ಬಿಎಂಟಿಸಿ ಬಸ್‌ಗಳಲ್ಲಿ ವಿಕಲಚೇತನರ ಸಹಾಯಕ್ಕಾಗಿ ಧ್ವನಿ ಪ್ರಕಟಣೆ ಅಳವಡಿಕೆ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಬಿಎಂಟಿಸಿ ಪರ ವಕೀಲರು ನೀಡಿದ ಮಾಹಿತಿ ದಾಖಲಿಸಿಕೊಂಡ ನ್ಯಾಯಾಲಯವು ಅರ್ಜಿದಾರರ ಮನವಿ ಈಡೇರಿದೆ. ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಸಾರಿಗೆ ಸಂಸ್ಥೆ ಜಾರಿ ಮಾಡಿದೆ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC
Published on

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 928 ಬಸ್‌ಗಳಲ್ಲಿ ವಿಕಲಚೇತನರು ಮತ್ತು ದೃಷ್ಟಿದೋಷವುಳ್ಳವರ ಸಹಾಯಕ್ಕಾಗಿ ಧ್ವನಿ ಪ್ರಕಟಣೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.

ರಾಜ್ಯ ಮತ್ತು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಮೆಟ್ರೊ ರೈಲುಗಳಲ್ಲಿ ಧ್ವ್ವನಿ ಪ್ರಕಟಣೆ ಸೇವೆಯನ್ನು ಪುನರಾರಂಭಿಸುವಂತೆ ಕೋರಿ ದೃಷ್ಟಿದೋಷವುಳ್ಳ ಎನ್ ಶ್ರೇಯಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬಿಎಂಟಿಸಿ ಪರ ವಕೀಲರು ನೀಡಿದ ಮಾಹಿತಿ ದಾಖಲಿಸಿಕೊಂಡ ನ್ಯಾಯಾಲಯವು ಅರ್ಜಿದಾರರ ಮನವಿ ಈಡೇರಿದೆ. ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಸಾರಿಗೆ ಸಂಸ್ಥೆ ಜಾರಿ ಮಾಡಿದೆ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ಖುದ್ದು ವಾದ ಮಂಡಿಸಿದ್ದ ಅರ್ಜಿದಾರ ಶ್ರೇಯಸ್ ಅವರು “ಪ್ರಾರಂಭಿಕ ಹಂತದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಮತ್ತು ಮೆಟ್ರೊ ರೈಲಿನಲ್ಲಿ ಧ್ವನಿಯ ಮೂಲಕ ವಿವರಣೆ ನೀಡಲಾಗುತ್ತಿತ್ತು. ಇದರಿಂದ ದೃಷ್ಟಿ ದೋಷವುಳ್ಳವರಿಗೆ ಇಳಿಯುವ ಸ್ಥಳ ಮತ್ತು ಬಸ್ ನಿಲ್ದಾಣಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತಿತ್ತು. ಆದರೆ, ಕೆಲ ದಿನಗಳ ಹಿಂದೆ ಈ ವ್ಯವಸ್ಥೆಯನ್ನು ಹಠಾತ್ ಸ್ಥಗಿತಗೊಳಿಸಲಾಗಿತ್ತು. ಇದರಿಂದ ದೃಷ್ಟಿದೋಷವುಳ್ಳವರಿಗೆ ತೀವ್ರ ಸಮಸ್ಯೆಯಾಗಿದೆ," ಎಂದು ಹೇಳಿದ್ದರು.

ಮುಂದುವರೆದು, "ಸಾರಿಗೆ ಬಸ್‌ಗಳಲ್ಲಿ ಧ್ವನಿ ಮುದ್ರಿಕೆ ಮೂಲಕ ಮಾಹಿತಿ ನೀಡಬೇಕು. ಇದರಿಂದ ಜನದಟ್ಟಣೆ ಸಂದರ್ಭದಲ್ಲಿ ಈ ವರ್ಗದ ಜನರಿಗೆ ಅನುಕೂಲವಾಗಲಿದೆ. ಸಾಮಾನ್ಯ ಸಂದರ್ಭಗಳಲ್ಲಿ ಬಸ್ ನಿರ್ವಾಹಕರು ಅಂಗವಿಕಲರಿಗೆ ನೆರವಾಗುತ್ತಾರೆ. ಆದರೆ, ಜನ ದಟ್ಟಣೆ ಸಂದರ್ಭದಲ್ಲಿ ದೃಷ್ಟಿದೋಷವುಳ್ಳವರ ಕುರಿತು ಗಮನ ಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ಅಂಗವಿಕಲರು ಮತ್ತು ದೃಷ್ಟಿ ದೋಷವುಳ್ಳವರು ಹೋಗಬೇಕಾದ ಸ್ಥಳ ತಲುಪುವುದಕ್ಕೆ ಕಷ್ಟಸಾಧ್ಯವಾಗಿದೆ” ಎಂದು ವಿವರಿಸಿದ್ದರು.

ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿನ ಎಲ್ಲ ಪ್ರಮುಖ ಸಾರಿಗೆ ವಿಧಾನಗಳಾದ ಮೆಟ್ರೊ, ನಗರ ಸಾರಿಗೆ ಬಸ್‌ಗಳು ಮತ್ತು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಧ್ವನಿ ಮಾಹಿತಿ ಸೌಲಭ್ಯ ಒದಗಿಸಲಾಗಿದೆ. ಓಲಾ, ಉಬರ್‌ನಂತಹ ಖಾಸಗಿ ಸೇವೆಗಳಲ್ಲಿಯೂ ಗೂಗಲ್ ನಕ್ಷೆಗಳ ಸೌಲಭ್ಯ ಪ್ರಯಾಣಿಕರು ಮತ್ತು ವಾಹನ ಚಾಲಕರಿಗೆ ಲಭ್ಯವಿರಲಿದೆ. ಈ ರೀತಿಯಲ್ಲಿ ಸೇವೆಯಲ್ಲಿ ಪ್ರಯಾಣಿಸುವವರು ಅಗತ್ಯ ಮಾಹಿತಿ ಪಡೆದು ಚಾಲಕರಿಗೆ ವಿವರಿಸಲಿದ್ದು, ಅಂಗವಿಕಲರು ಮತ್ತು ದೃಷ್ಟಿದೋಷವುಳ್ಳವರ ಸುಗಮ ಸಂಚಾರ ವ್ಯವಸ್ಥೆಗೆ ನೆರವಾಗಲಿದೆ” ಎಂದು ತಿಳಿಸಿದ್ದರು.

Kannada Bar & Bench
kannada.barandbench.com