
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ನಗದು ರಾಶಿ ಪತ್ತೆಯಾದ ಆರೋಪದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಚಿಸಿದ್ದ ತ್ರಿಸದಸ್ಯ ಆಂತರಿಕ ಸಮಿತಿ ಇಂದು (ಮಂಗಳವಾರ) ತನಿಖೆ ಆರಂಭಿಸಿತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರಿರುವ ಸಮಿತಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ನ್ಯಾಯಮೂರ್ತಿ ವರ್ಮಾ ಅವರ ನಿವಾಸಕ್ಕೆ ತೆರಳಿ ಸುಮಾರು 45 ನಿಮಿಷಗಳ ಕಾಲ ತನಿಖೆ ನಡೆಸಿತು.
ಮಾರ್ಚ್ 14 ರ ಸಂಜೆ ಅಗ್ನಿ ಅವಗಢಕ್ಕೆ ತುತ್ತಾದ ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದ್ದವು. ಘಟನೆ ನಡೆದಾಗ ನ್ಯಾಯಮೂರ್ತಿ ವರ್ಮಾ ಮತ್ತು ಅವರ ಪತ್ನಿ ದೆಹಲಿಯಲ್ಲಿ ಇರಲಿಲ್ಲ. ಅವರು ಮಧ್ಯಪ್ರದೇಶಕ್ಕೆ ಪ್ರಯಾಣ ಕೈಗೊಂಡಿದ್ದರು. ಅವರ ಮಗಳು ಮತ್ತು ವೃದ್ಧ ತಾಯಿ ಮಾತ್ರ ಮನೆಯಲ್ಲಿದ್ದರು.
ಘಟನೆಯಿಂದಾಗಿ ನ್ಯಾ. ವರ್ಮಾ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದವು. ಆದರೆ ಆರೋಪ ನಿರಾಕರಿಸಿರುವ ನ್ಯಾ. ವರ್ಮಾ ಇದು ತಮ್ಮನ್ನು ಹಣಿಯಲು ರೂಪಿಸಿದ ಪಿತೂರಿ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆರೋಪದ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದರು. ಮಾರ್ಚ್ 22 ರಂದು ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿ ರಚಿಸಿದ್ದರು.
ಸುಟ್ಟುಹೋದ ನಗದನ್ನು ವಶಪಡಿಸಿಕೊಂಡಿರುವ ವಿಡಿಯೋವನ್ನು ದೆಹಲಿ ಪೊಲೀಸ್ ಆಯುಕ್ತರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ನೀಡಿದ್ದರು. ಅದನ್ನು ಸುಪ್ರೀಂ ಕೋರ್ಟ್ ತನ್ನ ಜಾಲತಾಣದಲ್ಲಿ ಪ್ರಸಾರ ಮಾಡಿದೆ.
ಘಟನೆ ಕುರಿತಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವರದಿಯ ಜೊತೆಗೆ ನ್ಯಾಯಮೂರ್ತಿ ವರ್ಮಾ ಅವರ ಪ್ರತಿಕ್ರಿಯೆಯನ್ನೂ ಸುಪ್ರೀಂ ಕೋರ್ಟ್ ಪ್ರಕಟಿಸಿತ್ತು.