ಸಾರ್ವಜನಿಕ ಶೌಚಾಲಯ ಅಸಮರ್ಪಕ ನಿರ್ವಹಣೆ: ಸರ್ಕಾರ ಕಣ್ಣು, ಬಾಯಿ ಮುಚ್ಚಿ ಕುಳಿತುಕೊಳ್ಳಲಾಗದು ಎಂದ ಹೈಕೋರ್ಟ್‌

ಶೌಚಾಲಯ ನಿರ್ವಹಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳೇನು? ಒಂದೊಮ್ಮೆ ಕ್ರಮಗಳು ರೂಪಿಸಿದ್ದರೆ ಅದನ್ನು ಜಾರಿಗೊಳಿಸಲು ನಿಗದಿಪಡಿಸಿರುವ ಕಾಲಮಿತಿ ಏನು?  ಶೌಚಾಲಯಗಳ ನಿರ್ವಹಣೆಗೆ ಬಿಬಿಎಂಪಿ ಬಳಿಯಿರುವ ಸಲಹೆಗಳೇನು ಎಂದು ಪ್ರಶ್ನಿಸಿದ ಪೀಠ.
BBMP and Karnataka HC
BBMP and Karnataka HC
Published on

ಬೆಂಗಳೂರಿನಲ್ಲಿ ಸಮುದಾಯ ಶೌಚಾಲಯಗಳು ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಕ್ಕೆ ಅನುಸಾರಿಸಬೇಕಾದ ಕ್ರಮಗಳ ಕುರಿತಂತೆ ಹೊಸದಾಗಿ ಮೂರು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ಮಂಗಳವಾರ ನಿರ್ದೇಶಿಸಿದೆ.

ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ಅಸಮರ್ಪಕ ನಿರ್ವಹಣೆ ಕುರಿತಂತೆ ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸಾರ್ವಜನಿಕ ಶೌಚಾಲಯ ಸಮರ್ಪಕ ನಿರ್ವಹಣೆ, ನೈರ್ಮಲ್ಯ ಕಾಯ್ದುಕೊಳ್ಳದ ಮತ್ತು ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸದ ಬಿಬಿಎಂಪಿ ನಡೆಗೆ ಹಾಗೂ ಅರ್ಜಿ ದಾಖಲಾಗಿ ಹಲವು ವರ್ಷ ಕಳೆದರೂ ಈವರೆಗೂ ಯಾವುದೇ ಉತ್ತರ ಸಲ್ಲಿಸದ ರಾಜ್ಯ ಸರ್ಕಾರದ ಧೋರಣೆಯ ಬಗ್ಗೆ ಹೈಕೋರ್ಟ್ ಇದೇ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡಿತು.

ಪ್ರಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹಿತಾಸಕ್ತಿಯಿದೆ. ಬೆಂಗಳೂರು ನಿವಾಸಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಹತ್ವವನ್ನು ಪ್ರಕರಣ ಹೊಂದಿದ್ದು, ೨೦೧೮ರಿಂದ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಈ ವಿಚಾರವಾಗಿ ಒಂದೇ ಒಂದು ಅಫಿಡವಿಟ್‌ ಸಲ್ಲಿಸಿ ತನ್ನ ಪ್ರತಿಕ್ರಿಯೆ ನೀಡಿಲ್ಲ. ರಾಜ್ಯ ಸರ್ಕಾರ ಕಣ್ಣು ಮತ್ತು ಬಾಯಿ ಮುಚ್ಚಿ ಕುಳಿತುಕೊಳ್ಳಬಾರದು. ಸರ್ಕಾರ ಮೌನವಹಿಸುವುದು ನ್ಯಾಯಾಲಯಕ್ಕೆ ಅಚ್ಚರಿ ಮೂಡಿಸಿದೆ. ಜನರಿಗೆ ನೈರ್ಮಲ್ಯದ ಶೌಚಾಲಯ ಒದಗಿಸುವುದು ಸರ್ಕಾರದ ಕರ್ತವ್ಯ. ಆ ಕರ್ತವ್ಯದಿಂದ ಸರ್ಕಾರ ಹಿಂದೆ ಸರಿಯಬಾರದು. ಹೀಗಾಗಿ, ಅರ್ಜಿ ಸಂಬಂಧ ರಾಜ್ಯ ಸರ್ಕಾರ ಸಹ ಮೂರು ವಾರಗಳಲ್ಲಿ ತನ್ನ ಉತ್ತರವನ್ನು ಒಳಗೊಂಡ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ಪೀಠವು ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ, ನಗರದಲ್ಲಿನ ಶೌಚಾಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ವಸ್ತುಸ್ಥಿತಿ ವರದಿ ಮತ್ತು ಕ್ರಿಯಾ ವರದಿ ಸಲ್ಲಿಸಿತು. ವರದಿಯಲ್ಲಿ ಅನೇಕ ನೂನ್ಯತೆಗಳನ್ನು ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಪೀಠವು ವರದಿಯಲ್ಲಿನ ಲೋಪಗಳನ್ನು ಪತ್ತೆ ಹಚ್ಚಿ ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿತು.

ಸಾರ್ವಜನಿಕ ಶೌಚಾಲಯದ ಸಮರ್ಪಕ ನಿರ್ವಹಣೆಯಲ್ಲಿ ಆಗಿರುವ ಕೆಲಸಗಳಿಗಿಂತ ಆಗಬೇಕಾಗಿರುವ ಕೆಲಸಗಳ ಬಗ್ಗೆ ವರದಿ ತಿಳಿಸುತ್ತದೆ. ಈ ವಿಚಾರವನ್ನು ಬಿಬಿಎಂಪಿ ಒಪ್ಪಿಕೊಂಡಿದೆ. ಶೌಚಾಲಯಗಳ ನಿರ್ವಹಣೆ ಅಸಮರ್ಪಕವಾಗಿದೆ. ಅಲ್ಲಿ ನೈರ್ಮಲ್ಯ ಕಾಯ್ದುಕೊಂಡಿಲ್ಲ. ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ವಿಕಲಚೇತನರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಲ್ಲ. ಕೆಲ ಮಹಿಳಾ ಶೌಚಾಲಯಗಳಲ್ಲಿ ಕಿಟಕಿಯೇ ಕಿತ್ತುಹೋಗಿದೆ ಎಂದು ಚಾಟಿ ಬೀಸಿದ ಪೀಠವು ಬಿಬಿಎಂಪಿಯ ವರದಿಗಳನ್ನು ತಿರಸ್ಕರಿಸಿತು.

ಅಲ್ಲದೆ, ಶೌಚಾಲಯ ನಿರ್ವಹಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳೇನು? ಒಂದೊಮ್ಮೆ ಕ್ರಮಗಳು ರೂಪಿಸಿದ್ದರೆ ಅದನ್ನು ಜಾರಿಗೊಳಿಸಲು ನಿಗದಿಪಡಿಸಿರುವ ಕಾಲಮಿತಿ ಏನು? ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಬಿಬಿಎಂಪಿ ಬಳಿಯಿರುವ ಸಲಹೆಗಳೇನು? ಎಂಬ ಬಗ್ಗೆ ಮೂರು ವಾರಗಳಲ್ಲಿ ಹೊಸದಾಗಿ ವಿವರವಾದ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com