ಲಾರಿಯ ಟ್ಯಾಂಕರ್‌ನಲ್ಲಿ ಅಕ್ರಮ ಡೀಸೆಲ್‌ ಸಾಗಣೆ; ಡಿವೈಎಸ್‌ಪಿ ಶ್ರೇಣಿ ಅಧಿಕಾರಿ ತಪಾಸಣೆ ಮಾಡಬೇಕು: ಹೈಕೋರ್ಟ್‌

ಮೋಟಾರು ಸ್ಪಿರಿಟ್‌ ಮತ್ತು ಹೈ–ಸ್ಪೀಡ್‌ ಡೀಸೆಲ್‌ ಸಾಗಣೆ, ನಿಯಂತ್ರಣ ವಿತರಣೆ ಮತ್ತು ಅಕ್ರಮ ತಡೆ ಆದೇಶ–1988ರ ಉಪನಿಯಮಗಳ ಅನುಸಾರ ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯ ಅಧಿಕಾರಿಗಳಿಗೆ ದಾಳಿ, ತಪಾಸಣೆ ಮತ್ತು ಜಪ್ತಿ ಮಾಡುವ ಅಧಿಕಾರ ಇರುವುದಿಲ್ಲ.
Justice M Nagaprasanna
Justice M Nagaprasanna
Published on

ಲಾರಿಯ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಡೀಸೆಲ್‌ ಸಾಗಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಾರಿ ಮಾಲೀಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್‌; “ಇಂತಹ ಸಂದರ್ಭಗಳಲ್ಲಿ ದಾಳಿ, ತಪಾಸಣೆ ಮತ್ತು ಜಪ್ತಿ ಮಾಡುವಾಗ ಪೊಲೀಸ್‌ ಇಲಾಖೆಯ ಡಿವೈಎಸ್‌ಪಿ ಶ್ರೇಣಿಗಿಂತಲೂ ಕೆಳಗಿನ ಅಧಿಕಾರಿ ಇರಬಾರದು ಎಂಬ ಕಾನೂನು ಪಾಲಿಸಬೇಕು” ಎಂದಿದೆ.

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಸಾದಿಕ್‌ ಪಾಷ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿರುವ ಅಪರಾಧ ಇಲ್ಲಿ ಅನ್ವಯ ಆಗುವುದಿಲ್ಲ. ಅಂತೆಯೇ, ಮೋಟಾರು ಸ್ಪಿರಿಟ್‌ ಮತ್ತು ಹೈ–ಸ್ಪೀಡ್‌ ಡೀಸೆಲ್‌ ಸಾಗಣೆ, ನಿಯಂತ್ರಣ ವಿತರಣೆ ಮತ್ತು ಅಕ್ರಮ ತಡೆ ಆದೇಶ–1988ರ ಉಪನಿಯಮಗಳ ಅನುಸಾರ ಈ ಪ್ರಕರಣದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ಗೆ ದಾಳಿ, ತಪಾಸಣೆ ಮತ್ತು ಜಪ್ತಿ ಮಾಡುವ ಅಧಿಕಾರ ಇರುವುದಿಲ್ಲ” ಎಂದು ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌ ಸುನಿಲ್ ಕುಮಾರ್ ಅವರು “ಈ ಪ್ರಕರಣದಲ್ಲಿ ದಾಳಿ ನಡೆಸಿ ಲಾರಿ ಮತ್ತು ಡೀಸೆಲ್‌ ಅನ್ನು ವಶಪಡಿಸಿಕೊಂಡಿರುವ ಅಧಿಕಾರಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯಲ್ಲಿದ್ದು, ಇದು ಕಾನೂನಿಗೆ ವಿರುದ್ಧವಾದ ನಡೆ. ಹೀಗಾಗಿ, ಪ್ರಕರಣವನ್ನು ರದ್ದುಪಡಿಸಬೇಕು” ಎಂದು ಕೋರಿದ್ದರು. ಸರ್ಕಾರದ ಪರ ವಕೀಲೆ ಕೆ ಪಿ ಯಶೋದಾ ಅವರು ಇದಕ್ಕೆ ಆಕ್ಷೇಪಿಸಿದ್ದರು.

ಪ್ರಕರಣದ ಹಿನ್ನೆಲೆ: ಮುದಗಲ್‌–ಚಿತ್ತೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾನೂನು ಬಾಹಿರವಾಗಿ ಲಾರಿಯ ಟ್ಯಾಂಕರ್‌ನಲ್ಲಿ ಡೀಸೆಲ್‌ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು 2022ರ ಸೆಪ್ಟೆಂಬರ್ 15ರಂದು ದಾಳಿ ನಡೆಸಿದ್ದರು. ಸ್ಥಳದಲ್ಲೇ ಲಾರಿಯನ್ನು ಜಪ್ತಿ ಮಾಡಿ ಚಾಲಕ ಮತ್ತು ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಸೆಕ್ಷನ್‌ 285, ಅಗತ್ಯ ವಸ್ತುಗಳ ಕಾಯಿದೆ 1955 ಹಾಗೂ ಮೋಟಾರು ಸ್ಪಿರಿಟ್‌ ಮತ್ತು ಹೈ–ಸ್ಪೀಡ್‌ ಡೀಸೆಲ್‌ ಸಾಗಣೆ, ನಿಯಂತ್ರಣ ವಿತರಣೆ ಮತ್ತು ಅಕ್ರಮ ತಡೆ ಆದೇಶ–1988ರ ಉಪನಿಯಮಗಳ ಅನುಸಾರ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು. 

ಲಾರಿಯ ಮಾಲೀಕರಾದ ಸಾದಿಕ್‌ ಪಾಷ ಮುಳಬಾಗಿಲಿನಲ್ಲಿ ಎಸ್‌ಡಬ್ಲ್ಯುಎಸ್‌ & ಸನ್ಸ್‌ ಹೆಸರಿನಲ್ಲಿ ಪೆಟ್ರೊಲ್ ಬಂಕ್ ಹೊಂದಿದ್ದು, ಡೀಸೆಲ್‌ ಸಾಗಣೆ ಪರವಾನಗಿ ಹೊಂದಿದ್ದು, ತನ್ನ ವಿರುದ್ಧ ಹೂಡಲಾಗಿರುವ ಪ್ರಕರಣ ಕಾನೂನುಬಾಹಿರವಾಗಿದೆ ಎಂದು ಪ್ರತಿಪಾದಿಸಿದ್ದರು. ಅಂತೆಯೇ, ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Attachment
PDF
Sadiq Pasha Vs State of Karnataka.pdf
Preview
Kannada Bar & Bench
kannada.barandbench.com