ದೇಶದ ದೂರದ ಭಾಗಗಳಲ್ಲಿರುವ ವಕೀಲರುಗಳಿ ಸುಪ್ರೀಂ ಕೋರ್ಟ್ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಆನ್‌ಲೈನ್ ವಿಚಾರಣೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಶನಿವಾರ ಹೇಳಿದ್ದಾರೆ. ಸಹೋದ್ಯೋಗಿ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ ಆಡಳಿತ ವಿಭಾಗ ಕಟ್ಟಡದ ಶಂಕುಸ್ಥಾಪನೆ ಮತ್ತು ನಾಮಕ್ಕಲ್ ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿ ನ್ಯಾಯಾಲಯ ಕಟ್ಟಡ ಉದ್ಘಾಟನೆಯನ್ನು ನ್ಯಾಯಮೂರ್ತಿಗಳು ಶನಿವಾರ ನೆರವೇರಿಸಿ ಮಾತನಾಡಿದರು.
ಮಿಸಲೇನಿಯಸ್ ದಿನಗಳು ಅಂದರೆ ಸೋಮವಾರ ಮತ್ತು ಶುಕ್ರವಾರಗಳಂದು ವರ್ಚುವಲ್ ವಿಚಾರಣೆ ನಡೆಯಲಿದೆ. ನಾನ್- ಮಿಸಿಲೇನಿಯಸ್ ದಿನಗಳಲ್ಲೂ (ಮಂಗಳವಾರ, ಬುಧವಾರ ಮತ್ತು ಗುರುವಾರ) ವಕೀಲರು ನ್ಯಾಯಾಲಯದಿಂದ ಅನುಮತಿ ಪಡೆದು ಆನ್ಲೈನ್ ಮೂಲಕ ಹಾಜರಾಗಬಹುದು ಎಂದು ನ್ಯಾ. ರಮಣ ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯ ಏಪ್ರಿಲ್ 4, 2022 ರಿಂದ ಭೌತಿಕ ವಿಚಾರಣೆ ಪುನರಾರಂಭಿಸಿದ್ದರೂ ದಾವೆದಾರರು ಮತ್ತು ವಕೀಲರು ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ವರ್ಚುವಲ್ ವಿಧಾನದಲ್ಲಿ ಹಾಜರಾಗಲು ಈಗಲೂ ಅವಕಾಶ ಕಲ್ಪಿಸಲಾಗಿದೆ ಎಂದು ಸಿಜೆಐ ವಿವರಿಸಿದರು.
ಕೋವಿಡ್ ಸಂದರ್ಭದಲ್ಲಿ ಅಳವಡಿಸಿಕೊಂಡ ವರ್ಚುವಲ್ ವಿಧಾನದ ವಿಚಾರಣೆ ಭವಿಷ್ಯದಲ್ಲಿ ಭಾರತೀಯ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಸಂಘಗಳ ಬೆಂಬಲದೊಂದಿಗೆ ಎಲ್ಲೆಡೆ ಸಾಮಾನ್ಯವಾಗಲಿದೆ ಎಂದು ಭಾವಿಸುವೆ. ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರೊಂದಿಗೆ ಈ ಕುರಿತು ಸಮಾಲೋಚಿಸಿದ್ದೇನೆ ಎಂಬುದಾಗಿ ಅವರು ಹೇಳಿದರು.
ನ್ಯಾಯಾಂಗ ಮತ್ತು ವಕೀಲ ವೃತ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧ್ಯ ಒದಗಿಸುವ ಮಹತ್ವದ ಕುರಿತು ಅವರು ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆಯ ಭಾರತೀಕರಣದಲ್ಲಿ ಇಂತಹ ಒಳಗೊಳ್ಳುವಿಕೆ ಪ್ರಮುಖವಾದುದು. ಕೇವಲ ಮಹಿಳಾ ಪ್ರಾತಿನಿಧ್ಯ ಮಾತ್ರ ಸಾಕಾಗುವುದಿಲ್ಲ. ಸಾಮಾಜಿಕ ಭೌಗೋಳಿಕ ವೈವಿಧ್ಯತೆಯೂ ನ್ಯಾಯಾಂಗದಲ್ಲಿ ಪ್ರತಿಫಲಿಸಬೇಕು ಎಂದರು.
ಸಮಾಜದ ಅಂಚಿನಲ್ಲಿರುವ ಅಥವಾ ಗ್ರಾಮೀಣ ಸಮುದಾಯಗಳಿಗೆ ಸೇರಿದ ನ್ಯಾಯಾಧೀಶರು ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು ಎಂಬುದನ್ನು ಉದಾಹರಣೆಗಳ ಸಹಿತ ಅವರು ವಿವರಿಸಿದರು.
"ಪ್ರತಿಯೊಬ್ಬರಿಗೂ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯ ಇದ್ದು ಅವರು ಅದರ ಗಣನೀಯ ಭಾಗವಾಗಿರುತ್ತಾರೆ. ವ್ಯಕ್ತಿಗಳು, ಲಿಂಗತ್ವ, ಜನನ, ಅಸ್ಮಿತೆಗಳಾವುವೂ ತೊಡಕುಂಟು ಮಾಡದ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ,"ಎಂದು ಸಿಜೆಐ ಹೇಳಿದರು.
ಹೈಬ್ರಿಡ್ ವಿಚಾರಣೆಯ ವ್ಯವಸ್ಥೆಯನ್ನು ಮುಂದುವರೆಸುವುದು ಸದ್ಯಕ್ಕೆ ಭೌಗೋಳಿಕ ಮತ್ತು ಭಾಷಾ ಅಡೆತಡೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.