ಅಕ್ರಮ ಅದಿರು ಸಾಗಣೆ ಪ್ರಕರಣ: ಶಾಸಕ‌ ಸೈಲ್‌ ಸೇರಿ ಏಳು ಅಪರಾಧಿಗಳಿಗೆ ಶನಿವಾರ ಶಿಕ್ಷೆ ಪ್ರಕಟಿಸಲಿರುವ ವಿಶೇಷ ನ್ಯಾಯಾಲಯ

“ಎಲ್ಲ ಅಪರಾಧಿಗಳು ರಾಜ್ಯದ ಬೊಕ್ಕಸಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದ್ದಾರೆ. ಇವರೆಲ್ಲರಿಗೂ ಗರಿಷ್ಠ ಪ್ರಮಾಣದ ಶಿಕ್ಷೆ ಹಾಗೂ ದಂಡವನ್ನು ವಿಧಿಸಬೇಕು. ಯಾವುದೇ ರಿಯಾಯಿತಿ ತೋರಬಾರದು” ಎಂದು ಸರ್ಕಾರಿ ಅಭಿಯೋಜಕಿ ಕೆ ಎಸ್‌ ಹೇಮಾ ಮನವಿ ಮಾಡಿದರು.
Bengaluru city civil court & MLA Satish Sail
Bengaluru city civil court & MLA Satish Sail
Published on

ಅಕ್ರಮ ಅದಿರು ಸಾಗಣೆ ಮತ್ತು ಕಳ್ಳತನ ಮಾಡಿ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿಗೂ ಹೆಚ್ಚಿನ ಮೊತ್ತದ ನಷ್ಟ ಉಂಟು ಮಾಡಿರುವ ಆರು ಕ್ರಿಮಿನಲ್‌ ಪ್ರಕರಣಗಳಲ್ಲಿನ ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ (ಅಕ್ಟೋಬರ್‌ 26) ಪ್ರಕಟಿಸಲಿದೆ.

ಶಾಸಕ ಸತೀಶ್ ಸೈಲ್ ಸಹಿತ ಪ್ರಕರಣದ ಎಲ್ಲ ಏಳು ಅಪರಾಧಿಗಳಿಂದ ಶಿಕ್ಷೆಯ ಪ್ರಮಾಣ ರಿಯಾಯಿತಿ ಕೋರಿಕೆಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಶುಕ್ರವಾರ ನಡೆಸಿದರು.

ಮೊದಲ ಆರೋಪಿಯಾಗಿರುವ ಅರಣ್ಯಾಧಿಕಾರಿ ಮಹೇಶ್‌ ಜೆ.ಬಿಳಿಯೆ, ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಶಾಸಕರೂ ಆದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಸೈಲ್‌, ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್‌ ಮಾಲೀಕ ಖಾರದಪುಡಿ ಮಹೇಶ್‌, ಸ್ವಸ್ತಿಕ್ ಕಂಪನಿ ಮಾಲೀಕರಾದ ಕೆ.ವಿ.ನಾಗರಾಜ್‌ ಮತ್ತು ಕೆ ವಿ ಗೋವಿಂದರಾಜ್‌, ಆಶಾಪುರ ಮೈನಿಂಗ್‌ ಕಂಪನಿ ಮಾಲೀಕ ಚೇತನ್‌ ಷಾ ಮತ್ತು ಲಾಲ್‌ ಮಹಲ್‌ ಕಂಪನಿ ಮಾಲೀಕ ಪ್ರೇಮ್‌ ಚಂದ್‌ ಗರ್ಗ್‌ ಅವರನ್ನು ಗುರುವಾರವಷ್ಟೇ (ಅ.24) ಪ್ರಕರಣದಲ್ಲಿ ಅಪರಾಧಿಗಳು ಎಂದು ನ್ಯಾಯಾಲಯ ತೀರ್ಮಾನಿಸಿತ್ತು. 

ಹೀಗಾಗಿ ಎಲ್ಲ ಆರೋಪಿಗಳನ್ನು ಪೊಲೀಸರು ತಕ್ಷಣಕ್ಕೆ ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದರು. ಶುಕ್ರವಾರ ಶಿಕ್ಷೆಯ ಕುರಿತಾದ ರಿಯಾಯಿತಿ ಕೋರಿಕೆಯನ್ನು ನ್ಯಾಯಾಧೀಶರು ಸುದೀರ್ಘವಾಗಿ ಆಲಿಸಿದರು. ಅಪರಾಧಿಗಳ ಪರ ಹಾಜರಿದ್ದ ವಕೀಲರು ತಮ್ಮ ಕಕ್ಷಿದಾರರಿಗೆ ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.

“ಶಾಸಕ ಸತೀಶ್‌ ಸೈಲ್‌, ನ್ಯಾಯಾಧೀಶರ ಮುಂದೆ ನಿಂತು ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ಕೋರುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಗದ್ಗದಿತರಾಗಿ, ‘ನನ್ನ ಮಡದಿಯ ಆರೋಗ್ಯ ಸರಿಯಿಲ್ಲ. ಮಕ್ಕಳಿನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಅಂಶಗಳನ್ನು ನ್ಯಾಯಾಲಯ ಗಮನದಲ್ಲಿ ಇರಿಸಿಕೊಂಡು ಶಿಕ್ಷೆಯ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು” ಎಂದು ಮನವಿ ಮಾಡಿದರು.

