ಕೃತಕ ಬುದ್ಧಿಮತ್ತೆ ಬಳಸಿ ತೀರ್ಪು ನೀಡುವಂತಿಲ್ಲ: ದೇಶದಲ್ಲಿಯೇ ಮೊದಲ ಮಾರ್ಗಸೂಚಿ ಪ್ರಕಟಿಸಿದ ಕೇರಳ ಹೈಕೋರ್ಟ್

ಎಂಥದ್ದೇ ಸಂದರ್ಭದಲ್ಲಿಯೂ ನಿರ್ಧಾರ ತೆಗೆದುಕೊಳ್ಳಲು ಅಥವಾ ಕಾನೂನು ತಾರ್ಕಿಕತೆಗೆ ಪರ್ಯಾಯವಾಗಿ ಎಐ ಪರಿಕರ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ನೀತಿಯ ಗುರಿಯಾಗಿದೆ.
ಕೃತಕ ಬುದ್ಧಿಮತ್ತೆ ಬಳಸಿ ತೀರ್ಪು ನೀಡುವಂತಿಲ್ಲ: ದೇಶದಲ್ಲಿಯೇ ಮೊದಲ ಮಾರ್ಗಸೂಚಿ ಪ್ರಕಟಿಸಿದ ಕೇರಳ ಹೈಕೋರ್ಟ್
Published on

ರಾಜ್ಯದ ಜಿಲ್ಲಾ ನ್ಯಾಯಾಂಗದ ಸದಸ್ಯರು ಮತ್ತು ಅವರಿಗೆ ಸಹಾಯ ಮಾಡುವ ನೌಕರರು ಕೃತಕ ಬುದ್ಧಿಮತ್ತೆ (ಎಐ) ಪರಿಕರಗಳನ್ನು ಹೇಗೆ ಬಳಸಬೇಕು ಎಂಬ ಕುರಿತು ಕೇರಳ ಹೈಕೋರ್ಟ್‌ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಮಾರ್ಗಸೂಚಿ ರೂಪಿಸಿದೆ.  

ಎಂಥದ್ದೇ ಸಂದರ್ಭದಲ್ಲಿಯೂ ನಿರ್ಧಾರ ತೆಗೆದುಕೊಳ್ಳಲು ಅಥವಾ ಕಾನೂನು ತಾರ್ಕಿಕತೆಗೆ ಪರ್ಯಾಯವಾಗಿ ಎಐ ಪರಿಕರ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ನೀತಿ ಹೇಳಿದೆ.

Also Read
ತೀರ್ಪುಗಳನ್ನು ಬರೆಯಲು ಕೃತಕ ಬುದ್ಧಿಮತ್ತೆ ಬಳಕೆ ಮಾಡುವುದು ಅಪಾಯಕಾರಿ: ನ್ಯಾ. ನಾಗಪ್ರಸನ್ನ

ಇದಲ್ಲದೆ, ಈ ನೀತಿ ಚಾಟ್ ಜಿಪಿಟಿ ಮತ್ತು ಡೀಪ್ ಸೀಕ್ ರೀತಿಯ ಪರಿಕರಗಳ ಬಳಕೆಯನ್ನು ಸಹ ನಿಷೇಧಿಸಿದ್ದು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಅನುಮೋದಿಸಿದ ಎಐ ಪರಿಕರಗಳನ್ನಷ್ಟೇ ಬಳಸಬೇಕು ಎಂದು ಮಾರ್ಗಸೂಚಿ ವಿವರಿಸಿದೆ.

ನ್ಯಾಯಾಂಗ ಕೆಲಸದಲ್ಲಿ ಎಐ ಪರಿಕರಗಳ ಜವಾಬ್ದಾರಿಯುತ ಬಳಕೆ, ಗೌಪ್ಯತೆಯ ಹಕ್ಕುಗಳ ರಕ್ಷಣೆ, ಭದ್ರತಾ ಅಪಾಯಗಳನ್ನು ಪರಿಹರಿಸುವುದು, ಕಾನೂನು ಮತ್ತು ನೈತಿಕ ಬಾಧ್ಯತೆಗಳ ಪಾಲನೆ ಮತ್ತು ಪ್ರತಿ ಹಂತದಲ್ಲೂ ಹೊಣೆಗಾರಿಕೆ ಖಚಿತಪಡಿಸಿಕೊಳ್ಳಲು ಈ ನೀತಿ ವಿನ್ಯಾಸಗೊಳಿಸಲಾಗಿದೆ.

