ಮಕ್ಕಳ ಅಧಿಕೃತತೆಗೆ ಸಂಬಂಧಿಸಿದಂತೆ ಏಕರೂಪದ ಕಾನೂನಿನ ಅಗತ್ಯವಿದೆ: ಕರ್ನಾಟಕ ಹೈಕೋರ್ಟ್

ಮಕ್ಕಳ ಅಧಿಕೃತತೆಗೆ ಸಂಬಂಧಿಸಿದಂತೆ ಏಕರೂಪದ ಕಾನೂನಿನ ಅಗತ್ಯವಿದೆ: ಕರ್ನಾಟಕ ಹೈಕೋರ್ಟ್

ಮೊದಲನೇ ಪತ್ನಿ ಇದ್ದಾಗಲೇ ವ್ಯಕ್ತಿಯ ಎರಡನೇ ಹೆಂಡತಿ ಅಥವಾ ಆಕೆಯ ಮಕ್ಕಳು ಅನುಕಂಪದ ನೇಮಕಾತಿಗೆ ಅರ್ಹರಾಗಿರುವುದಿಲ್ಲ ಎಂದು ನಿರ್ದೇಶಿಸಿದ್ದ ಸುತ್ತೋಲೆಯನ್ನು ನ್ಯಾಯಾಲಯ ರದ್ದುಪಡಿಸಿತು.
Published on

ಮಹತ್ವದ ತೀರ್ಪೊಂದರಲ್ಲಿ ಕರ್ನಾಟಕ ಹೈಕೋರ್ಟ್‌ ಹೆತ್ತವರ ಸಂಬಂಧ ಅನಧಿಕೃತ ಇರಬಹುದು ಆದರೆ ಅವರ ಮಕ್ಕಳು ಅನಧಿಕೃತ ಅಲ್ಲ ಎಂದು ತಿಳಿಸಿದ್ದು ಹಾಗಾಗಿ ಅಂತಹ ಮಕ್ಕಳಿಗೆ ಸಮಾನ ರಕ್ಷಣೆ ಮತ್ತು ಹಕ್ಕು ಒದಗಿಸಲು ಕಾನೂನು ರೂಪಿಸುವ ಅಗತ್ಯವಿದೆ ಎಂದು ಅದು ತಿಳಿಸಿತು.

ಮೊದಲನೇ ಪತ್ನಿ ಇದ್ದಾಗಲೇ ವ್ಯಕ್ತಿಯು ಎರಡನೇ ಮದುವೆಯಾಗಿದ್ದರೆ ಆಗ ಎರಡನೇ ಹೆಂಡತಿ ಅಥವಾ ಆಕೆಯ ಮಕ್ಕಳು ಅನುಕಂಪದ ನೇಮಕಾತಿಗೆ ಅರ್ಹರಾಗಿರುವುದಿಲ್ಲ ಎಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಹೊರಡಿಸಿದ್ದ ಸುತ್ತೋಲೆಯನ್ನು ನ್ಯಾಯಾಲಯ ಬುಧವಾರ ರದ್ದುಪಡಿಸಿತು.

ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಹಂಚಾಟೆ ಸಂಜೀವ್‌ ಕುಮಾರ್‌ ಅವರು ನೀಡಿದ ತೀರ್ಪಿನಲ್ಲಿ ಮಕ್ಕಳ ಅಧಿಕೃತತೆಗೆ ಸಂಬಂಧಿಸಿದಂತೆ ಸಂಸತ್ತು, ಕಾನೂನಿನಲ್ಲಿ ಏಕರೂಪತೆ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.

