ಡಿಜಿಟಲ್‌ ಯುಗದಲ್ಲಿ ಮಹಿಳೆಗೆ ದೈಹಿಕ ಹಾನಿ ಮಾಡಬೇಕಿಲ್ಲ; ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ಹಾಕಿದರೆ ಸಾಕು: ಹೈಕೋರ್ಟ್‌

ಮಹಿಳೆಯೊಬ್ಬರ ಸಂಪರ್ಕ ಸಂಖ್ಯೆಯನ್ನು ಬೆಂಗಳೂರಿನ ಮೆಜೆಸ್ಟಿಕ್‌ ಶೌಚಾಲಯದ ಗೋಡೆಯಲ್ಲಿ ಬೆಲವೆಣ್ಣು ಎಂಬ ರೀತಿಯಲ್ಲಿ ಬಿಂಬಿಸಿ ಬರೆಯುವ ಮೂಲಕ ಆಕೆಯ ಘನತೆಗೆ ಹಾನಿ ಮಾಡಲಾಗಿದೆ ಎಂಬುದು ಆರೋಪ.
Justice M Nagaprasanna and Karnataka HC
Justice M Nagaprasanna and Karnataka HC
Published on

“ಇಂದಿನ ಡಿಜಿಟಲ್‌ ಯುಗದಲ್ಲಿ ಮಹಿಳೆಗೆ ದೈಹಿಕ ಹಾನಿ ಮಾಡಬೇಕಿಲ್ಲ; ಅವಹೇಳನಾಕಾರಿ ಹೇಳಿಕೆ, ಚಿತ್ರ ಅಥವಾ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ ಮಾಡಿದರೆ ಸಾಕು ಆಕೆಯ ಘನತೆಗೆ ತೀವ್ರ ಹಾನಿಯಾಗುತ್ತದೆ. ಅಂಥ ಪ್ರಕರಣಗಳ ರದ್ದು ಕೋರಿ ನ್ಯಾಯಾಲಯದ ಮುಂದೆ ಬಂದಾಗ ಅವುಗಳಲ್ಲಿ ಮಧ್ಯಪ್ರವೇಶಿಸಬಾರದು, ಬದಲಿಗೆ ಕಠಿಣ ಕ್ರಮಕೈಗೊಳ್ಳಬೇಕು” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಕಟುವಾಗಿ ನುಡಿದಿದೆ.

ಮಹಿಳೆಯೊಬ್ಬರ ಸಂಪರ್ಕ ಸಂಖ್ಯೆಯನ್ನು ಬೆಂಗಳೂರಿನ ಮೆಜೆಸ್ಟಿಕ್‌ ಶೌಚಾಲಯದ ಗೋಡೆಯಲ್ಲಿ ಬೆಲವೆಣ್ಣು ಎಂಬ ರೀತಿಯಲ್ಲಿ ಬಿಂಬಿಸಿ ಬರೆಯುವ ಮೂಲಕ ಆಕೆಯ ಘನತೆಗೆ ಹಾನಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಚಿತ್ರದುರ್ಗದ ಅಲ್ಲಾ ಬಕ್ಷ ಪಟೇಲ್‌ ಅಲಿಯಾಸ್‌ ಎ ಬಿ ಪಾಟೀಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

