ಅನಧಿಕೃತ ಕಟ್ಟಡಗಳ ತೆರವು ಪ್ರಕರಣ: 'ನಾಮಕಾವಸ್ತೆ' ಕಾರ್ಯಾಚರಣೆಯಿಂದ ಪ್ರಯೋಜವಿಲ್ಲ ಎಂದು ಹೈಕೋರ್ಟ್‌ ಕಿಡಿ

ನ್ಯಾಯಾಲಯದ ಹಿಂದಿನ ಆದೇಶಗಳ ಪಾಲನೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪಾಲಿಕೆಗೆ ತೆರವು ಕಾರ್ಯ ಕೈಗೊಳ್ಳಲು ಹೆಚ್ಚುವರಿ ಮಾನವ ಸಂಪನ್ಮೂಲ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಲಾಗಿತ್ತು, ಆ ನಿರ್ದೇಶನ ಪಾಲನೆ ಆಗಿದೆಯೋ ಇಲ್ಲವೋ ತಿಳಿದಿಲ್ಲ ಎಂದ ಪೀಠ.
BBMP and Karnataka HC
BBMP and Karnataka HC

ಬೆಂಗಳೂರು ಮಹಾನಗರದಲ್ಲಿನ ಅನಧಿಕೃತ ಕಟ್ಟಡಗಳ ತೆರವಿಗೆ ನಾಮಕಾವಸ್ತೆ (ನಾಮ್ ಕೆ ವಾಸ್ತೆ) ಕಾರ್ಯಾಚರಣೆಯಿಂದ ಪ್ರಯೋಜವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಮೂರು ವಾರಗಳಲ್ಲಿ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸುವಂತೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಸೋಮವಾರ ಆದೇಶಿಸಿದೆ.

ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ಮೂರು ವಾರಗಳಲ್ಲಿ ಬಿಬಿಎಂಪಿ, ಸರ್ಕಾರ ಸೇರಿ ಎಲ್ಲ ಸಂಬಂಧಿತ ಸಂಸ್ಥೆಗಳ ಸಭೆ ನಡೆಸಿ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸಬೇಕು. ಜೊತೆಗೆ ಹಿಂದಿನ ಆದೇಶಗಳ ಅನುಪಾಲನಾ ವರದಿಯನ್ನೂ ಸಹ ಸಲ್ಲಿಸಬೇಕು” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

ಹೈಕೋರ್ಟ್‌ನ ಹಿಂದಿನ ಆದೇಶಗಳ ಅನುಷ್ಠಾನದ ವಿಚಾರದಲ್ಲಿ ಏನೂ ಪ್ರಗತಿ ಆಗದಿರುವುದನ್ನು ಹಾಗೂ ಬಿಬಿಎಂಪಿ ಕಾಚಾಚಾರಕ್ಕೆ ಅನಧಿಕೃತ ಕಟ್ಟಡಗಳ ತೆರವು ಕೈಗೊಂಡಿರುವ ಕುರಿತು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ಪ್ರಮೋದ್ ಕಟಾವಿ ಅವರು ವರದಿ ಸಲ್ಲಿಸಿದರು.

ಇದನ್ನು ಪರಿಶೀಲಿಸಿದ ಪೀಠವು ನ್ಯಾಯಾಲಯದ ಹಿಂದಿನ ಆದೇಶಗಳ ಪಾಲನೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪಾಲಿಕೆಗೆ ತೆರವು ಕಾರ್ಯ ಕೈಗೊಳ್ಳಲು ಹೆಚ್ಚುವರಿ ಮಾನವ ಸಂಪನ್ಮೂಲ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಲಾಗಿತ್ತು, ಆ ನಿರ್ದೇಶನ ಪಾಲನೆ ಆಗಿದೆಯೋ ಇಲ್ಲವೋ ತಿಳಿದಿಲ್ಲ ಎಂದು ಹೇಳಿತು.

ವರದಿಯನ್ನು ಗಮನಿಸಿದರೆ ಎರಡು ಬಗೆಯ ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಆದರೆ, ತೆರವು ಕಾರ್ಯಾಚರಣೆ ಬೆರಳೆಣಿಕೆಯಷ್ಟರಲ್ಲಿ ಮಾತ್ರ. ಇದು ಬಿಬಿಎಂಪಿ ಸ್ಪಷ್ಟವಾಗಿ ʼಸೆಲೆಕ್ಟಿವ್ ಅಪ್ರೋಚ್’ (ಆಯ್ದ ಕೆಲ ಪ್ರಕರಣಗಳಲ್ಲಿ ಮಾತ್ರವೇ ಕಾರ್ಯಾಚರಣೆ) ಪಾಲಿಸುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ. ಅದೂ ಸಹ ತೆರವುಗೊಳಿಸುವುದು ತಾತ್ಕಾಲಿಕ ನಿರ್ಮಿತಿಗಳನ್ನಷ್ಟೇ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

“ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಿ ಪಾಲಿಕೆ ಸುಮ್ಮನಾಗಿದೆ. ಅದು ತೆರವು ಕಾರ್ಯಕ್ಕೆ ಮುಂದಾಗಿರುವುದು ಕೆಲವೇ ಕೆಲವು ವ್ಯಕ್ತಿಗಳ ವಿರುದ್ಧ, ಅವರ್ಯಾರು ಆರ್ಥಿಕವಾಗಿ ಶಕ್ತಿವಂತರಲ್ಲ, ಬಡವರು. ಹೀಗಾಗಿ ಸುಮ್ಮನೆ “ನಾಮಕಾವಸ್ತೆಗೆ ಬಿಬಿಎಂಪಿ ತೆರವು ಕಾರ್ಯ ಕೈಗೊಳ್ಳುತ್ತಿದೆ” ಎಂದು ತರಾಟೆಗೆ ತೆಗೆದುಕೊಂಡಿತು.

ಸಮಗ್ರ ಕ್ರಮ ಅಗತ್ಯ: ಅನಧಿಕೃತ ಕಟ್ಟಡಗಳ ವಿಚಾರವನ್ನು ಸಮಗ್ರ ರೀತಿಯಲ್ಲಿ ನೋಡಬೇಕಿದೆ, ಎಲ್ಲ ಬಾಧ್ಯಸ್ಥರು ಜಂಟಿಯಾಗಿ ಸೇರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಒಂದೊಂದು ಸಂಸ್ಥೆಗಳು ಒಂದೊಂದು ದಿಕ್ಕಿಗೆ ಹೋದರೆ ಕೆಲಸ ಆಗದು. ಅದಕ್ಕಾಗಿ ಒಂದು ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕಿದೆ. ಈವರೆಗಿನ ಪ್ರಗತಿ ತೃಪ್ತಿ ತಂದಿಲ್ಲ. ಪ್ರಗತಿ ಕೇವಲ ಕಾಗದದಲ್ಲೇ ಉಳಿದಿದೆ ಎಂದು ಪೀಠ ಅತೃಪ್ತಿ ವ್ಯಕ್ತಪಡಿಸಿತು.

“ಬೆಂಗಳೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅಭಿವೃದ್ದಿ ಹೊಂದುತ್ತಿರುವ ನಗರವಾಗಿದ್ದು, ಇಲ್ಲಿ ಕಟ್ಟಡಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿರುತ್ತದೆ. ಅವುಗಳನ್ನು ರಾತ್ರೋರಾತ್ರಿ ನಿಲ್ಲಿಸಲಾಗದು. ಅವುಗಳ ಮೇಲ್ವಿಚಾರಣೆಗೆ ನಿರಂತರ ಮತ್ತು ಸಮಗ್ರ ಕ್ರಮ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಬಿಬಿಎಂಪಿ, ಸರ್ಕಾರ ಸೇರಿ ಎಲ್ಲ ಬಾಧ್ಯಸ್ಥರು ಸೇರಿ ಕ್ರಮ ಕೈಗೊಳ್ಳಬೇಕು” ಎಂಬುದು ನ್ಯಾಯಾಲಯದ ನಿರೀಕ್ಷೆಯಾಗಿದೆ ಎಂದಿತು.

Also Read
ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಪ್ರಕರಣ: ಎಜಿ ಮನವಿ, ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್‌

ಹೈಕೋರ್ಟ್ ಹಿಂದಿನ ಆದೇಶವೇನು?

2019ರ ನವೆಂಬರ್‌ 25ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ವಿವರವಾದ ಸರಣಿ ನಿರ್ದೇಶನಗಳನ್ನು ಬಿಬಿಎಂಪಿ ಮತ್ತು ಸರ್ಕಾರಕ್ಕೆ ನೀಡಿದೆ. ಅದರಲ್ಲಿ ಬಿಬಿಎಂಪಿ ಹಂತ ಹಂತವಾಗಿ ಅನಧಿಕೃತ ಕಟ್ಟಡಗಳ ಸಮೀಕ್ಷೆ ಮಾಡಬೇಕು ಮತ್ತು ಅವುಗಳ ತೆರವು ಕಾರ್ಯಾಚರಣೆಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂಬುದು ಪ್ರಮುಖವಾದುದು. ಅಲ್ಲದೆ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಪಾಲಿಕೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ಸರ್ಕಾರ ಪಾಲಿಕೆಗೆ ಅಗತ್ಯ ಯಂತ್ರೋಪಕರಣ ಹಾಗೂ ಮಾವನ ಸಂಪನ್ಮೂಲ ಒದಗಿಸಬೇಕು. ಈ ಕುರಿತು ಪಾಲಿಕೆ ಸರ್ಕಾರಕ್ಕೆ ಸಮಗ್ರವಾದ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು.

Related Stories

No stories found.
Kannada Bar & Bench
kannada.barandbench.com