊಪ್ಪಿಕೊಂಡು ಸಾಕ್ಷಿಯಾಗಲು ಅನುಮತಿ ಕೋರಿದ್ದರು. ತಾನು ಕೇವಲ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿಯ ಉದ್ಯೋಗಿಯಾಗಿದ್ದೆ. ಸದ್ಯ ಪ್ರಕರಣದಲ್ಲಿ ಸಾಕ್ಷಿಯಾಗಲು ಬಯಸಿದ್ದು, ಅದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಆ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪುರಸ್ಕರಿಸಿ 2021ರ ಅಕ್ಟೋಬರ್‌ 27ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಶಾಸಕ ಸತೀಶ್ ಸೈಲ್ ಮತ್ತವರ ಕಂಪೆನಿಯಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು.

Kannada Bar & Bench
kannada.barandbench.com