Minister S S Mallikarjun and Karnataka HC
Minister S S Mallikarjun and Karnataka HC

ವನ್ಯಜೀವಿಗಳ ಅಕ್ರಮ ಪಾಲನೆ ಪ್ರಕರಣ: ಸಚಿವ ಮಲ್ಲಿಕಾರ್ಜುನ್ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಸಹೋದರ ಎಸ್ ಎಸ್ ಗಣೇಶ್ ಹಾಗೂ ಸಂಪಣ್ಣ ಮುತಾಲಿಕ್ ಹಾಗೂ ಜಿ ಎಂ ಕರಿಬಸಪ್ಪ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಪೀಠ ನಡೆಸಿತು.

ತೋಟದ ಮನೆಯಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಪಾಲನೆ ಮಾಡುತ್ತಿದ್ದ ಆರೋಪದಲ್ಲಿ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮತ್ತಿತರರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಸಹೋದರ ಎಸ್ ಎಸ್ ಗಣೇಶ್ ಹಾಗೂ ಸಂಪಣ್ಣ ಮುತಾಲಿಕ್ ಹಾಗೂ ಜಿ ಎಂ ಕರಿಬಸಪ್ಪ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಪೀಠ ನಡೆಸಿತು.

“ಪ್ರಕರಣ ದಾಖಲಿಸುವಲ್ಲಿ ವನ್ಯಜೀವಿ ಅಪರಾಧ ಕಾಯಿದೆಯ ನಿಯಮಗಳನ್ನು ಅರಣ್ಯಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಜೊತೆಗೆ, ಅರಣ್ಯಾಧಿಕಾರಿಗಳ ದೂರಿನ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಜ್ಞೇಯ ತೆಗೆದುಕೊಂಡು ತನಿಖೆಗೆ ಆದೇಶಿಸುವಲ್ಲಿ ಲೋಪ ಎಸಗಿದೆ. ಅಲ್ಲದೇ, ಪ್ರಕರಣ ಸಂಬಂಧ ದಾವಣಗೆರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿದಾರರ ವಿರುದ್ಧ ಸಂಜ್ಞೇಯ ತೆಗೆದುಕೊಂಡಿರುವುದು ಗೊಂದಲಮಯವಾಗಿದೆ” ಎಂದು ಪೀಠ ತಿಳಿಸಿದೆ.

“ಇಡೀ ಪ್ರಕ್ರಿಯೆಯನ್ನು ತನಿಖಾಧಿಕಾರಿಗಳು ತಲೆಕೆಳಕಾಗಿ ಮಾಡಿದ್ದಾರೆ. ಪ್ರಕರಣದಲ್ಲಿ ಸರಿಪಡಿಸಲಾಗದಷ್ಟು ದೋಷಗಳು ಕಂಡು ಬಂದಿವೆ. ಹೀಗಾಗಿ, ಪ್ರಕರಣದ ವಿಚಾರಣೆಗೆ ಅನುಮತಿ ನೀಡಿದಲ್ಲಿ ಕಾನೂನಿನ ಪ್ರಕ್ರಿಯೆ ದುರುಪಯೋಗಪಡಿಸಿದಂತಾಗಲಿದೆ” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2022ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಸೆಂಥಿಲ್ ಎಂಬುವರಿಂದ ಸಿಸಿಬಿ ಪೊಲೀಸರು ಜಿಂಕೆ ಚರ್ಮವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ತನಿಖೆ ಮುಂದುವರಿಸಿದ್ದ ಪೊಲೀಸರು ಆರೋಪಿ ಸೆಂಥಿಲ್ ಅವರು ಜಿಂಕೆ ಚರ್ಮವನ್ನು ತಂದ ಸ್ಥಳವನ್ನು ಶೋಧನೆ ನಡೆಸಿದಾಗ ಮಲ್ಲಿಕಾರ್ಜುನ್ ತೋಟದ ಮನೆಯನ್ನು ಪರಿಶೀಲಿಸಿ ಹತ್ತು ಕೃಷ್ಣ ಮೃಗಗಳು, ಏಳು ಚುಕ್ಕೆ ಜಿಂಕೆಗಳು, ಏಳು ಕಾಡು ಹಂದಿಗಳು, ಮೂರು ಮುಂಗಸಿಗಳು ಹಾಗೂ ಎರಡು ನರಿಗಳನ್ನು ರಕ್ಷಣೆ ಮಾಡಿದ್ದರು.

ದಾವಣಗೆರೆಯ ಮಲ್ಲಿಕಾರ್ಜುನ್‌ ಅವರಿಗೆ ಸೇರಿದ ತೋಟದ ಮನೆಯಲ್ಲಿ ಕೃಷ್ಣ ಮೃಗ, ಚುಕ್ಕೆ ಜಿಂಕೆ, ಸೇರಿದಂತೆ ಕಾಡು ಪ್ರಾಣಿಗಳನ್ನು ಸಾಕುವ ಮೂಲಕ ವನ್ಯಜೀವ ಸಂರಕ್ಷಣಾ ಕಾಯಿದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

Kannada Bar & Bench
kannada.barandbench.com