ಜಿಲ್ಲಾ ನ್ಯಾಯಾಂಗದ ಸದಸ್ಯರು ಮತ್ತು ಸಿಬ್ಬಂದಿ  ತರಬೇತಿ ಕಾರ್ಯಾಗಾರಗಳಿಗೆ ಹಾಜರಾಗಬೇಕು ಮತ್ತು ಎಐ ಬಳಕೆಯ ಪ್ರತಿಯೊಂದು ನಿದರ್ಶನದ ಕಟ್ಟುನಿಟ್ಟಾದ ದಾಖಲೆಯನ್ನು ನಿರ್ವಹಿಸಬೇಕು ಎಂದು ನಿರ್ದೇಶಿಸಲಾಗಿದೆ.

ಅಧಿಕೃತ ಉದ್ದೇಶಗಳಿಗಾಗಿ ಬಳಸುವ ಯಾವುದೇ ಎ ಐ ಸಾಧನ ಪಾರದರ್ಶಕತೆ, ನ್ಯಾಯಸಮ್ಮತತೆ, ಹೊಣೆಗಾರಿಕೆ ಮತ್ತು ಗೌಪ್ಯತೆಯ ರಕ್ಷಣೆಗೆ ಬದ್ಧವಾಗಿರುವಂತೆ ನೋಡಿಕೊಳ್ಳುವುದು ನ್ಯಾಯಾಂಗ ಸದಸ್ಯರು ಮತ್ತು ನೌಕರರ ಹೊಣೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.  

ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಅನುಮೋದಿಸಿದ ಎಐ ಪರಿಕರಗಳನ್ನು ಹೊರತುಪಡಿಸಿ ಚಾಟ್ ಜಿಪಿಟಿ ಮತ್ತು ಡೀಪ್ ಸೀಕ್ ರೀತಿಯ ಪರಿಕರಗಳ ಬಳಕೆತಪ್ಪಿಸಬೇಕು ಎಂದು ಅದು ಹೇಳಿದೆ.

ಅನುಮೋದಿತ ಎಐ ಪರಿಕರಗಳ ಬಳಕೆಯ ವಿಚಾರದಲ್ಲಿ ದೋಷಗಳನ್ನು ತಪ್ಪಿಸಲು ತೀವ್ರ ಎಚ್ಚರಿಕೆ ಅಗತ್ಯ ಎಂದಿರುವ ಅದು ಕಾನೂನಿಗೆ ಸಂಬಂಧಿಸಿದ ಎಲ್ಲಾ ಉಲ್ಲೇಖಗಳನ್ನು ನ್ಯಾಯಾಂಗ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಫಲಿತಾಂಶಗಳನ್ನು ರಚಿಸಲು, ಸಂಕ್ಷೇಪಿಸಲು ಅಥವಾ ಸೂಕ್ಷ್ಮವಾಗಿ ಟ್ಯೂನ್ ಮಾಡಲು ಎಐ ಪರಿಕರಗಳನ್ನು ಬಳಸುವ ಕೇಸ್-ಲಾಗಳು ಮತ್ತು ಶಾಸನಗಳ ಡೇಟಾಬೇಸ್‌ಗಳು ಸೇರಿದಂತೆ ಎಲ್ಲಾ ಅನುಮೋದಿತ ಎಐ ಪರಿಕರಗಳಿಗೆ ಇದು ಅನ್ವಯಿಸುತ್ತದ ಎಂದು ಅದು ವಿವರಿಸಿದೆ. 

ಕಾನೂನು ಪಠ್ಯಗಳು ಅಥವಾ ಕೇಸ್‌ ಲಾಗಳನ್ನು ಭಾಷಾಂತರಿಸುವುದಕ್ಕಾಗಿ ಎಐ ಪರಿಕರಗಳನ್ನು ಬಳಸಿದಾಗ, ಅನುವಾದಿತ ಪಠಧಯವನ್ನು ಅರ್ಹ ಅನುವಾದಕರು ಅಥವಾ ನ್ಯಾಯಾಧೀಶರು ಖುದ್ದು ಪರಿಶೀಲಿಸಬೇಕು ಎಂದು ಮಾರ್ಗಸೂಚಿ ಹೇಳುತ್ತದೆ.

ಅನುಮೋದಿತ ಎಐ ಪರಿಕರಗಳನ್ನು ಪ್ರಕರಣಗಳ ಪಟ್ಟಿ ಅಥವಾ ನ್ಯಾಯಾಲಯ ನಿರ್ವಹಣೆಯಂತಹ ದಿನನಿತ್ಯದ ಆಡಳಿತಾತ್ಮಕ ಕಾರ್ಯಗಳಿಗೆ ಬಳಸಬಹುದಾದರೂ, ಅಂತಹ ಪರಿಕರಗಳನ್ನು ಬಳಸುವಾಗ ಎಲ್ಲಾ ಸಮಯದಲ್ಲೂ ಮಾನವ ಮೇಲ್ವಿಚಾರಣೆಯ ಅಗತ್ಯವಿರುತ್ತದೆ ಎಂದು ಅದು ತಿಳಿಸಿದೆ.

