ಮಣಿಪುರದಲ್ಲಿ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಹೋಲುವಂತೆ ರಾಷ್ಟ್ರಧ್ವಜ ಹೊದ್ದುಕೊಂಡಿರುವ ಅರೆಬೆತ್ತಲೆ ಮಹಿಳೆ ಫೋಟೊವನ್ನು ಸಾಮಾಜಿಕ ಜಾಲಾತಾಣ ವಾಟ್ಸಪ್ನಲ್ಲಿ ಹಂಚಿಕೊಂಡಿದ್ದ ಆರೋಪದಲ್ಲಿ ಬಂಧನ ಭೀತಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬಳ್ಳಾರಿ ಜಿಲ್ಲೆಯ ಸಿರುಗಪ್ಪ ತಾಲ್ಲೂಕಿನ ನಿವಾಸಿ ಸಬು ಹುಸೈನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಮಾನ್ಯ ಮಾಡಿದೆ.
ವಾದ-ಪ್ರತಿವಾದ ಆಲಿಸಿ ಪೀಠವು ಅರ್ಜಿದಾರರು ವಾಟ್ಸಪ್ ಮೂಲಕ ತನ್ನ ಫೋನ್ಗೆ ಬಂದ ಸಂದೇಶವನ್ನು ಮತ್ತೊಬ್ಬರಿಗೆ ಹಂಚಿಕೊಂಡಿದ್ದಾರೆ. ಈ ಆರೋಪಕ್ಕೆ ಗರಿಷ್ಠ ಶಿಕ್ಷೆ ಕೇವಲ 3 ವರ್ಷವಾಗಿದೆ. ಜೊತೆಗೆ, ಯಾವುದೇ ಅಪರಾಧ ಕೃತ್ಯ ಎಸಗಬೇಕು ಎಂಬ ಉದ್ದೇಶವಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಪೀಠವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿತು.
ಒಂದ ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತದ ಒಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಜೊತೆಗೆ, ಸಾಕ್ಷ್ಯ ನಾಶಕ್ಕೆ ಮುಂದಾಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.
ಅರ್ಜಿದಾರರ ಪರ ವಕೀಲ ಮುಕಾಬುಲ್ ಅಹ್ಮದ್ ಎಂ. ಪಾಟೀಲ್ ಅವರು ಅರ್ಜಿದಾರರು ಯಾವುದೇ ದುರುದ್ದೇಶ ಹೊಂದಿರಲಿಲ್ಲ. ಹಮ್ ಸಾಥ್ ಸಾಥ್ ಹೈ ಎಂಬ ವಾಟ್ಸಪ್ ಗ್ರೂಪ್ನಲ್ಲಿ ಬಂದ ಚಿತ್ರವನ್ನು ಮತ್ತೊಬ್ಬರಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಅರ್ಜಿದಾರರ ವಿರುದ್ದದ ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು ಎಂದು ಪೀಠಕ್ಕೆ ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ: ಅರೆಬೆತ್ತಲೆ ಮಹಿಳೆಯ ಚಿತ್ರಕ್ಕೆ ರಾಷ್ಟ್ರಧ್ವಜ ಹೊದಿಸಿರುವ ಚಿತ್ರ ಹಂಚಿಕೊಂಡಿದ್ದು, ಈ ಸಂಬಂಧ ಮಾಹಿತಿ ಪಡೆದಿದ್ದ ಪೊಲೀಸರು ಅರ್ಜಿದಾರ ಆರೋಪಿಯ ವಿರುದ್ದ ಸಿರಗುಪ್ಪ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದರು. ಸಾರ್ವಜನಿಕರ ಮನಸ್ಸಿಗೆ ಘಾಸಿ ಉಂಟು ಮಾಡುವ ಆರೋಪದ ಅಡಿ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67 ಅನ್ವಯಿಸಲಾಗಿತ್ತು. ಬಂಧನದ ಭೀತಿಯಲ್ಲಿದ್ದ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿರುಗುಪ್ಪದ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.