ಕೋವಿಡ್ ಅವಧಿಯಲ್ಲಿ ನಡೆದ ಲೋಕ ಅದಾಲತ್‌ಗೆ ವಿಶೇಷ ಮಹತ್ವವಿದೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ

ʼಸೆಪ್ಟೆಂಬರ್‌ ಅದಾಲತ್‌ನಲ್ಲಿ 1,15,013 ಪ್ರಕರಣಗಳನ್ನು ವಿಲೇವಾರಿಯಾಗಿದೆ. ಪ್ರಸ್ತುತ ವಿವಿಧ ಜಿಲ್ಲೆಗಳ ಲೋಕ ಅದಾಲತ್ ಎದುರು 3,18,000ಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಕ್ಕೆ ಕಾದಿವೆ,ʼ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಮಾಹಿತಿ ನೀಡಿದರು.
Chief Justice Abhay S Oka
Chief Justice Abhay S OkaImage credit: Akhil Maharashtra Giryarohan Mahasangh

ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಡೆದ ಲೋಕ್‌ ಅದಾಲತ್‌ಗಳಿಗೆ ವಿಶೇಷ ಮಹತ್ವವಿದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‌/ ಇ-ಲೋಕ‌ ಅದಾಲತ್‌ ವರ್ಚುವಲ್‌ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕೋವಿಡ್‌ ಸಾಂಕ್ರಾಮಿಕ ದಾಳಿಯನ್ನು ಲೆಕ್ಕಿಸದೆ ವಲಸೆ ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡಲು ರಾಜ್ಯ ನ್ಯಾಯಾಂಗಕ್ಕೆ ಸೇರಿದ ವಿವಿಧ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದವು. ಹೈಕೋರ್ಟ್‌ನ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆಯಲು ಕೆಎಸ್‌ಬಿಸಿ, ಬೆಂಗಳೂರು ವಕೀಲರ ಸಂಘ ರೀತಿಯ ಸಂಸ್ಥೆಗಳು ಸಾಕಷ್ಟು ಶ್ರಮವಹಿಸಿವೆ” ಎಂದು ಅವರು ಶ್ಲಾಘಿಸಿದರು.

Inauguration of Lok Adalat
Inauguration of Lok Adalat

“ಅಂತಹ ಸಂಸ್ಥೆಗಳ ಶ್ರಮದ ಫಲವಾಗಿ ಕಳೆದ ಬಾರಿ ದೊಡ್ಡ ಮಟ್ಟದಲ್ಲಿ ಪ್ರಕರಣಗಳನ್ನು ನಿರ್ವಹಿಸಲು ಸಾಧ್ಯವಾಯಿತು. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಹೈಕೋರ್ಟ್‌ ಕಾನೂನು ಸೇವಾ ಸಮಿತಿಯ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ. ಅದರಲ್ಲಿಯೂ ಅದಾಲತ್‌ನಲ್ಲಿ ಪಾಲ್ಗೊಂಡ ಉತ್ಸಾಹಿ ವಕೀಲರಿಗೆ ಅಭಿನಂದನೆಗಳು. ಅವರ ಸಹಕಾರದ ಫಲವಾಗಿ ದೊಡ್ಡ ಸಂಖ್ಯೆಯ ಪ್ರಕರಣಗಳು ಇತ್ಯರ್ಥಗೊಂಡಿವೆ” ಎಂದು ಅವರು ಹೇಳಿದರು.

“ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಡೆದ ಲೋಕ‌ ಅದಾಲತ್‌ಗಳಿಗೆ ವಿಶೇಷ ಮಹತವಿದೆ. ಈ ಹಿಂದೆ ದೊಡ್ಡ ಮಟ್ಟದಲ್ಲಿ ಅಪಘಾತ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು. ಇದಕ್ಕೆ ಕಾರಣ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ನ್ಯಾಯಾಲಯಗಳಿಗೆ ಸಾಕ್ಷ್ಯಗಳ ದಾಖಲೀಕರಣ ಸಾಧ್ಯವಾಗಿರಲಿಲ್ಲ. ನ್ಯಾಯಾಲಯಗಳು ಸಾಮಾನ್ಯ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರೆ ಅಂತಹ ಪ್ರಕರಣಗಳಲ್ಲಿ ಇದಕ್ಕಿಂತಲೂ ಮೊದಲೇ ಪರಿಹಾರ ದೊರೆಯುತ್ತಿತ್ತು” ಎಂದು ಅಭಿಪ್ರಾಯಪಟ್ಟರು.

