ಸಲಿಂಗ ವಿವಾಹ ಕುರಿತು ಕಾಯಿದೆ ರೂಪಿಸುವುದು ಸರ್ಕಾರಕ್ಕೆ ಭವಿಷ್ಯದಲ್ಲಿ ಸಾಧ್ಯವಾಗಬಹುದು: ನ್ಯಾ. ಸಂಜಯ್ ಕಿಶನ್ ಕೌಲ್

ಇತಿಹಾಸವನ್ನು ಗಮನಿಸಿದರೆ ಸಲಿಂಗ ಕಾಮ ನಿರಪರಾಧಗೊಳಿಸಿದ ತೀರ್ಪು ಹೊರಬರಲು ಕೂಡ ಸಮಯ ಹಿಡಿದಿತ್ತು. ಖಾಸಗಿತನ ಕುರಿತಾದ ತೀರ್ಪಿನಲ್ಲಿ ಅದನ್ನು ಸರಿಪಡಿಸಲಾಯಿತು ಎಂದು ಅವರು ವಿವರಿಸಿದ್ದಾರೆ.
ನ್ಯಾ. ಸಂಜಯ್ ಕಿಶನ್ ಕೌಲ್
ನ್ಯಾ. ಸಂಜಯ್ ಕಿಶನ್ ಕೌಲ್

ಸರ್ಕಾರ ಸಲಿಂಗ ವಿವಾಹದ ಕುರಿತು ಕಾಯಿದೆ ರೂಪಿಸುವುದು ಭವಿಷ್ಯದಲ್ಲಿ ಸಾಧ್ಯವಾಗಬಹುದು ಎಂದು ಈಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಅಭಿಪ್ರಾಯಪಟ್ಟಿದ್ದಾರೆ.

ಸಲಿಂಗ ಜೋಡಿಯು ವಿವಾಹವಾಗುವ ಅಥವಾ ಸಿವಿಲ್‌ ಯೂನಿಯನ್‌ (ವಿವಾಹಕ್ಕೆ ಸರಿಸಮನಾದ ಕಾನೂನು ಮಾನ್ಯತೆ ಇರುವ ಸಂಬಂಧ) ಹೊಂದುವ ಕಾನೂನಾತ್ಮಕ ಹಕ್ಕಿನ ಕೋರಿಕೆಗೆ ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ಕಳೆದ ಅಕ್ಟೋಬರ್‌ನಲ್ಲಿ ನಿರಾಕರಿಸಿತ್ತು. ಈ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು ನ್ಯಾ. ಕೌಲ್‌.

Also Read
ಸಲಿಂಗ ವಿವಾಹ ಅಥವಾ ಸಿವಿಲ್ ಯೂನಿಯನ್‌ಗೆ ಸುಪ್ರೀಂ ನಕಾರ; ಅಲ್ಪಮತದ ತೀರ್ಪಿನಲ್ಲಿ ಸಿವಿಲ್‌ ಯೂನಿಯನ್‌ಗೆ ಸಿಜೆಐ ಸಹಮತ

ತಮ್ಮ ನಿವೃತ್ತಿಯ ಬಳಿಕ ಬಾರ್‌ ಅಂಡ್‌ ಬೆಂಚ್‌ನ ದೇಬಯಾನ್ ರಾಯ್ ಅವರಿಗೆ ನೀಡಿದ ಸಂದರ್ಶನದಲ್ಲಿ ನ್ಯಾ. ಕೌಲ್‌ ಸಲಿಂಗ ವಿವಾಹದ ಕುರಿತಾದ ಕಾಯಿದೆ ಭವಿಷ್ಯದಲ್ಲಿ ಜಾರಿಗೆ ಬರಬಹುದು ಎಂಬ ವಿಚಾರ ತಿಳಿಸಿದ್ದಾರೆ.

ಸಲಿಂಗ ವಿವಾಹದ ತೀರ್ಪಿನಲ್ಲಿ ನೀವು ಮತ್ತು ಬಹುಪಾಲು ನ್ಯಾಯಾಧೀಶರು ಪರಸ್ಪರರ ಅಂಶಗಳನ್ನು ಸಮನ್ವಯಗೊಳಿಸಲು ಯತ್ನಿಸಿದ್ದಿರೆ? ಸರ್ವಾನುಮತದ ತೀರ್ಪಿಗೆ ಯತ್ನ ನಡೆದಿತ್ತೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ʼಹೌದು ಒಂದು ಹಂತದವರೆಗೆ ಸಮನ್ವಯಗೊಳಿಸುವ ಯತ್ನ ನಡೆದಿತ್ತು. ಆದರೆ ಸಾಕಷ್ಟು ಅಭಿಪ್ರಾಯ ಭೇದಗಳಿರುತ್ತವೆ ಎಂದಿದ್ದಾರೆ.

“ಸಲಿಂಗ ಸಾಮಾಜಿಕ ಸಂಗತಿ. ಅದರ ಕುರಿತಾದ ಅಭಿಪ್ರಾಯ ಬದಲಾಗಲು ಸಮಯ ಹಿಡಿಯುತ್ತದೆ. ದೆಹಲಿ ಹೈಕೋರ್ಟ್‌ ನವತೇಜ್‌ ಜೋಹರ್‌ ಪ್ರಕರಣದಲ್ಲಿ ತೀರ್ಪು ನೀಡಿದಾಗ ನಾನು ಆ ಪೀಠದ ಭಾಗವಾಗಿದ್ದೆ. ನೀವು ಇತಿಹಾಸವನ್ನು ಗಮನಿಸಿದರೆ ಸಲಿಂಗ ಕಾಮ ನಿರಪರಾಧಗೊಳಿಸಿದ ತೀರ್ಪು ಹೊರಬರಲು ಕೂಡ ಸಮಯ ಹಿಡಿದಿತ್ತು. ಖಾಸಗಿತನ ಕುರಿತಾದ ತೀರ್ಪಿನಲ್ಲಿ ಅದನ್ನು ಸರಿಪಡಿಸಲಾಯಿತು ಎಂದು ಅವರು ವಿವರಿಸಿದ್ದಾರೆ.

Also Read
ಸಲಿಂಗ ವಿವಾಹ: ಸುಪ್ರೀಂ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಮುಕುಲ್‌ ರೋಹಟ್ಗಿ

ಈ ವಿಚಾರದಲ್ಲಿ ಕೆಲಸ ಮಾಡಬೇಕಾದ ಬೇರೆ ಬೇರೆ ವಿಭಾಗಗಳಿದ್ದು ವಿವಿಧ ಧಾರ್ಮಿಕ ಕಾನೂನುಗಳು ಸಮಾಜದ ವಿವಿಧ ವರ್ಗಗಳು ಸಲಿಂಗ ವಿವಾಹಕ್ಕೆ ಇನ್ನೂ ಸಿದ್ಧರಿರದಿದ್ದಾಗ ಕೊನೆಗೆ ನ್ಯಾಯಾಲಯ ವಿಶೇಷ ವಿವಾಹ ಕಾಯಿದೆ ಅದಕ್ಕೆ ಸೂಕ್ತವೇ ಎಂಬುದರತ್ತ ಚಿತ್ತ ಹರಿಸಿತ್ತು. ನಮ್ಮಲ್ಲಿ ಕೆಲವರು ಅದು ಸರಿಹೋಗುವುದಿಲ್ಲ ಎಂದರೆ ಕೆಲವರು ಸಿವಿಲ್‌ ಯೂನಿಯನ್‌ ಸೂಕ್ತ ಮಾರ್ಗವೆಂದು ಭಾವಿಸಿದ್ದರು. ಈಗಲ್ಲದಿದ್ದರೂ ಭವಿಷ್ಯದಲ್ಲಿ ಅದು ಸಂಭವಿಸಬಹುದು, ಕೆಲ ವರ್ಷಗಳಲ್ಲಿ ಅದು ಘಟಿಸಬಹುದು ಎಂಬುದು ಅವರ ಮಾತು.

ಬಾರ್‌ ಅಂಡ್‌ ಬೆಂಚ್‌ ಈ ಹಂತದಲ್ಲಿ ʼಒಂದು ದಶಕದ ಬಳಿಕ ಅಲ್ಪಮತದ ತೀರ್ಪು ಬಹುಮತದ ಅಭಿಪ್ರಾಯವಾಗುತ್ತದೆ ಎನಿಸುವುದೇ?ʼ ಎಂದು ಕೇಳಿದಾಗ, ನ್ಯಾ. ಕೌಲ್‌ “ಸಮಾಜ ಬದಲಾಗುತ್ತಿರುತ್ತದೆ ಎಂಬುದು ನನ್ನ ನಂಬಿಕೆ. ನನ್ನ ಮತ್ತು ಮುಂದಿನ ಪೀಳಿಗೆಯ ದೃಷ್ಟಿಕೋನದಲ್ಲಿ ಬಹಳ ವ್ಯತ್ಯಾಸವಿರುತ್ತವೆ. ಹಾಗಾಗಿ ಅವರು ನಿರ್ಧಾರ ತೆಗೆದುಕೊಳ್ಳುವವರಾದಾಗ ಪರಿಸ್ಥಿತಿ ಬದಲಾಗಿರುತ್ತದೆ ಎಂದು ನನಗೆ ಖಾತ್ರಿ ಇದೆ. ಕಳೆದು ಹೋದ ಇತಿಹಾಸವನ್ನು ನೆನೆದರೆ ಸ್ವಲ್ಪ ಸಮಯದ ನಂತರ ಕಾನೂನು ತನ್ನದೇ ಆದ ಹಾದಿ ಕಂಡುಕೊಳ್ಳುತ್ತದೆ. ಸರ್ಕಾರ ಸಲಿಂಗ ವಿವಾಹ ಕುರಿತು ಕಾಯಿದೆ ರೂಪಿಸಲು ಸಾಧ್ಯವಾಗಬಹುದು ಎಂದಿದ್ದಾರೆ.

ಮಕ್ಕಳನ್ನು ದತ್ತುಪಡೆಯುವ ಹಕ್ಕು, ಸಹಜೀವನ ಕುರಿತಂತೆ ಅನೇಕ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಇದು ಅಷ್ಟು ಸರಳವಾಗಿಲ್ಲ. ಆದ್ದರಿಂದ ಸಂಯೋಜಿತ ಕಾಯಿದೆ ಈ ಬಗ್ಗೆ ಕಾಳಜಿವಹಿಸುತ್ತದೆ ಎಂದು ಸರ್ಕಾರ ಭಾವಿಸಬಹುದು ಎಂದು ಅವರು ವಿವರಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com