“…ತಂದೆ ಮತ್ತು ತಾಯಿ ಇಲ್ಲದೆ ಈ ಜಗತ್ತಿನಲ್ಲಿ ಯಾವುದೇ ಮಗು ಜನಿಸುವುದಿಲ್ಲ. ಮಗು ತನ್ನ ಜನನಕ್ಕೆ ಸಂಬಂಧಿಸಿದಂತೆ ಯಾವುದೇ ಪಾತ್ರ ವಹಿಸಿರುವುದಿಲ್ಲ. ಹೀಗಾಗಿ ಹೆತ್ತವರ ಸಂಬಂಧ ಅನಧಿಕೃತ ಇರಬಹುದು ಆದರೆ ಅವರ ಮಕ್ಕಳು ಅನಧಿಕೃತ ಅಲ್ಲ ಎಂಬ ಅಂಶವನ್ನು ಕಾನೂನು ಗುರುತಿಸಬೇಕು. ಆದ್ದರಿಂದ ಸಂಸತ್ತು ಮಕ್ಕಳ ಅಧಿಕೃತತೆಗೆ ಸಂಬಂಧಿಸಿದಂತೆ ಏಕರೂಪದ ಕಾನೂನು ತರಬೇಕಿದೆ. ವಿವಾಹೇತರವಾಗಿ ಜನಿಸಿದ ಮಕ್ಕಳಿಗೆ ಯಾವ ರೀತಿಯ ರಕ್ಷಣೆ ಒದಗಿಸಬೇಕು ಎಂಬ ಕುರಿತು ಸಂಸತ್ತು ನಿರ್ಧರಿಸಬೇಕಿದೆ” ಎಂದಿತು.

Also Read
ಆಮ್ಲಜನಕ ಕೊರತೆಯಿಂದ ತಂದೆ ದುರ್ಮರಣ: ಮಕ್ಕಳ ಪರಿಹಾರ ಕೋರಿಕೆ ಆಧರಿಸಿ ಕೇಂದ್ರ, ರಾಜ್ಯಕ್ಕೆ ದೆಹಲಿ ಹೈಕೋರ್ಟ್‌ ನೋಟಿಸ್‌

ಈ ಮೂಲಕ ಎರಡನೇ ಪತ್ನಿಯ ಮಕ್ಕಳು ಅನುಕಂಪದ ನೌಕರಿ ಪಡೆಯಲು ಅರ್ಹರಲ್ಲ ಎಂದು ಕೆಪಿಟಿಸಿಎಲ್‌ 2011ರ ಸೆಪ್ಟೆಂಬರ್ 23ರಂದು ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್‌ ರದ್ದುಪಡಿಸಿತು.

ಲೈನ್‌ಮನ್‌ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 2014ರ ಜೂನ್ 10ರಂದು ನಿಧನರಾಗಿದ್ದರು. ಅನುಕಂಪದ ಆಧಾರದಲ್ಲಿ ನೌಕರಿ ಕೋರಿ ಎರಡನೇ ಪತ್ನಿ ಮಗ ಅರ್ಜಿದಾರ ಸಂತೋಷ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೆಪಿಟಿಸಿಎಲ್‌ ತಿರಸ್ಕರಿಸಿತ್ತು. ಮೊದಲ ಪತ್ನಿ ಇದ್ದಾಗಲೇ ಎರಡನೇ ವಿವಾಹವಾಗಿದ್ದರೆ ಆ ಪತ್ನಿ ಅಧಿಕೃತ ಅಲ್ಲ. ತಾಯಿ ಅನಧಿಕೃತರಾಗಿರುವ ಕಾರಣ ಮಗನೂ ಅನಧಿಕೃತ ಎಂದು ಅದು ವಾದಿಸಿತ್ತು.

ಇದನ್ನು ಪ್ರಶ್ನಿಸಿದ್ದ ಅರ್ಜಿ ಮತ್ತು ಮರು ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ವಿಭಾಗೀಯ ಪೀಠದ ಮೊರೆ ಹೋಗಿದ್ದರು.

ಕೇಂದ್ರ ಸರ್ಕಾರ ಮತ್ತು ವಿ ಆರ್‌ ತ್ರಿಪಾಠಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ವಿಭಾಗೀಯ ಪೀಠ ಎಲ್ಲಾ ಧರ್ಮಗಳಲ್ಲಿರುವ ಎಲ್ಲಾ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿತು.

Kannada Bar & Bench
kannada.barandbench.com