ಬಿಹಾರದಲ್ಲಿ ನೆರೆಹೊರೆಯವರಿಗೆ ಜಾತಿ ತಿಳಿದಿರುತ್ತದೆ: ರಾಜ್ಯ ಜಾತಿ ಸಮೀಕ್ಷೆ ವಿಚಾರಣೆ ವೇಳೆ ಸುಪ್ರೀಂ ಪ್ರತಿಕ್ರಿಯೆ

"ನಿಮ್ಮ ಜಾತಿ ನಿಮ್ಮ ನೆರೆಹೊರೆಯವರಿಗೆ ತಿಳಿದಿದೆ. ದುರದೃಷ್ಟವಶಾತ್ ಬಿಹಾರದಲ್ಲಿ, ಇದು ವಾಸ್ತವ ಸಂಗತಿಯಾಗಿದೆ. ದೆಹಲಿಯಲ್ಲಿ, ನಮಗೆ ಅದು ತಿಳಿದಿಲ್ಲ," ಎಂದು ನ್ಯಾ. ಸಂಜೀವ್ ಖನ್ನಾ ಹೇಳಿದರು.
Supreme Court, Bihar caste survey
Supreme Court, Bihar caste survey

ಬಿಹಾರದಲ್ಲಿ ಜಾತಿ ವ್ಯವಸ್ಥೆಯು ಸಾಂಸ್ಥೀಕರಣಗೊಂಡು ಆಳವಾಗಿ ಬೇರು ಬಿಟ್ಟಿದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ನಡೆದ ರಾಜ್ಯ ಜಾತಿ ಸಮೀಕ್ಷೆಯನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿತು [ಯೂತ್‌ ಫಾರ್‌ ಈಕ್ವಾಲಿಟಿ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣ] .

ಬಿಹಾರದಲ್ಲಿ, ಬಹುತೇಕ ಜನರಿಗೆ ತಮ್ಮ ಸುತ್ತಲಿನ ವ್ಯಕ್ತಿಗಳ ಜಾತಿಯ ಬಗ್ಗೆ ತಿಳಿದಿರುತ್ತದೆ. ದೆಹಲಿಯಂತಹ ಮಹಾನಗರದಲ್ಲಿ ಹಾಗಿಲ್ಲದೇ ಇರಬಹುದು ಎಂದು ನ್ಯಾಯಾಲಯ ನುಡಿಯಿತು.

"ನಿಮ್ಮ ಜಾತಿ ನಿಮ್ಮ ನೆರೆಹೊರೆಯವರಿಗೆ ತಿಳಿದಿದೆ. ದುರದೃಷ್ಟವಶಾತ್ ಬಿಹಾರದಲ್ಲಿ, ಇದು ವಾಸ್ತವ ಸಂಗತಿಯಾಗಿದೆ. ದೆಹಲಿಯಲ್ಲಿ, ನಮಗೆ ಅದು ತಿಳಿದಿಲ್ಲ," ಎಂದು ನ್ಯಾ. ಸಂಜೀವ್ ಖನ್ನಾ ಹೇಳಿದರು.

ಬಿಹಾರದಲ್ಲಿ ರಾಜ್ಯ ಸರ್ಕಾರ ನಡೆಸಲಿರುವ ಜಾತಿ ಸಮೀಕ್ಷೆ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಿದೆಯೇ ಎಂಬ ಪ್ರಶ್ನೆಯ ಕುರಿತಾಗಿ ವ್ಯವಹರಿಸುವಾಗ ನ್ಯಾಯಮೂರ್ತಿ ಎಸ್‌ ವಿ ಭಟ್ಟಿ ಅವರನ್ನೂ ಒಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸಾರ್ವಜನಿಕರಿಗೆ ಸಮೀಕ್ಷೆಯ ಸಂಚಿತ ಅಂಕಿ ಅಂಶಗಳನ್ನು ಮಾತ್ರವೇ ನಿರ್ದಿಷ್ಟವಾಗಿ ಬಿಡುಗಡೆ ಮಾಡಲಾಗುತ್ತದೆ, ಜಾತಿಯ ವೈಯಕ್ತಿಕ ವಿವರಗಳನ್ನಲ್ಲ ಎಂಬ ಅಂಶವನ್ನು ಪೀಠವು ಗಮನಿಸಿತು.

ಸಮೀಕ್ಷೆಯನ್ನು ಪ್ರಶ್ನಿಸಿದ್ದ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್ ʼಅಂತಹ (ಜಾತಿಯ) ವಿವರ ಬಹಿರಂಗಪಡಿಸುವಂತೆ ಜನರನ್ನು ಒತ್ತಾಯಿಸುವಂತಿಲ್ಲʼ ಎಂದರು.

ವ್ಯಕ್ತಿಗಳಿಗೆ ಖಾಸಗಿತನದ ಮೂಲಭೂತ ಹಕ್ಕು ಇದೆ ಎಂಬ ಪುಟ್ಟಸ್ವಾಮಿ ಪ್ರಕರಣದ ತೀರ್ಪನ್ನು ಆಧರಿಸಿ ವಾದಿಸಿದ ವೈದ್ಯನಾಥನ್‌ ಅವರು ನ್ಯಾಯಸಮ್ಮತ ಮತ್ತು ಕಾನೂನುಬದ್ಧ ಉದ್ದೇಶ ಇರಿಸಿಕೊಂಡು ಶಾಸನಬದ್ಧ ಕಾನೂನಿನ ಮೂಲಕವಷ್ಟೇ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸಬಹುದು ಎಂದು ಪ್ರತಿಪಾದಿಸಿದರು.

ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಬಿಹಾರ ಜಾತಿ ಸಮೀಕ್ಷೆಯನ್ನು ಎತ್ತಿಹಿಡಿದು ಕಳೆದ ಆಗಸ್ಟ್ 1ರಂದು ಪಾಟ್ನಾ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.  

ಜಾತಿ ಸಮೀಕ್ಷೆಯ ಫಲಿತಾಂಶಗಳ ಪ್ರಕಟಣೆಯ ವಿರುದ್ಧ ಮೇಲ್ಮನವಿದಾರರು ಮೇಲುನೋಟಕ್ಕೆ ಪ್ರಕರಣವನ್ನು ನಿರೂಪಿಸದ ಹೊರತು ಅದರ ಪ್ರಕಟಣೆಗೆ ತಡೆ ನೀಡುವುದಿಲ್ಲ ಎಂದೂ ಸಹ ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.

ಪ್ರಕರಣದ ವಿಚಾರಣೆಯು ಆಗಸ್ಟ್ 21ರಂದು ಮುಂದುವರಿಯಲಿದ್ದು, ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಅವರು ಮೇಲ್ಮನವಿದಾರರ ಪರ ಅಂದು ವಾದ ಮಂಡಿಸುವ ನಿರೀಕ್ಷೆಯಿದೆ.

Related Stories

No stories found.
Kannada Bar & Bench
kannada.barandbench.com