ಎಂಟೂವರೆ ತಿಂಗಳ ಗರ್ಭಿಣಿ ವಕೀಲೆಗೆ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆ ಬರೆಯಲು ಹೈಕೋರ್ಟ್‌ನಿಂದ ವಿಶೇಷ ವ್ಯವಸ್ಥೆ

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ನವೆಂಬರ್‌ 18 ಮತ್ತು 19ರಂದು ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲು ವಕೀಲೆ ನೇತ್ರಾವರಿಗೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಅನುಮತಿಸಿದ್ದಾರೆ.
Karnataka High Court
Karnataka High Court

ಎಂಟೂವರೆ ತಿಂಗಳ ಗರ್ಭಿಣಿ ವಕೀಲೆಯೊಬ್ಬರಿಗೆ ಸಿವಿಲ್‌ ನ್ಯಾಯಾಧೀಶರ ನೇರ ನೇಮಕಾತಿ ಮುಖ್ಯ ಪರೀಕ್ಷೆ ಬರೆಯಲು ವಿಶೇಷ ವ್ಯವಸ್ಥೆ ಮಾಡುವ ಮೂಲಕ ಕರ್ನಾಟಕ ಹೈಕೋರ್ಟ್‌ ಅಪರೂಪವೂ ಹಾಗೂ ಪ್ರಶಂಸನೀಯವೂ ಆದ ನಿರ್ಧಾರ ಕೈಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ನವೆಂಬರ್‌ 18 ಮತ್ತು 19ರಂದು ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲು ವಕೀಲೆ ನೇತ್ರಾವರಿಗೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಅನುಮತಿಸಿದ್ದಾರೆ.

ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ನೇತ್ರಾವತಿ ಅವರು ಎಂಟೂವರೆ ತಿಂಗಳು ಗರ್ಭಿಣಿಯಾಗಿರುವುದರಿಂದ ಅವರ ಆರೋಗ್ಯ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಪ್ರವಾಸ ಮಾಡಲಾಗದು. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅನುಮತಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌, ಕೆ ಸೋಮಶೇಖರ್‌, ಎಸ್‌ ಸುನಿಲ್‌ ದತ್‌ ಯಾದವ್‌, ಅಶೋಕ್‌ ಎಸ್‌. ಕಿಣಗಿ ಮತ್ತು ಎಂ ನಾಗಪ್ರಸನ್ನ ಅವರನ್ನು ಒಳಗೊಂಡ ಸಿವಿಲ್‌ ನ್ಯಾಯಾಧೀಶರ ನೇಮಕಾತಿ ಸಮಿತಿಯು ನೇತ್ರಾವತಿ ಅವರ ಕೋರಿಕೆಗೆ ಒಪ್ಪಿಗೆ ಸೂಚಿಸಿದ್ದು, ಮುಖ್ಯ ನ್ಯಾಯಮೂರ್ತಿಗಳೂ ಮುದ್ರೆ ಹಾಕಿದ್ದಾರೆ.

ನೇತ್ರಾವತಿ ಅವರು ಪರೀಕ್ಷೆ ಬರೆಯಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ಪರೀಕ್ಷಾ ಕೇಂದ್ರಕ್ಕೆ ನ್ಯಾಯಾಂಗ ಅಧಿಕಾರಿಯನ್ನು ವೀಕ್ಷಕರನ್ನಾಗಿ ವಿಶೇಷವಾಗಿ ನಿಯೋಜಿಸಲಾಗಿದೆ. ದಕ್ಷಿಣ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮೇಲ್ವಿಚಾರಣೆ ನಡೆಸಲಿದ್ದು, ತುರ್ತು ಸಂದರ್ಭ ಉದ್ಭವಿಸಿದರೆ ವೈದ್ಯಕೀಯ ವ್ಯವಸ್ಥೆ ಮಾಡುವಂತೆ ಅವರಿಗೆ ನಿರ್ದೇಶಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ 2023ರ ಮಾರ್ಚ್‌ 9ರಂದು 57 ಸಿವಿಲ್‌ ನ್ಯಾಯಾಧೀಶರ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಜುಲೈ 23ರಂದು ಪ್ರಾಥಮಿಕ ಪರೀಕ್ಷೆ ನಡೆಸಲಾಗಿದ್ದು, 6 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1,022 ಮಂದಿ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

Related Stories

No stories found.
Kannada Bar & Bench
kannada.barandbench.com