ಸರಳ ಪ್ರಕರಣಗಳಲ್ಲಿ ದೂರು ಸಲ್ಲಿಸುವುದು ವಿಳಂಬವಾದರೆ ಅದನ್ನೇ ನಿರ್ಣಾಯಕವಾಗಿ ಪರಿಗಣಿಸಲಾಗದು: ದಕ್ಷಿಣ ಕನ್ನಡ ನ್ಯಾಯಾಲಯ

ಸಿಗರೇಟು ಸೇದುವಂತೆ ಬಲವಂತಪಡಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರಾದ ಅಭಯ್ ಧನ್ಪಾಲ್ ಚೌಗಲ.
Dakshina Kannada Court Complex, Mangaluru
Dakshina Kannada Court Complex, Mangaluruworldorgs.com

ಘೋರ ಅಪರಾಧಗಳು ನಡೆದಿದ್ದಾಗ ಸೂಕ್ತ ಅವಧಿಯೊಳಗೆ ಪ್ರಥಮ ಮಾಹಿತಿ ದಾಖಲಿಸುವಲ್ಲಿ ವಿಳಂಬವಾದರೆ ಅದು ಪ್ರಾಸಿಕ್ಯೂಷನ್‌ ಪ್ರಕರಣಕ್ಕೆ ಮಾರಕ ಎಂದು ಪರಿಗಣಿಸಲಾಗುತ್ತದೆ. ಆದರೆ ಸರಳ ಪ್ರಕರಣಗಳಲ್ಲಿ 24 ಗಂಟೆಗಳಲ್ಲಿ ಪ್ರಥಮ ಮಾಹಿತಿ ಸಲ್ಲಿಸುವುದು ವಿಳಂಬವಾದರೆ ಅದನ್ನೇ ನಿರ್ಣಾಯಕವಾಗಿ ಪರಿಗಣಿಸಲಾಗದು ಎಂದು ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ (ವಿಶೇಷ) ನ್ಯಾಯಾಲಯ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ಸಬ್‌ ಡಿವಿಷನಲ್‌ ಪೊಲೀಸ್‌ ಅಧಿಕಾರಿ ಬಂಟ್ವಾಳ ಮತ್ತು ಎ ಚರಣ್‌ ಇನ್ನಿತರರ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ಸಿಗರೇಟು ಸೇದುವಂತೆ ಬಲವಂತಪಡಿಸಿ ಹಲ್ಲೆ ನಡೆಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನ್ಯಾಯಾಧೀಶರಾದ ಅಭಯ್‌ ಧನ್‌ಪಾಲ್‌ ಚೌಗಲ ಶಿಕ್ಷೆ ವಿಧಿಸಿದ್ದಾರೆ.

“ಸಣ್ಣ ಅಪರಾಧಗಳು ನಡೆದಿದ್ದಾಗ ಪೊಲೀಸ್‌ ಠಾಣೆಗೆ ತೆರಳಿ ಬಹುತೇಕ ವ್ಯಕ್ತಿಗಳು ದೂರು ದಾಖಲಿಸಲು ಬಯಸುವುದಿಲ್ಲ ಎಂಬ ಪ್ರವೃತ್ತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯಕ. ಬೇರೆ ರೀತಿಯಲ್ಲಿ ಹೇಳುವುದಾದರೆ ಅನಗತ್ಯವಾಗಿ ಪೊಲೀಸ್‌ ಠಾಣೆ ಮತ್ತು ನ್ಯಾಯಾಲಯಕ್ಕೆ ಆಗಾಗ ಅಲೆಯಬೇಕಾಗುತ್ತದೆ ಎಂಬ ಕಾರಣಕ್ಕೆ ಸಣ್ಣ ಅಪರಾಧಗಳ ಕುರಿತಂತೆ ದೂರು ದಾಖಲಿಸುವ ಸಲುವಾಗಿ ಪೊಲೀಸರನ್ನು ಸಂಪರ್ಕಿಸಲು ಸಾರ್ವಜನಿಕರು ಹಿಂಜರಿಯುತ್ತಾರೆ” ಎಂದು ನ್ಯಾಯಾಲಯ ತಿಳಿಸಿದೆ. ಹೀಗಾಗಿ ಪ್ರಸ್ತುತ ಪ್ರಕರಣದಲ್ಲಿ ದೂರು ದಾಖಲಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಆರೋಪಿಗಳನ್ನು ಖುಲಾಸೆಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.

ಘಟನೆಯ ವಿವರ…

ಪರಿಶಿಷ್ಟ ಜಾತಿಯೊಂದರ ಉಪಜಾತಿಯಾದ ನಳ್ಕೆ ಸಮುದಾಯಕ್ಕೆ ಸೇರಿದ ದೂರುದಾರ ಶಮಂತ್‌ ಮತ್ತು ಅವರ ಕಿರಿಯ ಸಹೋದರ ಸುಶಾಂತ್‌ ತಮ್ಮ ತಂದೆ ತಾಯಿಯೊಡನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುದ್ಮೇಲು ಎಂಬಲ್ಲಿ ವಾಸವಿದ್ದರು. ಘಟನೆ ನಡೆದಾಗ ಶಮಂತ್‌ ಅವರಿಗೆ 16 ವರ್ಷ. ಅವರ ಮನೆಗೆ ಮನೆಗೆ 16.05.2017ರಂದು ಬಂದ ನಾಲ್ವರು ಆರೋಪಿಗಳಾದ ಎ ಚರಣ್‌, ಅವಿನಾಶ್‌, ರೋಷನ್‌ ಹಾಗೂ ಶ್ರವಣ್‌ ಅಲಿಯಾಸ್‌ ಶ್ರಾವಣ್‌ ಅವರು ಕುಡಿಯಲು ನೀರು ಕೇಳಿದ್ದರು. ಶಮಂತ್‌ ಅವರ ಕಿರಿಯ ಸಹೋದರ ಸುಶಾಂತ್‌ ಮನೆ ಮುಂದೆ ನಿಂತಿದ್ದ ಆರೋಪಿಗಳಿಗೆ ನೀರು ಕೊಡಲು ತೆರಳಿದರು. ಹತ್ತು ನಿಮಿಷವಾದರೂ ತಮ್ಮ ಮರಳಿ ಬಾರದೇ ಇರುವುದನ್ನು ಕಂಡ ಶಮಂತ್‌ ಆತನನ್ನು ಹುಡುಕಿ ಹೊರಟರು.

