ಐ ಮಾನಿಟರಿ ಅಡ್ವೈಸರಿ (ಐಎಂಎ) ಸಮೂಹಕ್ಕೆ ಸಂಬಂಧಿಸಿದ ಹಗರಣದಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ವಿರುದ್ಧದ ಆರೋಪ ರುಜುವಾತಾಗಿಲ್ಲ ಎಂಬ ತನಿಖಾಧಿಕಾರಿಯಾದ ನಿವೃತ್ತ ಜಿಲ್ಲಾ ನ್ಯಾಯಾಧೀಶರ ವರದಿ ಆಧರಿಸಿ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ ರಾಜ್ಯ ಸರ್ಕಾರವು ಸೋಮವಾರ ಆದೇಶಿಸಿದೆ.
ಎಐಎಸ್ (ಡಿ ಮತ್ತು ಎ) ನೀತಿ, ನಿಯಮ 8(4)ರ ಅಡಿ ಇಲಾಖಾ ವಿಚಾರಣಾ ಪ್ರಕ್ರಿಯೆ ಜಾರಿ ಮಾಡಿದ್ದನ್ನು ಮುಕ್ತಾಯಗೊಳಿಸಿದ್ದು, ಅಧಿಕಾರಿಯ ವಿರುದ್ದ ಆರೋಪಿಸಲಾಗಿದ್ದೆಲ್ಲವನ್ನೂ ಕೈಬಿಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
ಪ್ರಕರಣದ ಹಿನ್ನೆಲೆ: ಐಎಂಎ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿತ್ತು. ಈ ಸಂಬಂಧ ವಿಸ್ತೃತ ತನಿಖೆ ನಡೆಸಿದ್ದ ಸಿಬಿಐ, ಅಂದಿನ ಅಪರಾಧ ತನಿಖಾ ದಳದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಾಮಾನ್ಯ ಇಲಾಖಾ ಕ್ರಮಕ್ಕೆ ಶಿಫಾರಸ್ಸು ಮಾಡಿತ್ತು. ಎಐಎಸ್ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿ ನಿಂಬಾಳ್ಕರ್ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ನಿಂಬಾಳ್ಕರ್ ಅವರು ಕರ್ನಾಟಕ ಹೈಕೋರ್ಟ್ ತನ್ನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಿರುವುದರಿಂದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು ಎಂದು 2021ರ ಮೇ 18ರಂದು ಪತ್ರ ಬರೆದಿದ್ದರು. ಇದಕ್ಕೆ ರಾಜ್ಯ ಸರ್ಕಾರವು ಕ್ರಿಮಿನಲ್ ಪ್ರಕ್ರಿಯೆ ಮತ್ತು ಇಲಾಖಾ ವಿಚಾರಣೆಯನ್ನು ವಿಭಿನ್ನ ತತ್ವದ ಮೇಲೆ ನಡೆಸಲಾಗುತ್ತದೆ. ಈ ಎರಡನ್ನೂ ಹೋಲಿಕೆ ಮಾಡಬಾರದು. ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಿರುವುದು ಇಲಾಖಾ ವಿಚಾರಣೆಯ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದಿತ್ತು. ನಿಂಬಾಳ್ಕರ್ ಅವರು ತಮ್ಮ ರಕ್ಷಣೆಗೆ ಮುಂದಾಗದಿದ್ದಾಗ ಅಖಿಲ ಭಾರತ ಸೇವಾ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿ ರಾಜ್ಯ ಸರ್ಕಾರವು ಹೇಮಂತ್ ನಿಂಬಾಳ್ಕರ್ ಮತ್ತು ಇನ್ನೊಬ್ಬ ಐಪಿಎಸ್ ಅಧಿಕಾರಿ ಎಸ್ ಮುರುಗನ್ ವಿರುದ್ಧ ವಿಚಾರಣೆಗಾಗಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ ಎಂ ತಿಮ್ಮಯ್ಯ ಅವರನ್ನು ನೇಮಕ ಮಾಡಿತ್ತು.
ವಿಚಾರಣಾಧಿಕಾರಿಯು ನಿಂಬಾಳ್ಕರ್ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಈ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದ್ದು, ನಿಂಬಾಳ್ಕರ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ.