ಮದುವೆಯಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆಗೆ ಕ್ರಿಮಿನಾಶಕ ಮಾತ್ರೆ: ಅಪರಾಧಿ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್
ಅವಿವಾಹಿತೆಯನ್ನು ಗರ್ಭಿಣಿಯನ್ನಾಗಿಸಿ ಮದುವೆಯಾಗುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕ್ರಿಮಿನಾಶಕವಾಗಿ ಬಳಕೆ ಮಾಡುತ್ತಿದ್ದ ಮಾತ್ರೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿ ಸಾವನ್ನಪ್ಪುವಂತೆ ಮಾಡಿ ಆನಂತರ ಮೃತ ಸಂತ್ರಸ್ತೆ ಗರ್ಭಧರಿಸಲು ತಾನು ಕಾರಣನಲ್ಲ ಎಂದು ವಾದಿಸಿದ್ದ ಆರೋಪಿಯ ಶಿಕ್ಷೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಐದು ವರ್ಷಗಳ ಶಿಕ್ಷೆ ಮತ್ತು ದಂಡ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬಿದಲಪುರದ ಮುರಳಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಸಂತ್ರಸ್ತೆ ಸಾಯುವುದಕ್ಕೂ ಮುನ್ನ ನೀಡಿರುವ ಮರಣ ಪೂರ್ವ ಹೇಳಿಕೆಯಲ್ಲಿ ಅಪರಾಧಿಯ ಹೆಸರು ಉಲ್ಲೇಖಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿ ವಿಷದ ಮಾತ್ರೆಗಳನ್ನು ನೀಡಿದ್ದಾರೆ. ಅದರಲ್ಲಿ ಕೆಲವನ್ನು ಸೇವಿಸಿ ಮತ್ತೆ ಕೆಲವು ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆಯಂತೆ ಮಹಜರ್ ಮಾಡಿದ ಪೊಲೀಸರು ಮಾತ್ರೆಗಳನ್ನು ವಶಪಡಿಸಿಕೊಂಡಿರುವ ಅಂಶಗಳು ಅಪರಾಧಿಯ ವಿರುದ್ಧದ ಆರೋಪಕ್ಕೆ ಪುಷ್ಟಿ ನೀಡಿವೆ” ಎಂದು ವಿವರಿಸಲಾಗಿದೆ.
“ಮೃತರ ಹೊಟ್ಟೆಯಲ್ಲಿ ಆರೂವರೆ ತಿಂಗಳ ಭ್ರೂಣವಿರುವುದು ವೈದ್ಯಕೀಯ ವರದಿಯಲ್ಲಿ ಸಾಬೀತಾಗಿದೆ. ಆದರೆ, ಭ್ರೂಣವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಿಲ್ಲ ಎಂಬ ಕಾರಣದಿಂದ ಮೃತಳು ಗರ್ಭಧರಿಸಲು ತಾನು ಕಾರಣನಲ್ಲ” ಎಂಬ ಅಪರಾಧಿಯ ವಾದ ತಿರಸ್ಕರಿಸಿರುವ ನ್ಯಾಯಾಲಯವು “ಅಪರಾಧಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ಆದೇಶದಲ್ಲಿ ಯಾವುದೇ ದೋಷಗಳಿಲ್ಲ. ಹೀಗಾಗಿ, ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ” ಎಂದು ಅರ್ಜಿ ವಜಾಗೊಳಿಸಿದೆ.
ವಿಚಾರಣೆ ವೇಳೆ ಮೇಲ್ಮನವಿದಾರರ ಪರ ಹಿರಿಯ ವಕೀಲ ಸಿ ಆರ್ ಗೋಪಾಲಸ್ವಾಮಿ ಅವರು “ಮೃತ ಸಂತ್ರಸ್ತೆ ಪ್ರಜ್ಞೆ ತಪ್ಪಿ ಬೀಳುವವರೆಗೂ ಮೇಲ್ಮನವಿದಾರರ ವಿರುದ್ಧ ಸಂಶಯ ಬಂದಿರಲಿಲ್ಲ. ವೈದ್ಯಕೀಯ ದಾಖಲೆಗಳಲ್ಲಿ ಪ್ರಜ್ಞೆ ತಪ್ಪಿ ಮತ್ತೆ ಪ್ರಜ್ಞೆ ಬಂದಿದೆ ಎಂಬುದಾಗಿ ಹೇಳಿಲ್ಲ. ಆದರೆ, ಸಂತ್ರಸ್ತೆಯ ಪ್ರಜ್ಞೆ ತಪ್ಪಿಸುವುದಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಮೇಲ್ಮನವಿದಾರರ ವಿರುದ್ಧ ನೀಡಿರುವ ಹೇಳಿಕೆ ವೈದ್ಯಕೀಯ ದಾಖಲೆಗಳಲ್ಲಿ ವಿವರಿಸಿಲ್ಲ. ಸಂತ್ರಸ್ತೆ ಆರು ತಿಂಗಳ ಗರ್ಭಿಣಿ ಎಂಬುದಕ್ಕೂ ಸಾಕ್ಷ್ಯಾಧಾರಗಳಿಲ್ಲ” ಎಂದಿದ್ದರು.