ಆಗ ಮನೆಯ ಎದುರಿದ್ದ ಶಾಲೆಯೊಂದರ ಕಾಂಪೌಂಡ್‌ನಲ್ಲಿ ಆರೋಪಿಗಳಲ್ಲಿ ಶ್ರವಣ್‌ ಎಂಬಾತ ಒಂದು ಕೈಯಲ್ಲಿ ದೊಣ್ಣೆಯಿಂದ ಹೊಡೆಯುತ್ತಾ ಶಮಂತ್‌ಗೆ ಸಿಗರೇಟು ಸೇದುವಂತೆ ಬಲವಂತಪಡಿಸುತ್ತಿರುವುದು ಕಂಡುಬಂತು. ಆಗ ತನ್ನ ಸಹೋದರನನ್ನು ಬಿಡಿಸಲು ಯತ್ನಿಸಿದ ಶಮಂತ್‌ರನ್ನು ಹಿಡಿದು ಆರೋಪಿಗಳು ಅವರ ಪಾದಕ್ಕೆ ದೊಣ್ಣೆಯಿಂದ ಹೊಡೆದು ತಡೆದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಶಮಂತ್‌ ಮನೆಗೆ ತೆರಳಿ ತಾಯಿಯ ಬಳಿ ನಡೆದದ್ದನ್ನು ವಿವರಿಸಿದರು. ಇಬ್ಬರೂ ಮೈದಾನಕ್ಕೆ ತೆರಳಿದಾಗ ಅಲ್ಲಿ ದೊಣ್ಣೆಯನ್ನು ಎಸೆದು ಆರೋಪಿಗಳು ಹೊರಟು ಹೋಗಿರುವುದು ಕಂಡುಬಂತು. ಘಟನೆಯಲ್ಲಿ ಶಮಂತ್‌ ಹಾಗೂ ಸುಶಾಂತ್‌ ಇಬ್ಬರೂ ಗಾಯಗೊಂಡಿದ್ದರು. ಹೀಗಾಗಿ ಬಂಟ್ವಾಳದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅವರ ತಾಯಿ ಅವರನ್ನು ದಾಖಲಿಸಿದರು. ಬಳಿಕ ಘಟನೆಯ ಬಗ್ಗೆ ಸಂಬಂಧಿಕರೊಂದಿಗೆ ಚರ್ಚಿಸಿ, ಸಲಹೆ ಪಡೆದು ನಂತರ ಅಂದರೆ ಘಟನೆ ನಡೆದು 24 ಗಂಟೆಗಳು ಕಳೆದ ಬಳಿಕ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್‌ ಗಳಾದ 324, 341 ರೀಡ್‌ ವಿತ್‌ ಸೆಕ್ಷನ್‌ 34 ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ-1989ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ದೂರು ಸಲ್ಲಿಸುವುದು ವಿಳಂಬವಾಗಿರುವುದರಿಂದ ಅದೊಂದನ್ನೇ ಆಧರಿಸಿ ಆರೋಪಿಗಳನ್ನು ಖುಲಾಸೆಗೊಳಿಸಬೇಕು ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ ಆರೋಪಿಗಳು ತಪ್ಪಿತಸ್ಥರು ಎಂದು ಪರಿಗಣಿಸಿ ಐಪಿಸಿ ಸೆಕ್ಷನ್‌ 323ರ ಅಡಿ ಪ್ರತಿಯೊಬ್ಬರೂ ರೂ ತಲಾ ₹.1,000/­ ದಂಡ ಪಾವತಿಸಬೇಕು. ತಪ್ಪಿದಲ್ಲಿ ಒಂದು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು. ಅಲ್ಲದೆ ಐಪಿಸಿ ಸೆಕ್ಷನ್‌ 341ರ ಅಡಿ ಈ ಎಲ್ಲರೂ ₹.500/­- ದಂಡ ಪಾವತಿಸಬೇಕು. ತಪ್ಪಿದಲ್ಲಿ ಹದಿನೈದು ದಿನಗಳ ಸಾದಾ ಸಜೆ ಅನುಭವಿಸಬೇಕು ಎಂದಿತು. ಅಲ್ಲದೆ ನಂ. 2 ರಿಂದ 4ರವರೆಗಿನ ಆರೋಪಿಗಳು ಸೆಕ್ಷನ್ 3 (2) (va) ಅಡಿಯಲ್ಲಿ ತಲಾ ₹.1,000/- ದಂಡ ಪಾವತಿಸಬೇಕು. ಈ ದಂಡದ ಮೊತ್ತದಲ್ಲಿ ಶಮಂತ್‌ ಮತ್ತು ಸುಶಾಂತ್‌ ಅವರಿಗೆ ತಲಾ ₹.3,000/- ಪರಿಹಾರ ಒದಗಿಸಬೇಕೆಂದು ಆದೇಶಿಸಿತು.

Kannada Bar & Bench
kannada.barandbench.com