
ಇಂದಿನ ಜಾಗತೀಕರಣಗೊಂಡ ಪ್ರಪಂಚದಲ್ಲಿ, ವಿವಿಧ ರಾಷ್ಟ್ರಗಳ ನ್ಯಾಯಾಂಗಗಳು ಹೆಚ್ಚೆಚ್ಚು ಪರಸ್ಪರ ಅಂತಃಸಂಬಂಧ ಹೊಂದುತ್ತಿವೆ. ಈ ಹಿನ್ನೆಲೆಯಲ್ಲಿ, ಅವು ಪರಸ್ಪರರ ಅನುಭವಗಳಿಂದ ಕಲಿಯುವುದು ಅತ್ಯಗತ್ಯವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಶುಕ್ರವಾರ ಅಭಿಪ್ರಾಯಪಟ್ಟರು.
ಕಠ್ಮಂಡುವಿನಲ್ಲಿ ನಡೆದ ʼನೇಪಾಳ-ಭಾರತ ನ್ಯಾಯಾಂಗ ಸಂವಾದ 2025ʼ ರಲ್ಲಿ ಸಿಜೆಐ ಗವಾಯಿ ಮಾತನಾಡಿದರು. ಈ ವಿಚಾರ ಸಂಕಿರಣವು ಎರಡು ನೆರೆಯ ರಾಷ್ಟ್ರಗಳ ಸುಪ್ರೀಂ ಕೋರ್ಟ್‌ಗಳ ನಡುವಿನ ಸಹಕಾರವನ್ನು ಬಲಪಡಿಸುವತ್ತ ಗಮನಹರಿಸಲಿದೆ.
ನೇಪಾಳದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಮಾನ್ ಸಿಂಗ್ ರಾವತ್ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ʼನೇಪಾಳಿ ಕಾನೂನು ಭ್ರಾತೃತ್ವ ಸಂಸ್ಥೆʼ ಸಂವಾದದಲ್ಲಿ ಭಾಗವಹಿಸಿತ್ತು.
ಆಧುನಿಕ ನ್ಯಾಯಾಂಗ ವ್ಯವಸ್ಥೆಗಳ ಬೆಳವಣಿಗೆ ಮತ್ತು ಪರಿಣಾಮಕಾರಿತ್ವಕ್ಕೆ ಜ್ಞಾನ ಮತ್ತು ವಿಚಾರಗಳ ವಿನಿಮಯವು ಈಗ ಅನಿವಾರ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. "ಇಂದಿನ ಜಾಗತೀಕರಣಗೊಂಡ ಪ್ರಪಂಚದಲ್ಲಿ, ನ್ಯಾಯಾಂಗಗಳು ಹೆಚ್ಚು ಪರಸ್ಪರ ಅಂತಃಸಂಬಂಧ ಹೊಂದಿವೆ. ಇದರಿಂದಾಗಿ ಅವು ಪರಸ್ಪರ ಅನುಭವಗಳಿಂದ ಕಲಿಯುವುದು ಅತ್ಯಗತ್ಯವಾಗಿದೆ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ. ಈ ಸಂದರ್ಭದಲ್ಲಿಯೇ ಇಂದಿನ ಚರ್ಚೆ ವಿಶೇಷ ಮಹತ್ವವನ್ನು ಪಡೆಯುತ್ತದೆ. ಆಧುನಿಕ ನ್ಯಾಯಾಂಗಗಳ ಬೆಳವಣಿಗೆ ಮತ್ತು ಪರಿಣಾಮಕಾರಿತ್ವಕ್ಕೆ ಜ್ಞಾನ ಮತ್ತು ಅನುಭವಗಳ ವಿನಿಮಯವು ಅಗತ್ಯವಾದ ಅಂಶವಾಗಿದೆ" ಎಂದು ಅವರು ಹೇಳಿದರು.
ನ್ಯಾಯಾಂಗವು ಇನ್ನು ಮುಂದೆ ಕೇವಲ ವಿವಾದಗಳ ತೀರ್ಪುಗಾರನಷ್ಟೇ ಆಗಿರುವುದಿಲ್ಲ, ಬದಲಾಗಿ ಸಾಂವಿಧಾನಿಕ ಆದರ್ಶಗಳ ರಕ್ಷಕ ಮತ್ತು ಪ್ರಜಾಪ್ರಭುತ್ವ ಸುಧಾರಣೆಗಳಿಗೆ ವೇಗವರ್ಧಕವಾಗಿರಲಿದೆ ಎಂಬುದನ್ನು ಸಿಜೆಐ ತಮ್ಮ ಭಾಷಣದಲ್ಲಿ ತಿಳಿಸಿದ.
"ಸಮಕಾಲೀನ ಸವಾಲುಗಳ ಬೆಳಕಿನಲ್ಲಿ ಕಾನೂನನ್ನು ವ್ಯಾಖ್ಯಾನಿಸುವ ಮೂಲಕ, ನ್ಯಾಯಾಲಯಗಳು ಆಡಳಿತದ ವಿಕಸನಕ್ಕೆ ಮಾರ್ಗದರ್ಶನ ನೀಡಬಹುದು, ಸಾರ್ವಜನಿಕ ನಂಬಿಕೆಯನ್ನು ಪ್ರೇರೇಪಿಸಬಹುದು. ಪ್ರಜಾಪ್ರಭುತ್ವವು ಕೇವಲ ಸಂಸ್ಥೆಗಳಿಂದಲ್ಲ, ಅವು ಸಾಕಾರಗೊಳಿಸುವ ಮತ್ತು ನಿರೂಪಿಸುವ ಮೌಲ್ಯಗಳಿಂದ ಮಾತ್ರ ಉಳಿಯುತ್ತದೆ ಎಂಬ ಕಲ್ಪನೆಯನ್ನು ಬಲಪಡಿಸಬಹುದು. ಈ ಅರ್ಥದಲ್ಲಿ, ನ್ಯಾಯಾಂಗವು ರಕ್ಷಕ ಮತ್ತು ವೇಗವರ್ಧಕ ಎರಡೂ ಆಗಿರುತ್ತದೆ," ಎಂದು ಅವರು ವಿವರಿಸಿದರು.
ಮುಂದುವರೆದು, "ನ್ಯಾಯಾಂಗವು ಸಮಾಜದ ಅಡಿಪಾಯದ ರಚನೆಗಳನ್ನು ರಕ್ಷಿಸುತ್ತದೆ ಮತ್ತು ರಾಷ್ಟ್ರದ ನೈತಿಕ ಮತ್ತು ನೀತಿತತ್ವಗಳನ್ನು ಬಲಪಡಿಸುವ ಸುಧಾರಣೆಯನ್ನು ಪ್ರೋತ್ಸಾಹಿಸುತ್ತದೆ" ಎಂದು ಅವರು ತಿಳಿಸಿದರು.
ನ್ಯಾಯಾಂಗದ ಪಾತ್ರವು ಕಟ್ಟುನಿಟ್ಟಾದ ಕಾನೂನು ವ್ಯಾಖ್ಯಾನವನ್ನು ಮೀರಿ ವಿಸ್ತರಿಸಿದೆ. ಈಗ ಕಾನೂನಿನ ಪಾತ್ರವು ವಿಶಾಲ ಉದ್ದೇಶಗಳು ಮತ್ತು ಪರಿಣಾಮಗಳೊಂದಿಗೆ ತೊಡಗಿಸಿಕೊಳ್ಳುವುದನ್ನು ಒಳಗೊಂಡಿದೆ - ಇದು ಅದರ ಅಸ್ಮಿತೆಯ ಕೇಂದ್ರವಸ್ತುವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.