ನ್ಯಾಯಾಂಗ ಆದೇಶ, ತೀರ್ಪು ಅಥವಾ ಅದರ ಯಾವುದೇ ಭಾಗದ ವಿಷಯ ಮತ್ತು ಸಮಗ್ರತೆಯ ಜವಾಬ್ದಾರಿ ನ್ಯಾಯಾಧೀಶರಿಗೆ ಸೇರಿರುವುದರಿಂದ, ಯಾವುದೇ ಸಂದರ್ಭಗಳಲ್ಲಿ ಯಾವುದೇ ತೀರ್ಪು, ಪರಿಹಾರ, ಆದೇಶ ಅಥವಾ ತೀರ್ಪನ್ನು ತಲುಪಲು ಯಾವುದೇ ಸಾಧನ ಬಳಸಬಾರದು ಎಂದು ತಿಳಿಸಲಾಗಿದೆ.

ಅನುಮೋದಿತ ಎಐ ಉಪಕರಣಗಳನ್ನು ಅವುಗಳನ್ನು ಯಾವ ಉದ್ದೇಶಗಳಿಗಾಗಿ ಪೂರೈಸಲಾಗಿದೆಯೋ ಅಥವಾ ಒದಗಿಸಲಾಗಿದೆಯೋ ಅವುಗಳಿಗೆ ಮಾತ್ರ ಬಳಸಬೇಕು ಎಂದು ವಿವರಿಸಲಾಗಿದೆ.

ನ್ಯಾಯಾಲಯಗಳು ಎಐ ಉಪಕರಣಗಳನ್ನು ಬಳಸುವ ಎಲ್ಲಾ ಸಂದರ್ಭಗಳ ವಿವರವಾದ ಪರಿಶೀಲನೆಯ ಮಾಹಿತಿಯನ್ನು ನಿರ್ವಹಿಸಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳು ಬಳಸಿದ ಪರಿಕರಗಳು ಮತ್ತು ಅಳವಡಿಸಿಕೊಂಡ ಮಾನವ ಪರಿಶೀಲನಾ ಪ್ರಕ್ರಿಯೆಯನ್ನು ಒಳಗೊಂಡಿರಬೇಕು ಎಂದು ಮಾರ್ಗಸೂಚಿ ಸ್ಪಷ್ಟಪಡಿಸಿದೆ.

ಈ ಸಂಬಂಧ ನ್ಯಾಯಾಂಗ ಅಕಾಡೆಮಿ ಅಥವಾ ಹೈಕೋರ್ಟ್ ಆಯೋಜಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ನ್ಯಾಯಾಂಗದ ಸದಸ್ಯರು ಮತ್ತು ಅವರಿಗೆ ಸಹಾಯ ಮಾಡುವ ನೌಕರರು ಭಾಗವಹಿಸಬೇಕು ಎಂದು ಅದು ಹೇಳಿದೆ.

Also Read
ಜಾಮೀನು ಪ್ರಕರಣ ನಿರ್ಧರಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆ 'ಚಾಟ್‌ ಜಿಪಿಟಿ' ತಂತ್ರಜ್ಞಾನ ಬಳಸಿದ ಪಂಜಾಬ್‌ ಹೈಕೋರ್ಟ್‌

ಅನುಮೋದಿತ ಎಐ ಪರಿಕರಗಳಿಂದ ದೊರೆಯುವ ಮಾಹಿತಿಯಲ್ಲಿ ಯಾವುದೇ ದೋಷ ಅಥವಾ ಇತರ ಸಮಸ್ಯೆಗಳು ಕಂಡುಬಂದರೆ, ಅದನ್ನು ತಕ್ಷಣವೇ ಪ್ರಧಾನ ಜಿಲ್ಲಾ ನ್ಯಾಯಾಲಯಕ್ಕೆ ವರದಿ ಮಾಡಬೇಕು ಮತ್ತು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅದನ್ನು ಹೈಕೋರ್ಟ್‌ನ ಐಟಿ ಇಲಾಖೆಗೆ ವಿಳಂಬವಿಲ್ಲದೆ ಕಳುಹಿಸಬೇಕು. ಇದರಿಂದ ಐಟಿ ತಂಡ ಸೂಕ್ತ ಸುರಕ್ಷತಾ ವಿಶ್ಲೇಷಣೆಗಳನ್ನು ಕೂಡಲೇ ನಡೆಸಬಹುದು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

 ಈ ನೀತಿಯು ಕೇರಳದ ಜಿಲ್ಲಾ ನ್ಯಾಯಾಂಗದಲ್ಲಿ ಕೆಲಸ ಮಾಡುವ ಎಲ್ಲಾ ಇಂಟರ್ನ್‌ಗಳು ಅಥವಾ ಕಾನೂನು ಗುಮಾಸ್ತರಿಗೂ ಅನ್ವಯವಾಗಲಿದೆ.

Kannada Bar & Bench
kannada.barandbench.com