ಕಾನೂನುಬಾಹಿರ ಧಾರ್ಮಿಕ ಕಟ್ಟಡಗಳ ತೆರವು ಪ್ರಕರಣ: ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅಮಿಕಸ್‌ ಕ್ಯೂರಿಯಾಗಿ ನೇಮಕ

ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಟ್ಟಿಯಲ್ಲಿ ದೇವಸ್ಥಾನ, ಮಸೀದಿ, ಗುರುದ್ವಾರ ಅಥವಾ ಚರ್ಚ್‌ ಎಂದು ಉಲ್ಲೇಖಿಸಿಲ್ಲ. ಹೀಗಾಗಿ, ಕಟ್ಟಡಗಳ ಗುರುತು ಉಲ್ಲೇಖಿಸಿ ಪ್ರತ್ಯೇಕ ಪಟ್ಟಿ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ.
Vikram Huilgol, Senior Advocate
Vikram Huilgol, Senior Advocate
Published on

ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಸಾರ್ವಜನಿಕ ಸ್ಥಳ ಒತ್ತುವರಿ ಮಾಡಿ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡ ತೆರವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ಕರ್ನಾಟಕ ಹೈಕೋರ್ಟ್‌ ಬುಧವಾರ ನೇಮಕ ಮಾಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಪಾಲಿಸುವುದಕ್ಕಾಗಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 7,630 ಕಾನೂನುಬಾಹಿರ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 2,140 ಕಟ್ಟಡಗಳನ್ನು ಧ್ವಂಸ/ ಸ್ಥಳಾಂತರ ಅಥವಾ ಹಾಗೆ ಉಳಿಸಿಕೊಳ್ಳಲಾಗಿದೆ. ಇದರಲ್ಲಿ ಉಪ ವಿಭಾಗ ಮಾಡಲಾಗಿದ್ದು, 1,563 ಕಟ್ಟಡಗಳನ್ನು ಧ್ವಂಸ ಮಾಡಲಾಗಿದೆ. 457 ಕಟ್ಟಡಗಳನ್ನು ಹಾಗೆ ಉಳಿಸಲಾಗಿದೆ. 58 ಕಟ್ಟಡಗಳನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪಟ್ಟಿ ನೋಡಿದರೆ ಕಾನೂನುಬಾಹಿರ ಕಟ್ಟಡಗಳನ್ನು ಸರಿಯಾದ ರೀತಿಯಲ್ಲಿ ತೆರವು ಮಾಡಲಾಗಿಲ್ಲ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ರಾಜ್ಯ ಸರ್ಕಾರವು ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಟ್ಟಿಯಲ್ಲಿ ದೇವಸ್ಥಾನ, ಮಸೀದಿ, ಗುರುದ್ವಾರ ಅಥವಾ ಚರ್ಚ್‌ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಹೀಗಾಗಿ, ಕಟ್ಟಡಗಳ ಗುರುತನ್ನು ಉಲ್ಲೇಖಿಸಿ ಪ್ರತ್ಯೇಕವಾದ ಪಟ್ಟಿ ನೀಡಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ಕೆಲವು ಜಿಲ್ಲೆಗಳಲ್ಲಿ ಕಟ್ಟಡ ತೆರವು ಕಾರ್ಯಾಚರಣೆಯು ನಾಮ್‌ ಕೆ ವಾಸ್ತೆ ಮಾತ್ರವೇ ಆಗಿದೆ. 2021ರ ಅಕ್ಟೋಬರ್‌ 19ರಂದು ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಕಾಯಿದೆ 2021ಕ್ಕೆ ರಾಜ್ಯಪಾಲರು ಸಹಿ ಹಾಕಿದ್ದು, ಈ ಕುರಿತು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದ ನಡೆಯು ಕಾಯಿದೆಯಲ್ಲಿ ಬಿಂಬಿತವಾಗಿದೆ. ಈ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳುತ್ತಿದ್ದು, ಈ ಕುರಿತು ನಂತರದ ಸಂದರ್ಭದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಕುರಿತು ಈಗಾಗಲೇ ವಿಭಾಗೀಯ ಪೀಠವು ಸಂಜ್ಞೇಯ ಪರಿಗಣಿಸಿದ್ದು, ಹಲವು ನಿರ್ದೇಶನಗಳನ್ನು ನೀಡಿದೆ. ಈ ವಿಚಾರದಲ್ಲಿ ಸಮಗ್ರ ಮತ್ತು ಪರಿಣಾಮಕಾರಿಯಾಗಿ ಸಲಹೆ ಪಡೆಯಲು ವಕೀಲರ ಸಂಘದ (ಬಾರ್‌) ನೆರವು ನ್ಯಾಯಾಲಯಕ್ಕೆ ಸೂಕ್ತ ಎಂದೆನಿಸಿದೆ. ಆದ್ದರಿಂದ, ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Also Read
ಅನಧಿಕೃತ ಧಾರ್ಮಿಕ ಕಟ್ಟಡ ತೆರವು: 3 ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಲು ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

ರಾಜ್ಯ ಸರ್ಕಾರವು ಕಾನೂನುಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳ ಎರಡು ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ರಾಜ್ಯ ಸರ್ಕಾರದ ಹೇಳಿಕೆಯಲ್ಲಿ ನಾಪತ್ತೆಯಾಗಿರುವ ಕಾನೂನುಬಾಹಿರ ಕಟ್ಟಡಗಳ ಮಾಹಿತಿಯನ್ನು ಅಮಿಕಸ್‌ಗೆ ಒಂದು ವಾರದಲ್ಲಿ ಮಧ್ಯಪ್ರವೇಶ ಕೋರಿರುವ ಅರ್ಜಿದಾರರು ಸಲ್ಲಿಸಬೇಕು. ಅಧಿಸೂಚನೆ ಮತ್ತು ಉದ್ದೇಶಿತ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಕಾಯಿದೆ ಮೂಲಕ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶಗಳನ್ನು ಪಾಲಿಸುವುದರಿಂದ ಪಾರಾಗುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಮಧ್ಯಪ್ರವೇಶ ಕೋರಿರುವ ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

ಹೀಗಾಗಿ, ಇದನ್ನು ಅಮಿಕಸ್‌ ಕ್ಯೂರಿ ಪರಿಶೀಲಿಸಬೇಕು. ಈ ಕುರಿತು ಪೀಠದ ಮುಂದೆ ವಾದ ಮಂಡಿಸಬೇಕು. ಇಂದಿನಿಂದ ಒಂದು ವಾರದಲ್ಲಿ ಅಮಿಕಸ್‌ ಅವರಿಗೆ ಪಿಐಎಲ್‌ನ ಎಲ್ಲಾ ದಾಖಲೆಯನ್ನು ರಿಜಿಸ್ಟ್ರಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ.

Kannada Bar & Bench
kannada.barandbench.com