“ಸಂತ್ರಸ್ತೆ ಗರ್ಭಿಣಿಯಾಗಲು ಮೇಲ್ಮನವಿದಾರರೇ ಕಾರಣ ಎಂಬುದಕ್ಕೆ ವಂಶವಾಹಿ ಸಾಕ್ಷ್ಯಗಳಿಲ್ಲ. ಈ ಸಂಬಂಧ ಸಂತ್ರಸ್ತೆ ಗರ್ಭವತಿಯಾಗುವವರೆಗೂ ದೂರು ನೀಡಿಲ್ಲ. ಆದರೆ, ಇಡೀ ಪ್ರಕರಣದಲ್ಲಿ ಸಂತ್ರಸ್ತೆ ಮೃತರಾದ ಬಳಿಕ ಆರೋಪ ಮಾಡಲಾಗಿದ್ದು, ಅರ್ಜಿದಾರ ಯಾವುದೇ ಹೇಳಿಕೆ ನೀಡದೆಯೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಶಿಕ್ಷೆ ವಿಧಿಸಿಸಲಾಗಿದೆ. ಆದ್ದರಿಂದ ಅರ್ಜಿದಾರರಿಗೆ ವಿಧಿಸಿರುವ ಶಿಕ್ಷೆ ರದ್ದುಗೊಳಿಸಬೇಕು” ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ರಶ್ಮಿ ಜಾಧವ್ ಅವರು “ಮೇಲ್ಮನವಿದಾರನು ಸಂತ್ರಸ್ತೆ ಮನೆಗೆ ಹೋಗಿ ಬಂದಿರುವುದು, ಸಂತ್ರಸ್ತೆ ಮರಣಪೂರ್ವ ಹೇಳಿಕೆಯಲ್ಲಿ ತಾನು ಗರ್ಭಧರಿಸಲು ಅಪರಾಧಿ /ಮೇಲ್ಮನವಿದಾರ ಕಾರಣ ಎಂದು ತಿಳಿಸಿದ್ದಾರೆ. ಇದೇ ಕಾರಣದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಅಂಶ ಸತ್ಯವಾಗಿದ್ದು, ಮೇಲ್ಮನವಿ ರದ್ದುಪಡಿಸಬೇಕು” ಎಂದು ಪೀಠಕ್ಕೆ ಕೋರಿದರು.
ಪ್ರಕರಣದ ಹಿನ್ನೆಲೆ: ಕೋಲಾರ ಜಿಲ್ಲೆಯವರಾದ ಮೇಲ್ಮನವಿದಾರ ಕೆಲಸ ಹುಡುಕುತ್ತಾ ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣದ ಬಿದಲಪುರದಲ್ಲಿರುವ ಸಂಬಂಧಿ ನರಸಿಂಹಪ್ಪ ಅವರ ಮನೆಗೆ ಬಂದಿದ್ದ. ನರಸಿಂಹಪ್ಪನವರ ಮಗಳೊಂದಿಗೆ ಅರ್ಜಿದಾರರ ಸಲುಗೆಯಿಂದಿದ್ದು, ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದರು.
ಮದುವೆ ಆಗುವುದನ್ನು ತಪ್ಪಿಸುವುದಕ್ಕಾಗಿ ಆಕೆಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿ ಕೀಟನಾಶಕವಾಗಿ ಬಳಸುವ ಮಾತ್ರೆಗಳನ್ನು ಆಕೆಗೆ 2010ರ ಮಾರ್ಚ್ 27ರಂದು ನೀಡಿದ್ದನು. ಇದು ನುಂಗಿ ಅಸ್ವಸ್ಥೆಯಾಗಿದ್ದ ಸಂತ್ರಸ್ತೆಯನ್ನು ಆಕೆಯ ಸಂಬಂಧಿಕರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಸಂದರ್ಭದಲ್ಲಿ ಪ್ರಜ್ಞೆಬಂದು, ಮೇಲ್ಮನವಿದಾರನೇ ತನ್ನ ಗರ್ಭಧಾರಣೆಗೆ ಕಾರಣ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ, ಮೇಲ್ಮನವಿದಾರರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಸಾಕ್ಷ್ಯಾಧಾರ ಪರಿಶೀಲಿಸಿದ್ದ ವಿಚಾರಣಾಧೀನ ನ್ಯಾಯಾಲಯ ಆರೋಪಿ ಮೇಲ್ಮನವಿದಾರರಿಗೆ 5 ವರ್ಷ ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು.