ಲೈಂಗಿಕ ಕಾರ್ಯಕರ್ತೆಯಾಗಿದ್ದಳು ಎನ್ನಲಾದ ಎಚ್‌ಐವಿ ಸೋಂಕಿತ ಮಹಿಳೆಯನ್ನು ಮುಕ್ತವಾಗಿರಲು ಬಿಟ್ಟರೆ ಸಮಾಜಕ್ಕೆ ಅಪಾಯಕಾರಿ ಎಂಬ ನೆಲೆಯಲ್ಲಿ ಆಕೆಯನ್ನು ಬಂಧಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ನೀಡಿದ್ದ ಆದೇಶವನ್ನು ಮುಂಬೈನ ದಿಂಡೋಶಿ ಸೆಷನ್ಸ್ ನ್ಯಾಯಾಲಯ ಇತ್ತೀಚೆಗೆ ಎತ್ತಿ ಹಿಡಿದಿದೆ.
ಸಂತ್ರಸ್ತೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗ ಸ್ಥಳೀಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಅಕ್ರಮ ಮಾನವ ಸಾಗಣೆ (ತಡೆ) ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ಲೈಂಗಿಕ ಕಾರ್ಯಕರ್ತೆಯನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿಡಲು ನ್ಯಾಯಾಲಯ ನಿರ್ದೇಶಿಸಿದೆ. (ಕಾಯಿದೆಯ 17ನೇ ಸೆಕ್ಷನ್ ಪ್ರಕಾರ ಮ್ಯಾಜಿಸ್ಟ್ರೇಟ್ ಅವರು ಆರೈಕೆ ಅಥವಾ ರಕ್ಷಣೆ ಅಗತ್ಯವಿರುವ ವ್ಯಕ್ತಿಯನ್ನು ರಕ್ಷಣಾ ಗೃಹಕ್ಕೆ ನೀಡಲು ಅಥವಾ ವಶಕ್ಕೆ ಒಪ್ಪಿಸಲು ಆದೇಶಿಸಬಹುದಾಗಿದೆ.)
ಮಹಿಳೆ ಲೈಂಗಿಕ ಕಾರ್ಯದಲ್ಲಿ ಭಾಗಿಯಾಗಿಲ್ಲ ಎಂದು ಮನವಿಯಲ್ಲಿ ಆಕೆಯ ತಂದೆ ತಿಳಿಸಿದ್ದರು. ಆದರೂ ಎಫ್‌ಐಆರ್ ಪರಿಶೀಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ಯು ಬಘೆಲೆ ಅವರು ಆಕೆ ಲೈಂಗಿಕ ಕಾರ್ಯದಲ್ಲಿ ತೊಡಗಿದ್ದಳು ಎಂದು ಮೇಲ್ನೋಟಕ್ಕೆ ಕಂಡುಬಂದಿದೆೆ ಎಂಬುದಾಗಿ ಅಭಿಪ್ರಾಯಪಟ್ಟರು. ಅದೇ ಕಾರಣದಿಂದಾಗಿ ಕಾಯಿದೆಯಡಿ ಆಕೆಯನ್ನು ಸಂತ್ರಸ್ತೆ ಎಂದು ಗುರುತಿಸಲಾಗಿದೆ ಎಂಬುದಾಗಿ ತಿಳಿಸಿದರು.
ಆಸಿಯಾ ಶೇಖ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣದಲ್ಲಿ ರಕ್ಷಣಾ ಗೃಹದಲ್ಲಿದ್ದ ಸಂತ್ರಸ್ತೆಯೊಬ್ಬರನ್ನು ಬಾಂಬೆ ಹೈಕೋರ್ಟ್ 6 ತಿಂಗಳ ನಂತರ ಬಿಡುಗಡೆ ಮಾಡಲು ಅನುಮತಿ ನೀಡಿತು ಎಂದು ತಿಳಿಸಿದ ನ್ಯಾಯಾಲಯ ಪ್ರಸ್ತುತ ಪ್ರಕರಣ ಅದಕ್ಕಿಂತಲೂ ಭಿನ್ನ ಎಂದು ಹೇಳಿತು.
ಲೈಂಗಿಕ ಸಂಪರ್ಕದ ಮೂಲಕ ಹರಡಬಹುದಾದ ಎಚ್‌ಐವಿಯಿಂದ ಸಂತ್ರಸ್ತೆ ಬಳಲುತ್ತಿರುವುದರಿಂದ ಆಕೆಯನ್ನು ಬಿಡುಗಡೆ ಮಾಡುವುದು ಸಮಾಜಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಅಧಿಕಾರಿಗಳು ಅವಲಂಬಿಸಿರುವ ಪ್ರಕರಣದ ವಾಸ್ತವಿಕ ಸನ್ನಿವೇಶ ಭಿನ್ನವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಸಂತ್ರಸ್ತೆ ಆರ್ಥಿಕವಾಗಿ ಸದೃಢವಾಗಿರುವುದರಿಂದ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿಲ್ಲ ಎಂಬ ವಾದದಲ್ಲಿ ಹುರುಳಿಲ್ಲ. ಎಫ್‌ಐಆರ್ ಪ್ರಕಾರ ₹ 1 ಲಕ್ಷ ಪಡೆದು ಆಕೆ ಲೈಂಗಿಕ ಕ್ರಿಯೆಗೆ ಒಪ್ಪಿರುವುದಕ್ಕೆ ಪುರಾವೆಗಳಿವೆ ಎಂದು ಕೋರ್ಟ್ ತಿಳಿಸಿತು.
ಸಂತ್ರಸ್ತೆಗೆ ಸೂಕ್ತ ರೀತಿಯಲ್ಲಿ ತಿಳಿ ಹೇಳಿ ಭವಿಷ್ಯದಲ್ಲಿ ಆಕೆ ಸಾಮಾನ್ಯ ಜೀವನ ನಡೆಸುವಂತೆ ಮಾಡಬೇಕಿರುವುದರಿಂದ ಆಕೆಯನ್ನು ಬಂಧಿಸಿ ಕಾಳಜಿ ಮತ್ತು ರಕ್ಷಣೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಮ್ಯಾಜಿಸ್ಟ್ರೇಟ್ ನೀಡಿದ ತೀರ್ಪಿನಲ್ಲಿ ಯಾವುದೇ ಹಸ್ತಕ್ಷೇಪ ಮಾಡದಿರಲು ನ್ಯಾಯಾಧೀಶ ಬಘೇಲೆ ನಿರ್ಧರಿಸಿ ಆದೇಶ ಎತ್ತಿ ಹಿಡಿದರು.