J. Oka
J. Oka

“ಹಾಗೆ ಪ್ರಕರಣಗಳು ಬಾಕಿ ಉಳಿದಿರುವವರಿಗೆ ಲೋಕ ಅದಾಲತ್‌ ಪ್ರಮುಖ ಘಟನೆಯಾಗಲಿದೆ. ಈ ಬಾರಿ ಭೂಸ್ವಾಧೀನ, ಮೋಟಾರ್‌ ವಾಹನ ಕಾಯಿದೆ ಪ್ರಕರಣಗಳಂತಹ ಕಾರ್ಯಕಾರಿ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದೇವೆ. ಇದಲ್ಲದೆ ಇಂತಹ ವಿವಿಧ ಪ್ರಕರಣಗಳನ್ನು ಕೂಡ ಇತ್ಯರ್ಥಪಡಿಸುವ ಗುರಿ ಇರಿಸಿಕೊಳ್ಳಲಾಗಿದೆ” ಎಂದು ಹೇಳಿದರು.

"ಸೆಪ್ಟೆಂಬರ್‌ನಲ್ಲಿ ಇಂಥದ್ದೇ ಇ ಲೋಕ‌ ಅದಾಲತ್‌ ಆಯೋಜಿಸಲಾಗಿತ್ತು. 1,15,013 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿತ್ತು. ಪ್ರಸ್ತುತ ವಿವಿಧ ಜಿಲ್ಲೆಗಳ ಲೋಕ ಅದಾಲತ್‌ ಎದುರು 3,18,000ಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಕ್ಕೆ ಕಾದಿವೆ" ಎಂದು ಅವರು ತಿಳಿಸಿದರು.

ASG M B Naragund
ASG M B Naragund

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್ ಅವರು ಮಾತನಾಡಿ “ವ್ಯಾಜ್ಯಕ್ಕಾಗಿ ನೂರಾರು ಕಾರಣಗಳಿರುತ್ತವೆ. ಆದರೆ ರಾಜಿ ಸಂಧಾನಕ್ಕಾಗಿ ಸೂಕ್ತವಾದ ಒಂದು ಕಾರಣವಂತೂ ಇದ್ದೇ ಇರುತ್ತದೆ. ಸಮಾಜದಲ್ಲಿನ ಬುದ್ಧಿವಂತರು ರಾಜಿ ಸಂಧಾನಕ್ಕೆ ಇರುವ ಒಂದು ಕಾರಣ ವ್ಯಾಜ್ಯಕ್ಕಿರುವ ನೂರಾರು ಕಾರಣಗಳಿಗಿಂತ ಉತ್ತಮ ಎಂದು ಅರಿತಿರುತ್ತಾರೆ. ಲೋಕ ಅದಾಲತ್ ಅವಕಾಶವನ್ನು ಪ್ರಕರಣಗಳ ಇತ್ಯರ್ಥಕ್ಕೆ ಉಪಯೋಗಿಸಿಕೊಂಡು ನ್ಯಾಯದ ನಿರೀಕ್ಷೆಯಲ್ಲಿರುವ ಜನರ ಕಣ್ಣಿರು ಒರೆಸಬೇಕು” ಎಂದರು.

“ರಾಜ್ಯ ಸರ್ಕಾರ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿವಿಧ ಸವಲತ್ತುಗಳನ್ನು ಒದಗಿಸುತ್ತಿದೆ. ಆದರೆ ನ್ಯಾಯಿಕ ವರ್ಗಕ್ಕೆ ಸೇರಿದವರು ಮತ್ತು ದಾವೆದಾರರು ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ ಹೋದರೆ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಸಾಧ್ಯವಾಗದು,” ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ, ಅರವಿಂದ ಕುಮಾರ್‌, ನ್ಯಾ ಅಲೋಕ್‌ ಅರಾಧೆ, ಎಸ್‌ ಸುಜಾತಾ, ಬಿ ವೀರಪ್ಪ, ಜಿ ನರೇಂದರ್‌, ಜಾನ್‌ ಮೈಕಲ್‌ ಕುನ್ಹಾ, ಎಸ್‌ ಜಿ ಪಂಡಿತ್‌, ಸುನಿಲ್‌ ದತ್‌ ಯಾದವ್‌ ಮತ್ತಿತರರು ಪಾಲ್ಗೊಂಡಿದ್ದರು.

ಅಡ್ವೊಕೋಟ್‌ ಜನರಲ್‌ ಪ್ರಭುಲಿಂಗ ಕೆ ನಾವದಗಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಜೆ ಎಂ ಅನಿಲ್‌ ಕುಮಾರ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎ ಪಿ ರಂಗನಾಥ್‌, ಸಹಾಯಕ ಸಾಲಿಸಿಟರ್‌ ಜನರಲ್‌ ಸಿ ಶಶಿಕಾಂತ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com