ಒಂದು ಹಂತದಲ್ಲಿ ಅಪರಾಧಿ ಖಾರದಪುಡಿ ಮಹೇಶ್‌ ಮತ್ತು ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್‌ ಪರ ಹಾಜರಿದ್ದ ಹಿರಿಯ ವಕೀಲ ಹಷ್ಮತ್‌ ಪಾಷ ಅವರು “ನಮ್ಮ ಕಕ್ಷಿದಾರರು ಅದಿರು ಕಳ್ಳತನ ಮಾಡಿಲ್ಲ. ಅವರು ಅಪರಾಧ ಎಸಗಿದ್ದಾರೆ ಎಂಬುದನ್ನು ನಿಷ್ಕರ್ಷಿಸುವಲ್ಲಿ ನೀಡಲಾಗಿರುವ ಕಾರಣಗಳು ಮೂರು ವರ್ಷ ಶಿಕ್ಷೆಗೆ ಸೀಮಿತವಾಗಿವೆ. ತಾವು ತೀರ್ಪಿನಲ್ಲಿ ಅಪರಾಧಕ್ಕೆ ಕೊಟ್ಟ ಕಾರಣಗಳನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ, ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡಬೇಕು” ಎಂದು ಬಲವಾಗಿ ಪ್ರತಿಪಾದಿಸಿದರು.

ಇದಕ್ಕೆ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು, “ಸರಿಯೋ ತಪ್ಪೋ ನಾನು ನನ್ನ ತೀರ್ಪು ನೀಡಿಯಾಗಿದೆ. ಇದರಲ್ಲಿ ನಿಮಗೆ ದೋಷ ಕಂಡು ಬಂದರೆ ಅದನ್ನು ಮೇಲ್ಮನವಿಯಲ್ಲಿ ಪ್ರಶ್ನಿಸಬಹುದು. ನಾನು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಮಾಡಿಯೂ ಇಲ್ಲ. ಎಲ್ಲವನ್ನೂ ತೆರೆದ ನ್ಯಾಯಾಲಯದಲ್ಲಿ ತೀರ್ಮಾನಿಸಿಯೇ ತೀರ್ಪು ನೀಡಿದ್ದೇನೆ” ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿದರು.

Also Read
ಅಕ್ರಮ ಅದಿರು ಸಾಗಣೆ ಪ್ರಕರಣ: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಸೇರಿ ಆರು ಮಂದಿ ದೋಷಿಗಳು ಎಂದ ವಿಶೇಷ ನ್ಯಾಯಾಲಯ

ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಮತ್ತು ಶಾಸಕ ಸತೀಶ್‌ ಸೈಲ್‌ ಪರ ಹಿರಿಯ ವಕೀಲ ಮೂರ್ತಿ ಡಿ.ನಾಯಕ್‌, ಪ್ರೇಮಚಂದ ಗರಗ್‌ ಮತ್ತು ಲಾಲ್‌ ಮಹಲ್‌ ಲಿಮಿಟೆಡ್‌ ಕಂಪನಿ ಪರ ಹಿರಿಯ ವಕೀಲ ಕಿರಣ್‌ ಜವಳಿ, ಆಶಾಪುರ ಮೈನಿಂಗ್‌ ಕಂಪನಿ ಮತ್ತು ಅದರ ನಿರ್ದೇಶಕ ಚೇತನ್‌ ಷಾ ಪರ ಹಿರಿಯ ವಕೀಲ ರವಿ ಬಿ.ನಾಯಕ್‌ ಹಾಜರಾಗಿದ್ದರು.

ಸರ್ಕಾರಿ ಅಭಿಯೋಜಕಿ ಕೆ ಎಸ್‌ ಹೇಮಾ “ಎಲ್ಲ ಅಪರಾಧಿಗಳು ರಾಜ್ಯದ ಬೊಕ್ಕಸಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದ್ದಾರೆ. ಇವರೆಲ್ಲರಿಗೂ ಗರಿಷ್ಠ ಪ್ರಮಾಣದ ಶಿಕ್ಷೆ ಹಾಗೂ ದಂಡವನ್ನು ವಿಧಿಸಬೇಕು. ಯಾವುದೇ ರಿಯಾಯಿತಿ ತೋರಬಾರದು” ಎಂದು ಮನವಿ ಮಾಡಿದರು.

ದಿನವಿಡೀ ನಡೆದ ಕಲಾಪದಲ್ಲಿ ಎಲ್ಲ ಅಪರಾಧಿಗಳಿಂದ ಮತ್ತು ಅವರ ಪರ ವಕೀಲರಿಂದ ಪ್ರತ್ಯೇಕವಾಗಿ ಮನವಿ ಆಲಿಸಿದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಶನಿವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದರು.

Kannada Bar & Bench
kannada.barandbench.com