ನ್ಯಾ. ವರ್ಮಾ ಪ್ರಕರಣದ ತನಿಖೆ ನಡೆಸಿದ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ: ಉಪರಾಷ್ಟ್ರಪತಿ ಧನಕರ್

ವಿಚಾರಣಾ ಸಮಿತಿಗೆ ಯಾವುದೇ ಸಾಂವಿಧಾನಿಕ ಚೌಕಟ್ಟು ಅಥವಾ ಕಾನೂನು ಮಾನ್ಯತೆ ಇಲ್ಲ ಎಂದು ಧನಕರ್ ಹೇಳಿದರು.
Jagdeep Dhankhar, Vice President of India
Jagdeep Dhankhar, Vice President of India
Published on

ನ್ಯಾಯಮೂರ್ತಿ ಯಶವಂತ್ ವರ್ಮಾ ಭ್ರಷ್ಟಾಚಾರ ಪ್ರಕರಣದ ಕುರಿತು ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿ ನಡೆಸಿದ ತನಿಖೆಯನ್ನು ಭಾರತದ ಉಪರಾಷ್ಟ್ರಪತಿ ಹಾಗೂ ಹಿರಿಯ ವಕೀಲರೂ ಆದ ಜಗದೀಪ್ ಧನಕರ್‌ ಸೋಮವಾರ ಪ್ರಶ್ನಿಸಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಸಂಪಾದಿಸಿರುವ  ʼದ ಕಾನ್‌ಸ್ಟಿಟ್ಯೂಷನ್‌ ವಿ ಅಡಾಪ್ಟೆಡ್‌' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

Also Read
ಆಂತರಿಕ ಸಮಿತಿ ಆರೋಪ ಎತ್ತಿಹಿಡಿದ ನಂತರವೂ ರಾಜೀನಾಮೆ ನೀಡಲು ನಿರಾಕರಿಸಿದ ನ್ಯಾ. ವರ್ಮಾ

ವಿಚಾರಣಾ ಸಮಿತಿಗೆ ಯಾವುದೇ ಸಾಂವಿಧಾನಿಕ ವ್ಯಾಪ್ತಿಯಾಗಲಿ ಅಥವಾ ಕಾನೂನಿನ ಮಾನ್ಯತೆಯಾಗಲಿ ಇಲ್ಲ ಎಂದು ಧನಕರ್‌ ಹೇಳಿದರು.

ಧನಕರ್‌ ಅವರ ಭಾಷಣದ ಪ್ರಮುಖಾಂಶಗಳು

  • ಆಂತರಿಕ ವಿಚಾರಣಾ ಸಮಿತಿಯಲ್ಲಿದ್ದ ಎರಡು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಿಗೆ ಸಾಕಷ್ಟು ಶ್ರಮ ಉಂಟಾಯಿತು. ಅದರಲ್ಲಿ ಒಂದು ಹೈಕೋರ್ಟ್‌ನ ವ್ಯಾಪ್ತಿ ಎರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ್ದು.

  • ಸಮಿತಿಯ ನ್ಯಾಯಮೂರ್ತಿಗಳು ಯಾವುದೇ ಸಾಂವಿಧಾನಿಕ ಆಧಾರ ಅಥವಾ ಕಾನೂನು ಮಾನ್ಯತೆಯಾಗಲಿ ಇಲ್ಲದ ವಿಚಾರಣೆಯಲ್ಲಿ ಭಾಗಿಯಾದರು.

  • ಇದು ಅಪ್ರಸ್ತುತವಾಗಿತ್ತು. ನ್ಯಾಯಾಲಯದ ಆಡಳಿತಾತ್ಮಕ ವಿಭಾಗದಲ್ಲಿ ವಿಕಸಿತವಾಗಿರುವ ಕಾರ್ಯ ವಿಧಾನದ ಮೂಲಕ ತನಿಖಾ ವರದಿಯನ್ನು ಯಾರಿಗಾದರೂ ಕಳುಹಿಸಬಹುದಾಗಿದೆ.

  • ತನಿಖಾ ಸಮಿತಿ  ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಂಡಿದೆಯೇ ಎಂಬುದು ಜನರಿಗೆ ತಿಳಿದಿಲ್ಲ.

  • ನ್ಯಾ. ವರ್ಮಾ ನಿವಾಸಕ್ಕೆ ಹಣ ಬಂದಿದ್ದು ಹೇಗೆ, ಅದರ ಹಿಂದಿನ ಉದ್ದೇಶ ಏನು ಹಾಗೂ ಘಟನೆಯ ಹಿಂದಿರುವ ದೊಡ್ಡ ತಿಮಿಂಗಿಲಗಳ ಬಗ್ಗೆ ಅರಿಯಲು ದೇಶ ಕಾಯುತ್ತಿದೆ.

  • ಘಟನೆ ನಡೆದು ಒಂದು ವಾರ ಕಳೆದರೂ 140 ಕೋಟಿ ಜನರಿರುವ ದೇಶಕ್ಕೆ ಆ ಬಗ್ಗೆ ಹೆಚ್ಚಿನ ವಿಷಯ ತಿಳಿಯಲಿಲ್ಲ. ಇಂತಹ ಎಷ್ಟು ಘಟನೆಗಳು ನಡೆದಿರಬಹುದು ಎಂದು ಊಹಿಸಿ. ಅಂತಹ ಪ್ರತಿಯೊಂದು ಘಟನೆಯೂ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ.

  • ಪ್ರಕರಣದ ಆರಂಭಿಕ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ  ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರ ಕಾರ್ಯ ಶ್ಲಾಘನೀಯ. ಇದು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಸ್ವಲ್ಪಮಟ್ಟಿಗೆ ಮರುಸ್ಥಾಪಿಸಿತು.

  • ಆಂತರಿಕ ತನಿಖೆಗೆ ಕಾರ್ಯವಿಧಾನ ರೂಪಿಸಿದ, ನ್ಯಾಯಾಧೀಶರಿಗೆ ಅಭೇದ್ಯ ರಕ್ಷಣೆ ಮತ್ತು ವಿನಾಯಿತಿ ಒದಗಿಸಿದ, ನ್ಯಾ. ವರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕಾರ್ಯಾಂಗದ ಕೈಗಳನ್ನು ಕಟ್ಟಿಹಾಕಿದ 1991ರ ಕೆ ವೀರಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ.

  •  ಸಮಗ್ರ ಮತ್ತು ವೈಜ್ಞಾನಿಕ ತನಿಖೆ ಮಾತ್ರ ಇಂತಹ ವಿವಾದವನ್ನು ಕೊನೆಗಾಣಿಸಲು ಸಾಧ್ಯ.

Kannada Bar & Bench
kannada.barandbench.com