ಕ್ರಿಮಿನಲ್‌ ಪ್ರಕರಣದಲ್ಲಿ ಕಂಪೆನಿಯನ್ನು ಪ್ರತಿವಾದಿಯಾಗಿಸದೆ ಅದರ ನಿರ್ದೇಶಕರ ವಿಚಾರಣೆಗೆ ಒಳಪಡಿಸಲಾಗದು: ಹೈಕೋರ್ಟ್‌

ಅಟಿಕಾ ಗೋಲ್ಡ್ ಕಂಪೆನಿಯಲ್ಲಿ ಕಾರ್ಮಿಕರಿಗೆ ಸರಿಯಾದ ವೇತನ ನೀಡುತ್ತಿಲ್ಲ ಎಂಬ ದೂರು ಆಧರಿಸಿ ಸಂಸ್ಥೆಯ ನಿರ್ದೇಶಕರ ವಿರುದ್ಧ ಶಿವಮೊಗ್ಗದ ಕಾರ್ಮಿಕ ಅಧಿಕಾರಿ ನ್ಯಾಯಾಲಯದಲ್ಲಿ ಕನಿಷ್ಠ ವೇತನ ಕಾಯಿದೆ ಸೆಕ್ಷನ್‌ 25ರ ಅಡಿ ಪ್ರಕರಣ ದಾಖಲಿಸಿದ್ದರು.
Justice S Vishwajith Shetty and Karnataka High Court
Justice S Vishwajith Shetty and Karnataka High Court
Published on

ಕ್ರಿಮಿನಲ್ ಪ್ರಕರಣಗಳಲ್ಲಿ ಕಂಪೆನಿಯನ್ನು ಪ್ರತಿವಾದಿಯನ್ನಾಗಿ ಮಾಡದೇ ಅದರ ನಿರ್ದೇಶಕರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗದು ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌, ಕನಿಷ್ಠ ವೇತನ ಕಾಯಿದೆ ಉಲ್ಲಂಘನೆ ಅಪರಾಧ ಪ್ರಕರಣಗಳಲ್ಲಿ ಕಂಪೆನಿಯನ್ನೂ ಅಗತ್ಯ ಪ್ರತಿವಾದಿಯನ್ನಾಗಿ ಮಾಡಬೇಕು ಎಂದಿದೆ.

ತನ್ನ ವಿರುದ್ಧ ಶಿವಮೊಗ್ಗದ ಜೆಎಂಎಫ್‌ಸಿ ಎರಡನೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಪಿ ಪಿ ಸೈಯದ್‌ ಪಾಷ ಅಲಿಯಾಸ್ ಪಿ ಎಸ್ ಅಯೂಬ್‌ ಮತ್ತು ಸಮೀರ್ ಸುಲ್ತಾನಾ ಅಲಿಯಾಸ್ ಶಮೀಮ್‌ ಸುಲ್ತಾನಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರು ಅಟಿಕಾ ಗೋಲ್ಡ್ ಕಂಪೆನಿಯಲ್ಲಿ ನಿರ್ದೇಶಕರಾಗಿ ತಮ್ಮ ಹೊಣೆಗಾರಿಕೆ ನಿರ್ವಹಿಸಿದ್ದಾರೆ. ಅವರು ಕಂಪೆನಿಯ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಮೊದಲಿಗೆ ಕಂಪೆನಿಯನ್ನು ಪ್ರತಿವಾದಿಯನ್ನಾಗಿ ಮಾಡಬೇಕಾಗಿದೆ. ಕಂಪೆನಿಯನ್ನು ಪ್ರತಿವಾದಿಯನ್ನಾಗಿ ಮಾಡದೆ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದರೆ ಊರ್ಜಿತವಾಗುವುದಿಲ್ಲ ಎಂದು ಪೀಠ ಹೇಳಿದೆ. ಅರ್ಜಿದಾರರ ಪರ ಮೊಹಮದ್ ತಾಹೀರ್ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅಟಿಕಾ ಗೋಲ್ಡ್ ಕಂಪೆನಿಯಲ್ಲಿ ಕಾರ್ಮಿಕರಿಗೆ ಸರಿಯಾದ ವೇತನ ನೀಡುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಾರ್ಮಿಕ ಅಧಿಕಾರಿ ಸ್ಥಳೀಯ ನ್ಯಾಯಾಲಯದಲ್ಲಿ ಅದರ ನಿರ್ದೇಶಕರ ವಿರುದ್ಧ ಕನಿಷ್ಠ ವೇತನ ಕಾಯಿದೆ ಸೆಕ್ಷನ್‌ 25ರ ನಿಯಮ 7,9 ಹಾಗೂ 21ರ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಇದನ್ನು ವಿಚಾರಣೆಗೆ ಪರಿಗಣಿಸಿದ್ದ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿತ್ತು.

Attachment
PDF
P S Ayub Vs State of Karnataka.pdf
Preview
Kannada Bar & Bench
kannada.barandbench.com