ಅನಕ್ಷರತೆಯು ಬಾಲ್ಯ ವಿವಾಹದಂತಹ ಗಂಭೀರ ಪ್ರಕರಣ ರದ್ದತಿಗೆ ಆಧಾರವಾಗದು: ಹೈಕೋರ್ಟ್‌

“ಪ್ರಕರಣದಲ್ಲಿ ಮದುವೆಯಾಗಿರುವ ಯುವತಿಗೆ ಮಗು ಜನಿಸಿದೆ. ಈ ಅಂಶವನ್ನು ಪರಿಗಣಿಸಿ ಪೋಕ್ಸೊ ಕಾಯಿದೆ ರದ್ದುಪಡಿಸಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ದಯೆ ತೋರುವ ಅಗತ್ಯವಿಲ್ಲ” ಎಂದ ನ್ಯಾಯಾಲಯ.
Child Marriage
Child Marriage
Published on

“ಅನಕ್ಷರತೆ ಎಂಬುದು ಬಾಲ್ಯ ವಿವಾಹದಂತಹ ಗಂಭೀರ ಪ್ರಕರಣಗಳನ್ನು ರದ್ದುಪಡಿಸಲು ಆಧಾರ ಎನಿಸುವುದಿಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಿಡಿಕಾರಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ (ತ್ವರಿತ ವಿಶೇಷ ನ್ಯಾಯಾಲಯ) ನ್ಯಾಯಾಲಯದಲ್ಲಿನ ಕ್ರಿಮಿನಲ್‌ ಪ್ರಕರಣ ರದ್ದತಿ ಕೋರಿ ಗೌರಿಬಿದನೂರು ತಾಲ್ಲೂಕು ಹುಡುಗೂರಿನ, ಅಶೋಕ, ಅಶ್ವತ್ಥ ನಾರಾಯಣ, ರಂಗಮ್ಮ, ರಾಮಾಂಜಿನಮ್ಮ ಮತ್ತು ಶ್ರೀರಾಮಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಹುಡುಗ-ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ನಡೆದಾಗ ಯುವತಿಗೆ 16 ವರ್ಷ, 9 ತಿಂಗಳಾಗಿತ್ತು. ದಂಪತಿಗೆ ಈಗಾಗಲೇ ಒಂದು ಮಗು ಜನಿಸಿದೆ. ಅರ್ಜಿದಾರರು ಅನಕ್ಷರಸ್ಥರು. ಇವರೆಲ್ಲಾ ವಿವಾಹವಾಗಿರುವ ಯುವಕ-ಯುವತಿಯ ಪೋಷಕರಾಗಿದ್ದಾರೆ. ತಿಳಿವಳಿಕೆ ಇಲ್ಲದೆ ಎಲ್ಲರೂ ಸೇರಿಕೊಂಡು ವಿವಾಹ ಮಾಡಿಸಿದ್ದಾರೆ. ಆದ್ದರಿಂದ, ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದರು.

ಇದರಿಂದ ಕೆರಳಿದ ಪೀಠವು “ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ. ಅವರೆಲ್ಲಾ ಪ್ರಕರಣದ ವಿಚಾರಣೆ ಎದುರಿಸಲೇಬೇಕು. ಈ ವಿಷಯದಲ್ಲಿ ಪೋಷಕರಿಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ” ಎಂದಿತು.

“ಪ್ರಕರಣದಲ್ಲಿ ಮದುವೆಯಾಗಿರುವ ಯುವತಿಗೆ ಮಗು ಜನಿಸಿದೆ. ಈ ಅಂಶವನ್ನು ಪರಿಗಣಿಸಿ ಪೋಕ್ಸೊ ಕಾಯಿದೆ ರದ್ದುಪಡಿಸಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ದಯೆ ತೋರುವ ಅಗತ್ಯವಿಲ್ಲ” ಎಂದು ಪುನರುಚ್ಚರಿಸಿ ಅರ್ಜಿ ಕುರಿತಂತೆ ತೀರ್ಪು ಕಾಯ್ದಿರಿಸಿ ಆದೇಶಿಸಿತು.

ಅರ್ಜಿದಾರ ಪೋಷಕರು 16 ವರ್ಷ 9 ತಿಂಗಳ ವಯಸ್ಸಿನ ಯುವತಿಗೆ ಮದುವೆ ಮಾಡಿಸಿದ ಆರೋಪದಡಿ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ 376 (2)(ಎನ್‌) (ನಿರ್ದಿಷ್ಟ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ–2012ರ (ಪೋಕ್ಸೊ) ಸೆಕ್ಷನ್‌ 5(ಜೆ)(II) (ಲೈಂಗಿಕ ದೌರ್ಜನ್ಯದ ಪರಿಣಾಮ ಬಾಲಕಿ ಗರ್ಭಿಣಿಯಾದರೆ) ಮತ್ತು ಬಾಲ್ಯವಿವಾಹ ನಿಷೇಧ ಕಾಯಿದೆ–2006ರ ಸೆಕ್ಷನ್‌ 9,10 ಮತ್ತು 11ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com