
ಐಎಂಎ (ಐ–ಮಾನಿಟರಿ ಅಡ್ವೈಸರಿ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಪರಾಧಿಕ ಒಳಸಂಚು ರೂಪಿಸಿ ಭ್ರಷ್ಟಾಚಾರ ಎಸಗಿದ ಆರೋಪ ಹೊತ್ತಿದ್ದ ಸಬ್ ಇನ್‌ಸ್ಪೆಕ್ಟರ್ ಗೌರಿಶಂಕರ್ ಅವರನ್ನು ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.
ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದ್ದು, ಸತ್ರ ನ್ಯಾಯಾಲಯ ಹೊರಡಿಸಿರುವ ಆದೇಶ ಸಮಂಜಸವಾಗಿದೆ. ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜನಪ್ರತಿನಿಧಿಗಳ ವಿಚಾರಣಾಧೀನ ನ್ಯಾಯಾಲಯ ಗೌರಿಶಂಕರ್ ಅವರನ್ನು 2024ರ ಜುಲೈ 15ರಂದು ಆರೋಪ ಮುಕ್ತಗೊಳಿಸಿ ಆದೇಶಿಸಿತ್ತು. ಘಟನೆ ನಡೆದಾಗ ಆರೋಪಿ ಗೌರಿಶಂಕರ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದರು.
ಗೌರಿಶಂಕರ್ ಅವರನ್ನು ಸಿಬಿಐ 28ನೇ ಆರೋಪಿಯನ್ನಾಗಿ ಮಾಡಿ ಅವರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿತ್ತು. ಐಎಂಎ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ಅವರಿಂದ ಗೌರಿಶಂಕರ್ ಹಲವು ಸಂದರ್ಭಗಳಲ್ಲಿ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.