“ಮಹಿಳೆಯನ್ನು ರಾಕ್ಷಸೀ ರೀತಿಯಲ್ಲಿ ಬಿಂಬಿಸುವುದರ ಆಚೆಗೆ ಆಕೆಯ ವಿರುದ್ಧದ ಲೈಂಗಿಕ ದೌರ್ಜನ್ಯವು ಖಾಸಗಿ ಹಕ್ಕಿನ ಮೇಲಿನ ಮಧ್ಯಪ್ರವೇಶವಾಗಲಿದೆ. ಇದನ್ನು ಯಾವುದೇ ರೀತಿಯಲ್ಲೂ ಕಾನೂನಿನ ರೀತಿಯಲ್ಲಿದೆ ಎನ್ನಲಾಗದು. ಇದನ್ನು ಮಹಿಳೆಯನ್ನು ಆಘಾತಕಾರಿ ಅನುಭವಕ್ಕೆ ನೂಕಲಿದೆ. ಇಂಥ ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಾಗ ಅವುಗಳ ವಿರುದ್ಧ ಕಠಿಣ ನಿಲುವು ತಳೆಯಬೇಕು” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಮುಂದುವರಿದು, “ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸುವುದು ಭಿನ್ನ ಸನ್ನಿವೇಶ ಮತ್ತು ಅದು ಬೇರೆಯದೇ ಅಪರಾಧವಾಗುತ್ತದೆ. ಆದರೆ, ಸಂತ್ರಸ್ತೆಯ ಖಾಸಗಿತನದಲ್ಲಿ ಮಧ್ಯಪ್ರವೇಶ, ಆಕೆಯ ವೈಯಕ್ತಿಕ ಪ್ರಾಮಾಣಿಕತೆಯ ಮೇಲೆ ಗಂಭೀರವಾದ ಮನೋವೈಜ್ಞಾನಿಕ ಹಾನಿ ಉಂಟು ಮಾಡಲಿದೆ. ಇದು ಕೆಲ ಸಂದರ್ಭದಲ್ಲಿ ದೈಹಿಕ ಹಾನಿಗಿಂತ ಸಾಕಷ್ಟು ನೋವು ಉಂಟು ಮಾಡಬಹುದು. ಇದು ಮನಸಿನ ಮೇಲೆ ಕಲೆ ಉಳಿಯುವಂತೆ ಮಾಡುತ್ತದೆ. ಈ ನೆಲೆಯಲ್ಲಿ ಸಂಜ್ಞೆ, ಬರಹ ಅಥವಾ ಮಾತಿನ ಮೂಲಕ ಮಹಿಳೆಯ ವಿರುದ್ಧದ ಮಾನಹಾನಿ ಹೇಳಿಕೆಯು ನಿಸ್ಸಂಶಯವಾಗಿ ಮಹಿಳೆಯ ಘನತೆಯ ಹಾನಿಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಸಂಜ್ಞೇ ಅಪರಾಧದ ತನಿಖೆಗೆ ಅನುಮತಿಸುವಾಗ ಮ್ಯಾಜಿಸ್ಟ್ರೇಟ್‌ ನ್ಯಾಯಬದ್ಧವಾಗಿ ನಡೆದುಕೊಂಡಿಲ್ಲ ಎಂದು ಕಿಡಿಕಾರಿರುವ ಪೀಠವು “ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿರುವುದನ್ನು ನೋಡಿದರೆ ಇದು ಮಹಿಳೆಯ ಘನತೆಗೆ ಸಂಬಂಧಿಸಿದ ದೂರಾಗಿದೆ. ಠಾಣಾಧಿಕಾರಿ ಅಥವಾ ದೂರು ದಾಖಲಿಸಿರುವವರು ದೂರನ್ನು ಪರಿಶೀಲಿಸದೇ ಪ್ರಕರಣ ದಾಖಲಿಸಿದರೆ ಸಂತ್ರಸ್ತೆಯನ್ನು ಇಕ್ಕಟ್ಟಿಗೆ ಸಿಲುಕಿಸಲಾಗದು. ಸೂಕ್ತ ಸೆಕ್ಷನ್‌ ಅನ್ವಯಿಸಿ ಎಫ್‌ಐಆರ್‌ ದಾಖಲಿಸದೇ ಇರುವುದು ಪೊಲೀಸರ ಅವಿವೇಕತನವಾಗಿದ್ದು, ಇದರಿಂದ ಸಂತ್ರಸ್ತೆ ಯಾತನೆ ಅನುಭವಿಸುವಂತೆ ಮಾಡಲಾಗದು. ಇದೇ ಮಾತುಗಳು ಮ್ಯಾಜಸ್ಟ್ರೇಟ್‌ ಆದೇಶದಕ್ಕೆ ಅನ್ವಯಿಸುತ್ತದೆ. ಅನುಮತಿಸಲಾಗಿದೆ ಎನ್ನುವ ಮೂಲಕ ಪ್ರಕರಣ ದಾಖಲಿಸಲು ಮ್ಯಾಜಿಸ್ಟ್ರೇಟ್‌ ಒಪ್ಪಿಗೆ ಸೂಚಿಸಿದ್ದಾರೆ. ಹಲವು ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ಪರಿಶೀಲಿಸದೇ ಸಂತ್ರಸ್ತರ ಬದುಕಿನ ಜೊತೆ ಆಟವಾಡಬಾರದು ಎಂದು ಮ್ಯಾಜಿಸ್ಟ್ರೇಟ್‌ಗಳಿಗೆ ಹೈಕೋರ್ಟ್‌ ಎಚ್ಚರಿಸಿದೆ. ಮ್ಯಾಜಿಸ್ಟ್ರೇಟ್‌ ಅವರು ಸರಿಯಾದ ರೀತಿಯಲ್ಲಿ ಪ್ರಕರಣ ನಿರ್ಧರಿಸದೇ ಇರುವುದರಿಂದ ಸಂತ್ರಸ್ತೆಗೆ ಹಾನಿಯಾಗಿರುವ ಮತ್ತೊಂದು ಮಹತ್ವದ ಪ್ರಕರಣ ಇದಾಗಿದೆ” ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ತಮ್ಮ ಸಂಪರ್ಕ ಸಂಖ್ಯೆಯನ್ನು ಮೇಲಾಧಿಕಾರಿಗಳಿಗೆ ನೀಡಿದ್ದರು. ಹಗಲು-ರಾತ್ರಿ ಎನ್ನದೇ ಹಲವರು ಆಕೆಯ ಸಂಖ್ಯೆಗೆ ಕರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದರು. ಕರೆ ಮಾಡಿದವರಿಗೆ ತಮ್ಮ ನಂಬರ್‌ ಎಲ್ಲಿ ಸಿಕ್ಕಿತು ಎಂದು ಪರಿಶೀಲಿಸಲಾಗಿ ಆ ಸಂಖ್ಯೆಯು ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಶೌಚಾಲಯದಲ್ಲಿ ಬೆಲೆವೆಣ್ಣು (ಕಾಲ್‌ ಗರ್ಲ್‌) ಎಂದು ಬರೆದಿತ್ತು ಎಂಬ ಅಂಶ ಆಕೆಗೆ ತಿಳಿದಿತ್ತು. ಇದರ ಆಧಾರದಲ್ಲಿ ಸಂತ್ರಸ್ತ ಮಹಿಳಾ ಸಿಬ್ಬಂದಿಯು ತನ್ನ ಜೊತೆಗಿರುವ ಅಥವಾ ತನಗೆ ಪರಿಚಿತರಾದ ಯಾರೋ ಈ ಕೃತ್ಯ ಎಸಗಿದ್ದು, ಇದರ ತನಿಖೆ ನಡೆಸಬೇಕು ಎಂದು ಕೋರಿದರು. ಈ ಸಂಬಂಧ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಅಲ್ಲಾಬಕ್ಷ ಪಾಟೀಲ್‌ ವಿರುದ್ಧ ಐಪಿಸಿ ಸೆಕ್ಷನ್‌ 501, 504, 507 ಮತ್ತು 509ರ ಅಡಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಇದರ ರದ್ದುಕೋರಿ ಅಲ್ಲಾಬಕ್ಷ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರವಾಗಿ ವಕೀಲ ಎನ್‌ ತೇಜಸ್‌, ಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌, ದೂರುದಾರೆಯ ಪರವಾಗಿ ಆರ್‌ ಗೋಪಾಲ ಕೃಷ್ಣನ್‌ ಅವರು ವಾದಿಸಿದ್ದರು.

Kannada Bar & Bench
kannada.barandbench.com